ADVERTISEMENT

ಪೂಜೆಗೆ ಸಿದ್ಧನಾಗುತ್ತಿದ್ದಾನೆ ಪಿಒಪಿ ಗಣಪ

ಕಣ್ಮುಚ್ಚಿಕೊಂಡು ಕುಳಿತಿದೆ ಮಾಲಿನ್ಯ ನಿಯಂತ್ರಣ ಮಂಡಳಿ: ಪರಿಸರ ಪ್ರೇಮಿಗಳ ಆಕ್ರೋಶ

ಆರ್‌.ಜೆ.ಯೋಗಿತಾ
Published 21 ಜುಲೈ 2017, 20:39 IST
Last Updated 21 ಜುಲೈ 2017, 20:39 IST
ಪೂಜೆಗೆ ಸಿದ್ಧನಾಗುತ್ತಿದ್ದಾನೆ ಪಿಒಪಿ ಗಣಪ
ಪೂಜೆಗೆ ಸಿದ್ಧನಾಗುತ್ತಿದ್ದಾನೆ ಪಿಒಪಿ ಗಣಪ   

ಬೆಂಗಳೂರು: ನಗರದಲ್ಲಿ ಸದ್ದಿಲ್ಲದೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳು ತಯಾರಾಗುತ್ತಿವೆ. ಈ ಬಗ್ಗೆ ಮಾಹಿತಿ ಇದ್ದರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)  ಕಣ್ಮುಚ್ಚಿಕೊಂಡು ಕುಳಿತಿದೆ.

ಪ್ರತಿವರ್ಷವೂ ಹಬ್ಬ ಸಮೀಪವಿದ್ದಾಗ ಪಿಒಪಿ ಗಣೇಶ ಮೂರ್ತಿಗಳ ಮೇಲೆ ಮಂಡಳಿ ನಿಷೇಧ ಹೇರುತ್ತಿತ್ತು. ಆದರೆ, ಈ ವರ್ಷ ಆರು ತಿಂಗಳು ಮುಂಚಿತವಾಗಿಯೇ ಪಿಒಪಿ ಮೂರ್ತಿಗಳನ್ನು ನಿಷೇಧಿಸಿ, ಆದೇಶ ಹೊರಡಿಸಿತ್ತು. 

ಆದರೆ, ಇದಕ್ಕೆ ಅನೇಕ ಗಣೇಶ ಉತ್ಸವ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿವೆ. ‘ಸರ್ಕಾರಿ ಆದೇಶ ಏನೇ ಇದ್ದರೂ ಮೂರ್ತಿ ಇಡುವುದು ಖಂಡಿತ’ ಎಂದು ಹೇಳಿವೆ. ಹಾಗಾಗಿ ಈ ವರ್ಷದ ಗಣೇಶ ಹಬ್ಬದಲ್ಲಿಯೂ ಭಾರಿ ಗಾತ್ರದ ಪಿಒಪಿ ಗಣೇಶ ಮೂರ್ತಿಗಳು ನಗರದಲ್ಲಿ ರಾರಾಜಿಸಲಿವೆ.

ADVERTISEMENT

ಗಣೇಶ ವಿಗ್ರಹಗಳ ತಾಣ ಎಂದೇ ಕರೆಯಲಾಗುವ ಆರ್‌.ವಿ ರಸ್ತೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳು ಈಗಲೂ ಕಾಣಸಿಗುತ್ತವೆ. ಇಲ್ಲಿನ ಗೋದಾಮುಗಳಲ್ಲಿ ಮೂರ್ತಿಗಳನ್ನು ಸಾಲು ಸಾಲಾಗಿ ಜೋಡಿಸಲಾಗಿದೆ. ಹಿಂದಿನ ವರ್ಷ ತಯಾರಿಸಿದ ನೂರಾರು ಬೃಹತ್‌ ಮೂರ್ತಿಗಳೂ ಇಲ್ಲಿವೆ.

‘ಸರ್ಕಾರ ಏನೇ ಆದೇಶ ನೀಡಿದ್ದರೂ ಈ ವರ್ಷದ ಗಣೇಶ ಹಬ್ಬಕ್ಕೆ ನಾವು ಪಿಒಪಿ ಗಣೇಶ ಮೂರ್ತಿಗಳನ್ನೇ ಇಡುತ್ತೇವೆ. ಕಳೆದ ವರ್ಷ ಇಟ್ಟಿದ್ದ ಮೂರ್ತಿಗಳಿಗಿಂತ ಎರಡು ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಇಟ್ಟು ಉತ್ಸವ ಮಾಡುತ್ತೇವೆ’ ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಗಳ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ್‌ ರಾಜು ತಿಳಿಸಿದರು.

‘ಸಾರ್ವಜನಿಕ ಗಣೇಶ ಉತ್ಸವದ ಆಚರಣೆಗೆ ನಿರ್ಬಂಧ ಹೇರಿ ಹಿಂದೂ ಹಬ್ಬಗಳನ್ನು ನಾಶ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಾಗಾವರದಲ್ಲಿನ ಡಾ. ರಾಜ್‌ಕುಮಾರ್‌ ಕನ್ನಡ ಅಭಿಮಾನಿಗಳ ಸಂಘ ಹಾಗೂ ವಿಜಯನಗರದ ಕ್ಷೇಮಾಭಿವೃದ್ಧಿ ಸಂಘಗಳು ಪ್ರತಿ ವರ್ಷ 15ರಿಂದ 18 ಅಡಿ ಗಣೇಶ ಮೂರ್ತಿಗಳನ್ನು ಕೂರಿಸುತ್ತಿದ್ದವು. ಈ ಬಾರಿ ಪ್ರತಿಭಟನೆಯ ರೂಪವಾಗಿ 25 ಅಡಿ  ಎತ್ತರದ  ಮೂರ್ತಿ ಇಡುತ್ತಾರೆ’ ಎಂದು ಹೇಳಿದರು.

‘ನಮ್ಮ ಹೋರಾಟವನ್ನು ನಗರದಲ್ಲಿರುವ ಸುಮಾರು ಒಂದು ಸಾವಿರ ಗಣೇಶ ಸಮಿತಿಗಳು ಬೆಂಬಲಿಸಿವೆ. ನಮಗೆ ಬೇಕಾದ ಆಕಾರದ ಪಿಒಪಿ ಗಣೇಶ ಮೂರ್ತಿಗಳು ಈಗಾಗಲೇ ಗೋದಾಮುಗಳಲ್ಲಿ ತಯಾರಾಗುತ್ತಿವೆ. ಹೊರ ರಾಜ್ಯಗಳಿಂದಲೂ ಮೂರ್ತಿಗಳನ್ನು ಖರೀದಿಸಿ ತರಿಸುತ್ತಿದ್ದೇವೆ. ಪ್ರತಿವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಉತ್ಸವಮಾಡುತ್ತೇವೆ’ ಎಂದರು.

ಕಣ್ಮುಚ್ಚಿಕೊಂಡಿದೆ ಮಾಲಿನ್ಯ ನಿಯಂತ್ರಣ ಮಂಡಳಿ: ‘ಮಂಡಳಿ ಆದೇಶಗಳನ್ನು ನೀಡಲು ಮಾತ್ರ ಸೀಮಿತವಾಗಿದೆ. ಅದು ಕಣ್ಣೊರೆಸುವ ತಂತ್ರ. ಈಗಾಗಲೇ ವಶಪಡಿಸಿಕೊಂಡಿದ್ದೇವೆ ಎನ್ನುವ ವಿಗ್ರಹಗಳನ್ನು ಏನು ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಗಣೇಶ ಮೂರ್ತಿ ತಯಾರಿಕೆ ಹಿಂದಿರುವ ವರ್ತಕರ ಲಾಬಿ ತಿಳಿದಿದ್ದರೂ ಕಠಿಣ ಕ್ರಮ ಕೈಗೊಳ್ಳಲು ಮಂಡಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನದ ರಾಜ್ಯ ಸಂಚಾಲಕ ಈಶ್ವರಪ್ಪ ಮಡಿವಾಳಿ ದೂರಿದರು.

‘ನಗರದಲ್ಲಿ ಯಾವುದೇ ರೀತಿಯ ಮಾಲಿನ್ಯ ತಡೆಗಟ್ಟಲೂ ಮಂಡಳಿಗೆ ಆಗುತ್ತಿಲ್ಲ. ಪತ್ರಗಳ ವ್ಯವಹಾರಕ್ಕೆ ಮಾತ್ರ ಅದು ಸೀಮಿತವಾಗಿದೆ. ನಗರದ ಕೆರೆಗಳು ಯಾವ ಸ್ಥಿತಿಯಲ್ಲಿವೆ ಎಂಬ ಸಣ್ಣ ಮಾಹಿತಿಯೂ ಅಧಿಕಾರಿಗಳಿಗೆ ಇಲ್ಲ’ ಎಂದು ಹೇಳಿದರು.

ಸಿಗಲಿಲ್ಲ: ಈ ಕುರಿತು ಪ್ರತಿಕ್ರಿಯೆ ಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ಕರೆ ಮಾಡಿದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಆರು ವರ್ಷದವರೆಗೆ ಜೈಲು ಶಿಕ್ಷೆ

1974ರ ಜಲ ಕಾಯ್ದೆಯ 33ಎ ಕಲಂನಲ್ಲಿ ಹೇಳಿರುವ ಸೂಚನೆಯ ಅನ್ವಯ ಮಂಡಳಿ, ಪಿಒಪಿ ಗಣೇಶ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸಿದರೆ ಆರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬ ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆ ಉಲ್ಲಂಘಿಸುವವರು ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ. ಆರೋಪ ಸಾಬೀತಾದರೆ ಕನಿಷ್ಠ ಒಂದೂವರೆ ವರ್ಷದಿಂದ 6 ವರ್ಷದವರೆಗೆ ಜೈಲು ಶಿಕ್ಷೆ ಜತೆಗೆ ದಂಡ ಪಾವತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.