ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಹಾಕುತ್ತಿದ್ದ ‘say no to kannada’ ಎಂಬ ಗ್ರೂಪ್‌ಗೆ, ಭಾನುವಾರ ಫೇಸ್‌ಬುಕ್ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
‘say no to kannada’ ಗ್ರೂಪ್‌ನಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹಾಕಲಾಗುತ್ತಿತ್ತು. 2011ರಲ್ಲಿ ವಿಘ್ನೇಶ್ಶೆರ್ಲೆಕರ್ ಎಂಬಾತ ಸೃಷ್ಟಿಸಿದ್ದ ಈ ಗ್ರೂಪ್‌ಗೆ, 374ಕ್ಕೂ ಹೆಚ್ಚು ಮಂದಿ ಸದಸ್ಯರಾಗಿದ್ದರು.
ಈ ಗ್ರೂಪ್‌ನ ಸ್ಟೇಟಸ್‌ಗಳನ್ನು ಗಮನಿಸಿದ ಕೆಂಗೇರಿಯ ಚೈತ್ರಾ ಗೌಡ ಎಂಬುವವರು, ಅದಕ್ಕೆ ವಿರುದ್ಧವಾಗಿ ಮಧ್ಯಾಹ್ನ 2.20ರ ಸುಮಾರಿಗೆ ‘This group is against to say no to kannada group’ ಎಂಬ ಗ್ರೂಪ್ ಸೃಷ್ಟಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಇದನ್ನು ಹಿಂಬಾಲಿಸಿದರು. ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಗ್ರೂಪ್‌ನ ವಿರುದ್ಧ ಫೇಸ್‌ಬುಕ್, ವಾಟ್ಸ್‌ಆ್ಯಪ್ನಲ್ಲಿ ಆಂದೋಲನವನ್ನು ಆರಂಭಿಸಿದರು.
ವಿರೋಧಿ ಗುಂಪಿನವರು ಕನ್ನಡ ಭಾಷೆ ವಿರುದ್ದ ಹಾಕಿದ್ದ ಅಭಿಪ್ರಾಯಗಳನ್ನು ತಮ್ಮ ಮೊಬೈಲ್‌ನಿಂದ ‘ಸ್ಕ್ರೀನ್ ಶಾಟ್’ ಚಿತ್ರ ತೆಗೆದು ಸ್ನೇಹಿತರಿಗೆ ಕಳುಹಿಸಿ, ಕನ್ನಡ ವಿರೋಧಿ ಗ್ರೂಪ್ ವಿರುದ್ಧದ ಆಂದೋಲನದಲ್ಲಿ ಭಾಗಿಯಾಗುವಂತೆ ಆಹ್ವಾನಿಸಿದರು. ಸಂಜೆ ಹೊತ್ತಿಗೆ ಗ್ರೂಪ್ ಅನ್ನು ಸುಮಾರು 402 ಮಂದಿ ಬೆಂಬಲಿಸಿದರು.
ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಗ್ರೂಪ್‌ನ ವಿರುದ್ಧ ಪೊಲೀಸರಿಗೆ ದೂರು ಕೊಡುವ ಕುರಿತು ಸಹ ಚರ್ಚಿಸತೊಡಗಿದರು. ಈ ಪೈಕಿ ರಕ್ಷಿತ್ ಗೌಡ ಎಂಬ ಟ್ವಿಟ್ಟರ್ ಬಳಕೆದಾರ ಮೊಬೈಲ್‌ನಲ್ಲಿ ಸಂದೇಶಗಳ ‘ಸ್ಕ್ರೀನ್ ಶಾಟ್’ ಚಿತ್ರ ತೆಗೆದು, ಬೆಂಗಳೂರು ನಗರ ಪೊಲೀಸ್ ಟ್ವಿಟ್ಟರ್ ಪುಟದಲ್ಲಿ ಹಾಕಿ, ಆ ಗ್ರೂಪ್ ವಿರುದ್ಧ ದೂರು ದಾಖಲಿಸಿಕೊಳ್ಳಬಹುದೆ? ಎಂದು ಕೋರಿದ್ದರು. ತಮ್ಮ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ, ‘say no to kannada’ ಗ್ರೂಪ್ ಸಂಜೆಯ ಹೊತ್ತಿಗೆ ಸ್ಥಗಿತಗೊಂಡಿತು.
*
ಕನ್ನಡಿಗರ ಜಯ
‘ಕನ್ನಡದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದವರ ವಿರುದ್ದ ನಾವು ಗ್ರೂಪ್ ಸೃಷ್ಟಿಸಿ ಕೇವಲ ಮೂರು ತಾಸು ಆಂದೋಲನ ನಡೆಸಿದೆವು. ಅಷ್ಟರಲ್ಲೇ ಕನ್ನಡ ವಿರೋಧಿಗಳು ತಮ್ಮ ಗ್ರೂಪ್ ಅನ್ನು ನಿಷ್ಕ್ರಿಯಗೊಳಿಸಿದರು. ಇದು ಫೇಸ್‌ಬುಕ್ ಕನ್ನಡಿಗರಿಗೆ ಸಂದ ಜಯ ಎನ್ನಬಹುದು’ ಎಂದು ‘This group is against to say no to kannada group’ನ ಅಡ್ಮಿನ್ ಚೈತ್ರಾ ಗೌಡ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.