ಬೆಂಗಳೂರು: ಹೆಸರಘಟ್ಟ ಗ್ರಾಮದ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಚಂದ್ರಪ್ಪ ಎಂಬುವವರು ತಾವು ನೀಡಿದ್ದ ಸಾಲಕ್ಕೆ ಹೆಚ್ಚಿನ ಬಡ್ಡಿ ಕೊಡಲು ಒಪ್ಪದ ಮಹಿಳೆಯನ್ನು ಅಪಹರಿಸಿ ಹಲ್ಲೆ ನಡೆಸಿರುವ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಸರಘಟ್ಟ ಗ್ರಾಮದ ನಿವಾಸಿ ಮುನಿರತ್ನಮ್ಮ ಎಂಬುವರು ಚಂದ್ರಪ್ಪ ಅವರಿಂದ ₹ 5 ಲಕ್ಷ ಸಾಲವನ್ನು ತೆಗೆದುಕೊಂಡಿದ್ದರು.
ಹಣ ಕೊಡುವುದು ತಡವಾದಾಗ ಶೇ 10ರಷ್ಟು ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ಚಂದ್ರಪ್ಪ ಮುನಿರತ್ನಮ್ಮ ಅವರಿಗೆ ಕೇಳಿದ್ದಾರೆ. ಇದಕ್ಕೆ ಅವರು ಒಪ್ಪದಿದ್ದಾಗ ನಾಲ್ಕು ಜನ ಸ್ನೇಹಿತರ ಜೊತೆ ಬಂದ ಚಂದ್ರಪ್ಪ, ಮುನಿರತ್ನಮ್ಮ ಮನೆಯಲ್ಲಿದ್ದ ಚಿನ್ನದ ಒಡವೆ ₹ 6 ಸಾವಿರ ನಗದು ಹಣವನ್ನು ಬೆದರಿಸಿ ಕಿತ್ತುಕೊಂಡಿದ್ದಾರೆ. ಅಲ್ಲದೇ ಬೆದರಿಸಿ ಚೆಕ್ ಮತ್ತು ಬಿಳಿ ಹಾಳೆಯ ಮೇಲೆ ಹೆಬ್ಬೆಟ್ಟು ಗುರುತು ಹಾಕಿಸಿಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.
ಮುನಿರತ್ನಮ್ಮ ಅವರನ್ನು ತಾವು ತಂದಿದ್ದ ವಾಹನದಲ್ಲಿ ಕೂರಿಸಿಕೊಂಡು ಆರೋಪಿಗಳು ಹಲ್ಲೆ ಮಾಡಿ ಯಲಹಂಕದ ಬಸ್ ನಿಲ್ದಾಣದ ಬಳಿ ಇಳಿಸಿ ಹೋಗಿದ್ದಾರೆ.
ಹಲ್ಲೆಗೆ ಒಳಗಾದ ಮಹಿಳೆ ಮುನಿರತ್ನಮ್ಮ ಯಲಹಂಕದಿಂದ ಬಂದು ಸೋಲದೇವನಹಳ್ಳಿಗೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಂದ್ರಪ್ಪ ಅವರ ಜೊತೆಯಲ್ಲಿ ಭಾಗಿಯಾದ ಮಂಜುನಾಥ್, ಪಿಳ್ಳಪ್ಪ, ಪರಮೇಶ್, ಧನುಷ್ ಅವರ ಮೇಲೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಲ್ಲಿ ಸಾಲಗಾರ ಇಲ್ಲಿ ಮೀಟರ್ ಬಡ್ಡಿದಾರ: ಆರೋಪಿ ಚಂದ್ರಪ್ಪ ಹೆಸರಘಟ್ಟ ರೈತರ ಸೇವಾ ಸಹಕಾರ ಸಂಘದಲ್ಲಿ ಉಪಾಧ್ಯಕ್ಷ. ಇದೇ ಬ್ಯಾಂಕಿನಲ್ಲಿ ₹ 5 ಲಕ್ಷ ಸಾಲವನ್ನು 2018ರ ಮೇ ತಿಂಗಳಿನಲ್ಲಿ ಪಡೆದಿದ್ದಾರೆ. ಅವರ ಮಗ ಸಿ.ದಿವಾಕರ ₹ 2 ಲಕ್ಷ ಸಾಲವನ್ನು 2017ರ ಜನವರಿಯಲ್ಲಿ ಪಡೆದಿದ್ದರು.
ಬ್ಯಾಂಕಿನಲ್ಲಿ ಕಡಿಮೆ ಬಡ್ಡಿಗೆ ಸಾಲ ತೆಗೆದುಕೊಂಡು ಜನರಿಗೆ ಮೀಟರ್ ಬಡ್ಡಿ ಕೊಡುವ ವ್ಯವಹಾರ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.