ಬೆಂಗಳೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ಹಾಗೂ ರಾಜೀವ್‌ಗಾಂಧಿ ಫೆಲೋಶಿಪ್‌ಗೆ ಕಿರು ಸಂಶೋಧನಾ ವಿದ್ಯಾರ್ಥಿಗಳಾಗಿ (ಜೆಆರ್‌ಎಫ್) ಆಯ್ಕೆಯಾಗಿರುವ ಹಲವು ಸಂಶೋಧನಾ ವಿದ್ಯಾರ್ಥಿಗಳಿಗೆ ಹಲವು ತಿಂಗಳಿಂದ ಶಿಷ್ಯವೇತನವೇ ದೊರಕಿಲ್ಲ.
ಜೆಆರ್‌ಎಫ್‌ಗೆ ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಆಯ್ಕೆಯಾಗಿರುವ ಕೆಲ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಆಯ್ಕೆಯಾಗಿರುವ ಅನುಮೋದನೆ ಪತ್ರವೂ ಬಂದಿಲ್ಲ.
‘ಶಿಷ್ಯವೇತನ ಹಾಗೂ ಅನುಮೋದನೆಯ ಪ್ರಮಾಣ ಪತ್ರ ವಿಚಾರವಾಗಿ ಒಂದು ವರ್ಷದಿಂದ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಂಶೋಧನಾ ವಿದ್ಯಾರ್ಥಿಗಳು ದೂರುತ್ತಾರೆ.
‘ವಿವಿ ಹಲವು ವಿದ್ಯಾರ್ಥಿಗಳ ಹಣವನ್ನು ಬಾಕಿ ಉಳಿಸಿಕೊಂಡಿರುವ ಕಾರಣ ಸಂಶೋಧನೆ ಮುಗಿದ ನಂತರವೂ ಬಾಕಿ ಹಣಕ್ಕಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಅಲೆಯುವಂತಾಗಿದೆ’ ಎಂದು ಹಿರಿಯ ವಿದ್ಯಾರ್ಥಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.
‘ಈ ವಿಚಾರವನ್ನು ಕುಲಪತಿ ಮತ್ತು ಕುಲಸಚಿವರ ಗಮನಕ್ಕೆ ತಂದರೆ ಅಧಿಕಾರಿಗಳಿಗೆ ಹೇಳುವುದಾಗಿ ಹೇಳುತ್ತಾರೆ. ಆದರೆ, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಒತ್ತಾಯ ಮಾಡಿದರೆ ನೀವೇ ನವದೆಹಲಿಗೆ ಹೋಗಿ ವಿಚಾರಿಸಿಕೊಂಡು ಬನ್ನಿ ಎನ್ನುವ ಉತ್ತರ ನೀಡುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಂಶೋಧನಾ ವಿದ್ಯಾರ್ಥಿಯೊಬ್ಬರು ಆರೋಪಿಸುತ್ತಾರೆ.
ಯುಜಿಸಿ ನಿಯಮಾವಳಿಗಳ ಪ್ರಕಾರ ರಾಜೀವ್‌ಗಾಂಧಿ ಫೆಲೋಶಿಪ್‌ಗೆ ಆಯ್ಕೆಯಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಹಾಗೂ ಶಿಷ್ಯವೇತನವನ್ನು ನೀಡುವುದು ವಿವಿಯ ಜವಾಬ್ದಾರಿ. ಯುಜಿಸಿಯ ರಾಜೀವ್‌ಗಾಂಧಿ ಫೆಲೋಶಿಪ್ ನಿಯಮಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿಶ್ವವಿದ್ಯಾಲಯದ ನಿಧಿಯಿಂದ ಹಣವನ್ನು ಬಿಡುಗಡೆ ಮಾಡುವಂತೆ ಹಾಗೂ ವಿದ್ಯಾರ್ಥಿಗಳಿಂದ ಲೆಕ್ಕ ಪತ್ರಗಳನ್ನು ಪಡೆದು ಮತ್ತೆ ಯುಜಿಸಿಯಿಂದ ಹಣ ಬಿಡುಗಡೆ ಮಾಡಿಸಿಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.
ಆದರೆ, ವಿವಿಯ ಅಧಿಕಾರಿಗಳು ನಿಯಮವನ್ನು ಅರಿಯದೆ ಯುಜಿಸಿಯಿಂದ ಹಣ ಬಂದಿಲ್ಲ ಎಂದು ಉತ್ತರಿಸುತ್ತಾರೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಆರೋಪಿಸುತ್ತಾರೆ. ‘ಪಟ್ಟಿಯಲ್ಲಿ ಒಟ್ಟು 7 ವಿದ್ಯಾರ್ಥಿಗಳ ಹೆಸರು ಬಿಟ್ಟು ಹೋಗಿತ್ತು. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ ವಿವಿಯಿಂದ ಹಿರಿಯ ಅಧಿಕಾರಿಯೊಬ್ಬರನ್ನು ನವದೆಹಲಿಯಲ್ಲಿ ನೇಮಿಸಲಾಗಿದೆ. ಅವರು ಈಗಾಗಲೇ 4 ವಿದ್ಯಾರ್ಥಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದ್ದು, ಉಳಿದ ವಿದ್ಯಾರ್ಥಿಗಳ ಹೆಸರನ್ನು ಆದಷ್ಟು ಬೇಗ ಸೇರಿಸಿ ಅವರಿಗೆ ಪತ್ರ ಹಾಗೂ ಶಿಷ್ಯವೇತನ ಕೊಡಿಸಲು ಯತ್ನಿಸುತ್ತೇವೆ’ ಎಂದು ವಿವಿಯ ಅಧಿಕಾರಿಗಳು ಹೇಳುತ್ತಾರೆ.
* * *
ಯುಜಿಸಿಯಿಂದ ಹಣ ಬರುವುದು ತಡವಾಗಿದ್ದ ಕಾರಣ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಸಾಧ್ಯವಾಗಿರಲಿಲ್ಲ. ಕುಲಪತಿ ಅವರು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಶಿಷ್ಯವೇತನ ದೊರೆಯಲಿದೆ. ಅನುಮೋದನೆ ಪತ್ರ ವಿಚಾರ ಯುಜಿಸಿಗೆ ಸಂಬಂಧಿಸಿದ ವಿಷಯವಾಗಿದೆ.
–ಕೆ.ಕೆ.ಸೀತಮ್ಮ, ಕುಲಸಚಿವೆ, ಆಡಳಿತ, ಬೆಂ.ವಿ.ವಿ.
2011 ರಿಂದಲೂ ಯುಜಿಸಿಯಿಂದ ಈ ರೀತಿಯ ಸಮಸ್ಯೆಗಳು ಆಗುತ್ತಲೇ ಇದೆ. ಸಂಶೋಧನೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಯುಜಿಸಿಯಿಂದ ವಿವಿಗೆ ಕಳಿಸುವಾಗ ಕೆಲ ವಿದ್ಯಾರ್ಥಿಗಳ ಹೆಸರು ಬಿಟ್ಟು ಹೋಗಿರುತ್ತವೆ. ಇದರಲ್ಲಿ ವಿವಿಯ ಪಾತ್ರವೇ ಇಲ್ಲ ಆದರೆ ವಿದ್ಯಾರ್ಥಿಗಳು ವಿವಿಯನ್ನು ದೂಷಿಸುತ್ತಾರೆ.
-–ರಮೇಶ್, ನಿರ್ದೇಶಕರು,
ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯನಿರ್ಧಾರಕ ಮಂಡಳಿ. ಬೆಂ.ವಿ.ವಿ.
ವಿವಿಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಧನ ಆಯೋಗದಿಂದ ಬರುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ವಿವಿಯು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಕುಲಪತಿ ಮತ್ತು ಕುಲಸಚಿವರು ಸಹ ಈ ಬಗ್ಗೆ ಚಿಂತನೆ ನಡೆಸುವುದಿಲ್ಲ.
–ಅರ್ಜುನ್,
ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ.
ಯುಜಿಸಿಗೆ ಹಲವು ಬಾರಿ ದಾಖಲೆಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದೇಶದ ಸುಮಾರು 200 ವಿಶ್ವವಿದ್ಯಾಲಯಗಳಿಂದ ಪ್ರತಿ ವರ್ಷ ಆಯ್ಕೆಯಾಗುವ 75 ಸಾವಿರಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಲು ಕೇವಲ ಒಬ್ಬ ಕೇಸ್ ವರ್ಕರ್ ಇದ್ದಾರೆ. ಇದರಿಂದ ಸಮಸ್ಯೆ ಉಲ್ಬಣವಾಗಿದೆ’
–ರಾಜಶೇಖರ್ ಸವನೂರು,
ದೆಹಲಿಯಲ್ಲಿರುವ ವಿವಿಯ ಅಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.