ಬೆಂಗಳೂರು: `ದೇಶ ಸುತ್ತು, ಕೋಶ ಓದು' ಎನ್ನುವುದು ಜನಪ್ರಿಯ ಗಾದೆ. ಆದರೆ, ಕೋಶ ರಚಿಸಲು ದೇಶ ಸುತ್ತಿದ ಕಲಾವಿದೆಯೊಬ್ಬರು ನಮ್ಮ ನಡುವೆ ಇದ್ದಾರೆ. ಅದು ಒಂದೆರಡು ದಿನಗಳಲ್ಲ; ನಿರಂತರವಾಗಿ ಹತ್ತು ವರ್ಷಗಳ ಕಾಲ ದೇಶದ ಯಾವ ಮೂಲೆಯನ್ನೂ ಬಿಡದಂತೆ ಪರ್ಯಟನ ನಡೆಸಿದ್ದಾರೆ. ಅದರ ಪರಿಣಾಮ ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾದ ಭಾರತೀಯ ಕಲೆ ಮತ್ತು ಕಲಾವಿದರ ಬೃಹತ್ ಕೋಶವೊಂದು ಅರಳಿ ನಿಂತಿದೆ.
ಮುಂಬೈನ ಹೆಸರಾಂತ ಕಲಾವಿದೆ ಪ್ರತಿಮಾ ಸೇಠ್ ಅಂತಹ ಸಾಧಕಿ. ಭಾರತೀಯ ಕಲಾಚರಿತ್ರೆಯಲ್ಲಿ ಮೇರು ಕೃತಿ ಎನಿಸಿರುವ ಅವರ `ಡಿಕ್ಷನರಿ ಆಫ್ ಇಂಡಿಯನ್ ಆರ್ಟ್ ಅಂಡ್ ಆರ್ಟಿಸ್ಟ್' ಯೂರೋಪ್ ದೇಶಗಳಲ್ಲಿ ಭಾರಿ ಬೇಡಿಕೆ ಗಿಟ್ಟಿಸಿದೆ. ಅಮೆರಿಕದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಮಾರಾಟ ಕಂಡಿದೆ. 1850ರಿಂದ ಇದುವರೆಗಿನ ಇಡೀ ಭಾರತೀಯ ಕಲಾ ಚರಿತ್ರೆಯನ್ನು ವರ್ಣಮಾಲೆ ಅಕ್ಷರಗಳಿಗೆ ಅನುಗುಣವಾಗಿ ಶಬ್ದಕೋಶ ಮಾದರಿಯಂತೆ ಈ ಕೃತಿ ಕಟ್ಟಿಕೊಡುತ್ತದೆ.
ಸುಮಾರು 750 ಪುಟಗಳಷ್ಟು ವಿಸ್ತಾರವಾದ ಈ ಕೃತಿಯಲ್ಲಿ 650 ಕಲಾವಿದರ ಪರಿಚಯ ಇದೆ. ರಾಜಾ ರವಿವರ್ಮನಿಂದ ಹಿಡಿದು ಬಂಗಾಳದ ಪ್ರಸಿದ್ಧ ಟ್ಯಾಗೋರ್ ಸಹೋದರರವರೆಗೆ ಎಲ್ಲ ವರ್ಗದ ಕಲಾವಿದರ ಜಾತ್ರೆಯೇ ಇಲ್ಲಿ ನೆರೆದಿದೆ. 321 ಅಂದದ ಕಲಾಕೃತಿಗಳನ್ನು ಅಚ್ಚು ಹಾಕಲಾಗಿದೆ. ಅದರಲ್ಲಿ 21 ಕಪ್ಪು- ಬಿಳುಪು ಚಿತ್ರಗಳಿವೆ. ನೂರಾರು ಕಲಾ ಪ್ರಕಾರಗಳ ಮಾಹಿತಿ ಸಹ ಅದರಲ್ಲಿದೆ.
ಈಶಾನ್ಯದ ಗುಡ್ಡಗಾಡು ಪ್ರದೇಶದಲ್ಲಿ, ರಾಜಸ್ತಾನದ ಮರಳುಗಾಡಿನಲ್ಲಿ, ದೆಹಲಿ ಬೀದಿಯಲ್ಲಿ, ತಂಜಾವೂರಿನ ಹಾದಿಯಲ್ಲಿ, ಪೋರಬಂದರಿನ ಗಲ್ಲಿಯಲ್ಲಿ, ಕೇರಳ ಕಡಲ ಕಿನಾರೆಯಲ್ಲಿ ಓಡಾಡಿ ಸಂಗ್ರಹಿಸಿದ ಕಲಾ ಪ್ರಪಂಚವೇ ಪುಸ್ತಕದಲ್ಲಿ ಅಡಗಿ ಕುಳಿತಿದೆ. ಆಯಾ ಕಲಾ ಪ್ರಕಾರದ ಹುಟ್ಟು, ಬೆಳವಣಿಗೆ, ಸದ್ಯದ ಸ್ಥಿತಿಗಳ ವಿವರವನ್ನು ಕೊಡಲಾಗಿದೆ.
ಕಲಾ ಕೋಶದ ಎರಡನೇ ಭಾಗದ ರಚನೆಯಲ್ಲಿ ತೊಡಗಿರುವ ಪ್ರತಿಮಾ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. `ಪ್ರಜಾವಾಣಿ' ಜೊತೆ ಮಾತಿಗೆ ಸಿಕ್ಕ ಅವರು, ತಮ್ಮ ಇದುವರೆಗಿನ ಕಲಾ ಯಾತ್ರೆಯನ್ನು ಒಮ್ಮೆ ಮೆಲುಕು ಹಾಕಿದರು.
`ಕಲಾ ವಿದ್ಯಾರ್ಥಿನಿ ಆಗಿದ್ದ ದಿನಗಳಿಂದಲೂ ಇಂತಹದ್ದೊಂದು ಸಾಧನೆ ಮಾಡುವ ತವಕ ನನ್ನನ್ನು ಕಾಡಿತ್ತು. ಅಪ್ಪ ಮುಂಬೈನ ಜಗತ್ಪ್ರಸಿದ್ಧ ಜೆ.ಜೆ. ಕಲಾ ಶಾಲೆ ಎದುರಿನಲ್ಲೇ ನನಗೊಂದು ಕಲಾ ಸ್ಟುಡಿಯೊ ತೆಗೆದುಕೊಟ್ಟಾಗ ಆ ಹಂಬಲ ಇಮ್ಮಡಿಯಾಯಿತು. ಮುಂಬೈ, ಕೋಲ್ಕತ್ತ, ದೆಹಲಿ ಗಲ್ಲಿಗಳಲ್ಲಿ ಅಲೆದು, ಪರಿಚಿತರಿಂದ ವಿಳಾಸ ಪಡೆದು, ಅವರಿಗೆಲ್ಲ ಪತ್ರ ಬರೆಯುವ ಚಳವಳಿ ಆರಂಭಿಸಿದೆ' ಎಂದು ನಗುತ್ತಾರೆ ಪ್ರತಿಮಾ.
`ಭಾರತೀಯ ಅಂಚೆ ಇಲಾಖೆಗೆ ನನ್ನ ಅಲ್ಪ ಕಾಣಿಕೆ ಸಂದಿದೆ. ಏಕೆಂದರೆ, ನಾನು ಕನಿಷ್ಠ ಐದು ಸಾವಿರ ಜನಕ್ಕೆ ಪತ್ರ ಬರೆದಿದ್ದೇನೆ. ಉತ್ತರ ಬಾರದಿದ್ದಾಗ ಅಂತಹವರಿಗೆ ಮತ್ತೆ ಪತ್ರ ಹಾಕಿದ್ದೇನೆ. ಆಮಂತ್ರಣ ಸಿಕ್ಕವರ ಮನೆ ಬಾಗಿಲಿಗೆ ಹೋಗಿ ಮಾಹಿತಿ ಪಡೆದು ಬಂದಿದ್ದೇನೆ' ಎಂದು ಅವರು ಹೇಳುತ್ತಾರೆ.
`ಕಲೆ ಹುಟ್ಟಿದ್ದೇ ಭಾರತದಲ್ಲಿ. ಯೂರೋಪ್ ಅಧಿಪತ್ಯದ ಪರಿಣಾಮ ನಮ್ಮ ಕಲೆ ಸೀಮೋಲ್ಲಂಘನ ಮಾಡಿ, ಪ್ರಪಂಚದ ಎಲ್ಲೆಡೆ ಸುತ್ತಾಡಿ ಆಧುನಿಕ ಕಲೆ ಹೆಸರಿನಲ್ಲಿ ತವರಿಗೆ ವಾಪಸು ಬಂದಿದೆ. ಇಲ್ಲಿಯ ಕಲೆ ಮತ್ತು ಕಲಾವಿದರ ಮಾಹಿತಿ ಹಿಡಿದಿಡುವ ಕೆಲಸ ಆಗದಿದ್ದರೆ ಮುಂದೊಂದು ದಿನ ಯಾವ ದಾಖಲೆಗಳೂ ಉಳಿಯಲಿಕ್ಕಿಲ್ಲ. ಅದೇ ಅಂಜಿಕೆಯಿಂದ ಈ ಸಾಹಸಕ್ಕೆ ಕೈಹಾಕಿದ್ದೇನೆ' ಎಂದು ವಿವರಿಸುತ್ತಾರೆ.
ಜವಾಹರಲಾಲ್ ನೆಹರು ಅವರಿಗೆ ಸಹಾಯಕರಾಗಿದ್ದ ಸಿ.ಆರ್. ಶ್ರೀನಿವಾಸ್ ಅವರ ಮನೆ ಅಂಗಳದಲ್ಲಿ ಆಡಿ ಬೆಳೆದವರು ಪ್ರತಿಮಾ. `ಶ್ರೀನಿವಾಸ್ ಕಾಕಾ ಅವರ ಒತ್ತಾಸೆಯಿಂದಲೇ ಈ ದೊಡ್ಡ ಕೈಂಕರ್ಯಕ್ಕೆ ಕೈಹಾಕಿದೆ. ಆದ್ದರಿಂದ ಕೃತಿಯನ್ನು ಅವರಿಗೇ ಸಮರ್ಪಿಸಿದ್ದೇನೆ' ಎಂದು ನೆನೆಯುತ್ತಾರೆ. ತೈಲವರ್ಣದಲ್ಲಿ ಅಪಾರ ಸಾಧನೆ ಮಾಡಿರುವ ಪ್ರತಿಮಾ ವಿದೇಶದಲ್ಲೂ ಪ್ರದರ್ಶನ ಏರ್ಪಡಿಸಿದ್ದಾರೆ. ಸದ್ಯದಲ್ಲೇ ಅಮೆರಿಕದಲ್ಲಿ ಇನ್ನೊಂದು ಪ್ರದರ್ಶನ ನಡೆಯಲಿದೆ.
ಕಲಾಕೃತಿಗಳನ್ನು ರಕ್ಷಿಸುವುದು ಹೇಗೆ ಎನ್ನುವ ವಿಷಯವಾಗಿ ಹೆಸರಾಂತ ಕಲಾವಿದ ಒ.ಪಿ. ಅಗರವಾಲ್ ಕೊಟ್ಟ ಸುದೀರ್ಘವಾದ ತಾಂತ್ರಿಕ ಮಾಹಿತಿ ಕೃತಿಯ ಕೊನೆಯಲ್ಲಿದೆ. ದೇಶದ ವಿವಿಧ ಸಂಸ್ಥಾನಗಳಲ್ಲಿ ಪೋಷಿಸಿದ ವರ್ಣಕಲೆ, ತೈಲವರ್ಣ, ಅಕ್ರಾಲಿಕ್, ವಾಟರ್, ಪೋಸ್ಟರ್, ಪೆನ್ಸಿಲ್, ಎಂಬ್ರಾಯಿಡರಿ, ಇನ್ಲೆ, ಕುಸುರಿ ಮತ್ತು ಕೆತ್ತನೆ ಕಲಾಕೃತಿಗಳು ಗಮನಸೆಳೆಯುತ್ತವೆ.
`ಬೆಂಗಳೂರಿಗೆ ಈಗ ಬಂದಿದ್ದೇಕೆ' ಎಂದು ಕೇಳಿದರೆ, `ರಾಜಾ ರವಿವರ್ಮನ ವಂಶಸ್ಥರಾದ ರಾಜಾ ರಾಜವರ್ಮ ಬೆಂಗಳೂರಿನಲ್ಲಿ ಇ್ದ್ದದರಂತೆ. ಅವರ ವಿಳಾಸ ಹುಡುಕಲು ಬಂದಿದ್ದೇನೆ. ನಿಮಗೇನಾದರೂ ಗೊತ್ತೆ' ಎಂದು ಮರು ಪ್ರಶ್ನೆ ಹಾಕುತ್ತಾರೆ.
ಕಲಾವಿದರ ಕೋಶದಲ್ಲಿ ಸೇರ್ಪಡೆ ಮಾಡಲು ಅರ್ಹರಾದವರ ಮಾಹಿತಿಯನ್ನು ಕಳುಹಿಸಲು ಪ್ರತಿಮಾ ಅವರನ್ನು ಸಂಪರ್ಕಿಸಬಹುದು:
ಛಿಠಿ2ಃಞಠ್ಞ್ಝಿ.್ಞಛಿಠಿ,
ಮೊಬೈಲ್: 09820889408
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.