ADVERTISEMENT

‘ಬಹುಸಂಸ್ಕೃತಿ ನಾಶ ಮಾಡುವ ಷಡ್ಯಂತ್ರ’

​ಪ್ರಜಾವಾಣಿ ವಾರ್ತೆ
Published 30 ಜುಲೈ 2017, 19:43 IST
Last Updated 30 ಜುಲೈ 2017, 19:43 IST
‘ಬಹುಸಂಸ್ಕೃತಿ ನಾಶ ಮಾಡುವ ಷಡ್ಯಂತ್ರ’
‘ಬಹುಸಂಸ್ಕೃತಿ ನಾಶ ಮಾಡುವ ಷಡ್ಯಂತ್ರ’   

ಬೆಂಗಳೂರು:‘ವೈವಿಧ್ಯಮಯವಾದ ಭಾರತೀಯ ಸಂಸ್ಕೃತಿ ಮೇಲೆ ಇಂದು ದಬ್ಬಾಳಿಕೆ ನಡೆಯುತ್ತಿದೆ. ಬಹುಸಂಸ್ಕೃತಿ, ಬಹುತತ್ವಗಳನ್ನು ನಿರ್ನಾಮ ಮಾಡುವ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ’ ಎಂದು ಲೇಖಕ ಜೆ.ಶ್ರೀನಿವಾಸಮೂರ್ತಿ ಕಿಡಿಕಾರಿದರು.

ಹಿರಿಯ ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ (ಸುಬ್ಬಣ್ಣ) ಅವರ 80ನೇ ಜನ್ಮದಿನಾಚರಣೆ ಅಂಗವಾಗಿ ಸುಬ್ಬಣ್ಣ ಅಭಿನಂದನಾ ಬಳಗದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುದ್ಧಿಜೀವಿಗಳನ್ನು ಹಾಗೂ ಅವರ ಜ್ಞಾನವನ್ನು ಅವಹೇಳನ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಶ್ರೀರಂಗ ಅವರ ಚಿಂತನೆಗಳು ಪ್ರಸ್ತುತ’ ಎಂದರು.
ವಿಮರ್ಶಕ ಗಿರಡ್ಡಿ ಗೋವಿಂದರಾಜ ಮಾತನಾಡಿ, ‘ನಾಟಕಕಾರ ಶ್ರೀರಂಗ ಅವರು ಧಾರವಾಡದ ಜತೆಗೆ ನಿಕಟವಾದ ಸಂಬಂಧ ಹೊಂದಿದ್ದರು. ಅವರ ಕುರಿತ ಲೇಖನಗಳು, ನಾಟಕಗಳು, ಕೃತಿಗಳ ವಸ್ತುಪ್ರದರ್ಶನವನ್ನು ಧಾರವಾಡದ ರಂಗಾಯಣದಲ್ಲಿ ನಡೆಸಬೇಕು’
ಎಂದು ಹೇಳಿದರು.

ADVERTISEMENT

‘ರಾಜ್ಯದ ರಂಗಭೂಮಿಗೆ ಶ್ರೀರಂಗ ಅವರು ಸೃಜನಾತ್ಮಕ ಸ್ಪರ್ಶ ನೀಡಿದರು. ಧಾರವಾಡದಲ್ಲಿದ್ದ ವೇಳೆ ಅವರು  ಹವ್ಯಾಸಿ ರಂಗಭೂಮಿಯನ್ನು ಕಟ್ಟಿ ಬೆಳೆಸಿದರು. ಅದರ ಫಲವಾಗಿ ರಾಷ್ಟ್ರಮಟ್ಟದಲ್ಲಿ ಕನ್ನಡ ರಂಗಭೂಮಿ ಗುರುತಿಸಿ ಕೊಂಡಿತು’ ಎಂದರು.

ಎಚ್.ವಿ.ವೆಂಕಟಸುಬ್ಬಯ್ಯ ಅವರು ಮಾತನಾಡಿ, ‘ನಾನೊಬ್ಬ ರಂಗಭೂಮಿ ಪರಿಚಾರಕ. ರಂಗಭೂಮಿಗೆ ಅಪಾರ ಕೊಡುಗೆ ನೀಡಿದ ಶ್ರೀರಂಗ ಅವರ ಬದುಕಿನ ಕುರಿತ ಬರಹಗಳನ್ನು ಒಗ್ಗೂಡಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನನ್ನ ಕರ್ತವ್ಯ’ ಎಂದು ಹೇಳಿದರು.

ಕೃತಿ ಬಿಡುಗಡೆ: ಶ್ರೀರಂಗ ಅವರ ಜೀವನದ ಕುರಿತ ಸಮಗ್ರ ಮಾಹಿತಿ ಯುಳ್ಳ ‘ಶ್ರೀರಂಗ ಸಂಪದ’ ಕೃತಿ ಯನ್ನು ಸಿರಿವರ ಪ್ರಕಾಶನದಡಿ ಸುಬ್ಬಣ್ಣ ಅವರು  ಹೊರತಂದಿದ್ದಾರೆ. ಅದನ್ನು ಗಿರಡ್ಡಿ ಅವರು ಬಿಡುಗಡೆ ಮಾಡಿದರು. 605 ಪುಟಗಳುಳ್ಳ ಈ ಕೃತಿಯ ಬೆಲೆಯು ₹ 710.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.