ADVERTISEMENT

ಬಾಂಗ್ಲಾ ವಲಸಿಗರಿಗೆ ಮತದಾರರ ಚೀಟಿ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2015, 19:30 IST
Last Updated 17 ಆಗಸ್ಟ್ 2015, 19:30 IST

ಬೆಂಗಳೂರು: ‘ಬಾಂಗ್ಲಾದೇಶದಿಂದ ನುಸುಳಿ ಬಂದ ಸುಮಾರು ಮೂರು ಸಾವಿರ ಜನ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅಲ್ಲಿನ ಶಾಸಕ ಬೈರತಿ ಬಸವರಾಜು ಸಹಕರಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಮ್ಮ ಪಕ್ಷದ ಕಾರ್ಯಕರ್ತರು ಕುಟುಕು ಕಾರ್ಯಾಚರಣೆ ನಡೆಸಿದ್ದು, ತಾವು ಮತದಾರರ ಚೀಟಿ ಪಡೆಯಲು ಕ್ಷೇತ್ರದ ಶಾಸಕರೇ ಕಾರಣ ಎಂಬ ಮಾಹಿತಿಯನ್ನು ಬಾಂಗ್ಲಾ ವಲಸಿಗರು ನೀಡಿದ್ದಾರೆ’ ಎಂದು ಹೇಳಿದರು.
‘ಕಳೆದ ಎರಡು ತಿಂಗಳ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ಈ ಜನರ ಹೆಸರು ಸೇರ್ಪಡೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಮಾರತ್‌ಹಳ್ಳಿ, ಕೆ.ಆರ್‌.ಪುರ, ಜಕ್ಕಸಂದ್ರ, ಕುಂದಲಹಳ್ಳಿ, ಮುನ್ನೇಕೊಳಲು, ಹುಳಿಮಾವು, ಕಾಡುಬೀಸನಹಳ್ಳಿ ಹಾಗೂ ದೇವರ ಬೀಸನಹಳ್ಳಿ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆ. ಬಹುತೇಕರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಮತಬ್ಯಾಂಕ್‌ ಬಲಪಡಿಸುವ ಏಕೈಕ ಉದ್ದೇಶದಿಂದ ಶಾಸಕರು ಅಂಥವರಿಗೆ ನೆರವು ನೀಡಿದ್ದಾರೆ’ ಎಂದು ಅವರು ಆಪಾದಿಸಿದರು.

‘ದೇಶದೊಳಗೆ ಅಕ್ರಮವಾಗಿ ನುಸುಳಿ ಬಂದವರಿಗೆ ಪೌರತ್ವ ದೊರಕಿಸಿಕೊಡುವ ಮಹತ್ವದ ದಾಖಲೆ ಕೊಡಿಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಾಂಗ್ಲಾ ಪ್ರಜೆಗಳ ಗುರುತಿನ ಚೀಟಿ ರದ್ದುಪಡಿಸಿ, ಅವರನ್ನು ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.
ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನೀಡಿರುವ ದೂರಿನ ಪ್ರತಿಯನ್ನೂ ಅವರು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.