ಬೆಂಗಳೂರು: ‘ಬಲವಂತವಾಗಿ ಹೇರುವುದರಿಂದ ಯಾವುದೇ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಹೇಳಿದರು.
ವಿ.ಸೀ. ಸಂಪದ ವತಿಯಿಂದ (ವಿ.ಸೀತಾರಾಮಯ್ಯ ಸಂಸ್ಮರಣ ವೇದಿಕೆ) ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಹಿರಿಯ ಸಾಧಕರಿಗೆ ಕೃತಜ್ಞತಾ ಸಮರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾಷೆಯನ್ನು ಪ್ರೀತಿಯಿಂದ ಕಲಿಸಿದಾಗ ಮಾತ್ರ ಅದು ಬೆಳವಣಿಗೆ ಹೊಂದುತ್ತದೆ. ಹೇರಿಕೆ ಮಾಡುವುದರಿಂದ ಭಾಷೆ ಬೆಳೆಯುವುದಿಲ್ಲ. ಜನಪ್ರತಿನಿಧಿಗಳು ಕುರ್ಚಿಗಳನ್ನು ಭದ್ರಪಡಿಸಿಕೊಳ್ಳಲು ಹೋರಾಡುತ್ತಾರೆ ವಿನಃ ಭಾಷೆಯನ್ನು ಉಳಿಸಲು ಇಚ್ಛಾಶಕ್ತಿ ತೋರಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯ ಗೌರವಾಧ್ಯಕ್ಷ ಪ್ರೊ. ಎಂ.ಎಚ್.ಕೃಷ್ಣಯ್ಯ ಮಾತನಾಡಿ, ‘ವಿ.ಸೀತಾರಾಮಯ್ಯ ಅವರು ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದರು. ಅಂತಹ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೂಪುಗೊಳ್ಳಬೇಕು’ ಎಂದರು.
ಸಾಧಕರಿಗೆ ಸನ್ಮಾನ: 13 ಮಂದಿ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಶಸ್ತಿಯು ತಲಾ ₹ 10,000 ನಗದು ಬಹುಮಾನ ಒಳಗೊಂಡಿದೆ.
‘ಪ್ರಚಾರಪ್ರಿಯ ಸಾಹಿತಿಗಳು’
‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವುದೇ ಪ್ರತಿಫಲ ನಿರೀಕ್ಷಿಸದೆ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳು ಇದ್ದಾರೆ. ಆದರೆ, ಕೆಲ ಸಾಹಿತಿಗಳು ಪ್ರಚಾರಪ್ರಿಯರಾಗಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಹಾತೊರೆಯುತ್ತಾರೆ’ ಎಂದು ಎನ್.ಕುಮಾರ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.