ADVERTISEMENT

ಪ್ರವಾಸಿಗರ ಶೌಚಬಾಧೆಗೆ ಸಿಗಲಿದೆ ಮುಕ್ತಿ

ಕಬ್ಬನ್‌ ಉದ್ಯಾನದಲ್ಲಿ ಶೌಚಾಲಯಗಳ ನಿರ್ಮಾಣ

ಸುನಿಲ್‌ ಕುಮಾರ್‌
Published 3 ಮಾರ್ಚ್ 2015, 19:28 IST
Last Updated 3 ಮಾರ್ಚ್ 2015, 19:28 IST
ಪ್ರವಾಸಿಗರ ಶೌಚಬಾಧೆಗೆ ಸಿಗಲಿದೆ ಮುಕ್ತಿ
ಪ್ರವಾಸಿಗರ ಶೌಚಬಾಧೆಗೆ ಸಿಗಲಿದೆ ಮುಕ್ತಿ   

ಬೆಂಗಳೂರು: ನಗರದ ಕಬ್ಬನ್‌ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಉದ್ಯಾನದ ಮೂರು ಕಡೆ ನೂತನವಾಗಿ ಮೂರು ಶೌಚಾಲಯಗಳು ತಲೆ ಎತ್ತುತ್ತಿವೆ. ಶೌಚಾಲಯ ವ್ಯವಸ್ಥೆ ಇಲ್ಲದೆ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಪರದಾಡುವಂತಾಗಿತ್ತು. ಇದೀಗ ಶೌಚಾಲಯಗಳ  ನಿರ್ಮಾಣದಿಂದ ಪ್ರವಾಸಿಗರಿಗೆ ಪ್ರಯೋಜನವಾಗಲಿದೆ. ಕಬ್ಬನ್‌ ಉದ್ಯಾನ ಸುಮಾರು 192 ಎಕರೆ ವಿಸ್ತೀರ್ಣವಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿ­ಗರು ಕುಟುಂಬ ಸಮೇತ ಭೇಟಿ ನೀಡು­ತ್ತಾರೆ.

ಉದ್ಯಾನದ ಹಡ್ಸನ್‌ ವೃತ್ತದ ಭಾಗದಲ್ಲಿ ಹಾಗೂ ಹೈಕೋರ್ಟ್‌ ಹಿಂಭಾಗದಲ್ಲಿ ಮಾತ್ರ ಶೌಚಾಲಯಗಳಿವೆ.  ಇತರೆ ಭಾಗಗಳಲ್ಲಿ ಶೌಚಾ­ಲಯ  ಇಲ್ಲ.  ಹೀಗಾಗಿ ಪ್ರವಾಸಿಗರು ಶೌಚಬಾಧೆ­ಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಸಂಬಂಧ ಪ್ರವಾಸಿಗರು ತೋಟಗಾರಿಕೆ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರು. ಈ ಸಮಸ್ಯೆಯನ್ನು  ಸರ್ಕಾರದ ಗಮನಕ್ಕೆ ತಂದ ತೋಟ­ಗಾರಿಕೆ ಇಲಾಖೆ ಅಧಿಕಾರಿಗಳು, ಸಚಿವರ ಸಲಹೆ ಮೇರೆಗೆ ಉದ್ಯಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಟೆಂಡರ್‌ ಕರೆಯಲು ನಿರ್ಧರಿಸಿದ್ದರು.

ಈ ನಡುವೆ ಫಿನಿಕ್ಸ್‌ ಕ್ಯಾಬಿನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯು ಉಚಿತವಾಗಿ ಉದ್ಯಾನದ ಮೂರು ಕಡೆ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ. ‘ಕೆ.ಆರ್‌.ವೃತ್ತ, ಸಿದ್ದಲಿಂಗಯ್ಯ ವೃತ್ತ ಹಾಗೂ ಬಾಲಭವನ ಪ್ರವೇಶದ್ವಾರದ ಮುಂದೆ ಶೌಚಾ­ಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಬಾಲಭವನ ಮುಂಭಾಗದಲ್ಲಿ ಶೌಚಾ­ಲಯ ನಿರ್ಮಾಣಗೊಂಡಿದ್ದು,  ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುತ್ತದೆ’ ಎಂದು ಫಿನಿಕ್ಸ್‌ ಕ್ಯಾಬಿನ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಶೌಚಾಲಯದ ನಿರ್ಮಾಣಕ್ಕೆ ಸುಮಾರು 10 ಲಕ್ಷ ವೆಚ್ಚವಾಗಲಿದೆ. ತಿಂಗಳಿಗೆ ಶೌಚಾ­ಲಯದ ನಿರ್ವಹಣೆಗಾಗಿ 20 ರಿಂದ 25 ಸಾವಿರ ಖರ್ಚಾಗಲಿದ್ದು, ಎಲ್ಲಾ ವೆಚ್ಚವನ್ನು  ಕಂಪೆನಿ ಭರಿಸಲಿದೆ’ ಎಂದು ಹೇಳಿದರು.  ‘ಶೌಚಾಲಯವನ್ನು ಫ್ರಿ ಫ್ಯಾಬ್ರಿಕ್‌ನಿಂದ ನಿರ್ಮಿಸಲಾಗಿದ್ದು, ದೀರ್ಘಬಾಳಿಕೆಗೆ ಯೋಗ್ಯವಾ­ಗಿದೆ. ಜತೆಗೆ ನಿರ್ವಹಣಾ ಕಾರ್ಯ ಸಹ ಸುಲಭ. ಕಂಪೆನಿಯಿಂದ ಶೌಚಾಲಯದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಬಾಲಭವನದ ಮುಂದಿನ ಶೌಚಾಲಯದ ಸಾಧಕ ಬಾಧಕಗಳನ್ನು ಪರಿಶೀಲಿಸಿ ಕೆ.ಆರ್.ವೃತ್ತ ಹಾಗೂ ಸಿದ್ದಲಿಂಗಯ್ಯ ವೃತ್ತದಲ್ಲಿ ಶೌಚಾಲಯ­ಗಳನ್ನು ನಿರ್ಮಿಸಲಾಗುವುದು.  ತೋಟಗಾರಿಕೆ ಇಲಾಖೆ ಹಾಗೂ ಬಿಬಿಎಂಪಿಯು ಅನುಮತಿ ನೀಡಿದರೆ ನಗರದಾದ್ಯಂತ 200 ಶೌಚಾಲಯ­ಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿ­ದ್ದೇವೆ’  ಎಂದರು.

ಶೌಚಾಲಯದ ವಿಶೇಷತೆ
ಶೌಚಾಲಯದ ಸುತ್ತಲೂ ‘ಕ್ಯಾನಾ’ ಹಾಗೂ ‘ಸೈಕಸ್‌’ ಎಂಬ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ.  ಶೌಚಾಲಯದಿಂದ ಬರುವ ಮೂತ್ರದ ವಾಸನೆಯನ್ನು ರಾಸಾಯನಿಕಗಳಿಂದ ನಿವಾರಿಸಿ ಪೈಪ್‌ ಮೂಲಕ ನೇರವಾಗಿ ಗಿಡಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ದರ ನಿಗದಿ
ಉಚಿತವಾಗಿ ಶೌಚಾಲಯಗಳನ್ನು ನಿರ್ಮಿಸಿ­ಕೊಡಲು ಮುಂದಾಗಿರುವ ಕಂಪೆನಿಗೆ ಇಲಾ­ಖೆ ಸಹಕಾರ ನೀಡಿದೆ. ಕಂಪೆನಿಯು ಶೌಚಾಲಯ ನಿರ್ಮಿಸಿ ಕೊಡುವುದರ ಜತೆಗೆ ಇಲಾಖೆಗೆ ಪ್ರತಿ ತಿಂಗಳು  1 ಸಾವಿರ ಪಾವತಿಸಲಿದೆ. ಮೂತ್ರ ವಿಸರ್ಜನೆಗೆ  1 ಮತ್ತು ಮಲ ವಿಸರ್ಜನೆಗೆ  2 ದರ ನಿಗದಿಪಡಿಸಲಾಗಿದೆ. – ಮಹಾಂತೇಶ್‌ ಮುರುಗೋಡ ತೋಟಗಾರಿಕೆ ಇಲಾಖೆ  ಉಪನಿರ್ದೇಶಕ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.