ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಎಲ್ಲ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಬಿಜೆಪಿ 100 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆಯ ಸನಿಹದಲ್ಲಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಮತ ಎಣಿಕೆ ಕಾರ್ಯ ಮಧ್ಯಾಹ್ನ 1:30ರ ಸುಮಾರಿಗೆ ಮುಗಿಯಿತು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಬಂದ ಬಿಜೆಪಿ ಅಂತಿಮವಾಗಿ ಪಟ್ಟವನ್ನು ಭದ್ರಪಡಿಸಿಕೊಂಡಿತು.
ಬಿಬಿಎಂಪಿಯ 198 ವಾರ್ಡ್‌ಗಳಿಗೆ ಶನಿವಾರವಷ್ಟೇ ಚುನಾವಣೆ ನಡೆದಿತ್ತು. 1,120 ಅಭ್ಯರ್ಥಿಗಳು ಕಣದಲ್ಲಿದ್ದರು. 36.14 ಲಕ್ಷ ಜನ ಮತದಾನ ಮಾಡಿದ್ದರು. ಒಟ್ಟಾರೆ ಶೇ 49.31ರಷ್ಟು ಮತ ದಾನವಾಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಎಲ್ಲ ವಾರ್ಡ್‌ಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೆಡಿಎಸ್ 188 ವಾರ್ಡ್‌ಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಹೊಂಗಸಂದ್ರ ವಾರ್ಡ್‌ನಿಂದ ಬಿಜೆಪಿಯ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾದ್ದರಿಂದ 197 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು.
ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಆರ್. ಅಶೋಕ್, ಬಿಬಿಎಂಪಿ ವಿಭಜನೆ ವಿಚಾರ ಈ ಬಾರಿ ಚುನಾವಣೆ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಬಿಬಿಎಂಪಿ ವಿಭಜನೆ ಮೂಲಕ ಕಾಂಗ್ರೆಸ್ ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಮುಂದಾಗಿತ್ತು. ಬೆಂಗಳೂರಿನ ಜನರಿಗೆ ಭಾವನಾತ್ಮಕವಾಗಿ ಈ ವಿಚಾರ ಇಷ್ಟ ಇರಲಿಲ್ಲ. ಜನರು ಈ ವಿಭಜನೆ ವಿರುದ್ಧ ಮತ ನೀಡಿದ್ದಾರೆ ಎಂದರು.
‘ಮತದಾರರ ತೀರ್ಪಿಗೆ ತಲೆಬಾಗುವುದಾಗಿ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಸ್ವಚ್ಛ ಮತ್ತು ಸಂಚಾರ ದಟ್ಟಣೆ ಮುಕ್ತ ನಗರ, ಉತ್ತಮ ನಾಗರಿಕ ಸೌಲಭ್ಯ, ಜನಸ್ನೇಹಿ ಆಡಳಿತಕ್ಕಾಗಿ ನಾವು ಬಿಬಿಎಂಪಿಯನ್ನು ವಿಭಜಿಸಬೇಕು ಎನ್ನುತ್ತಿದ್ದೇವೆ ಹೊರತು, ಚುನಾವಣೆ ಭಯದಿಂದ ಅಲ್ಲ. ಜನರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಮತದಾರರ ತೀರ್ಪನ್ನು ಗೌರವಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತಾ ಷಾ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿ, ಬೆಂಗಳೂರಿಗರಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.