ಬೆಂಗಳೂರು: ‘ಬೇಂದ್ರೆ ಅವರ ಕವನಗಳಲ್ಲಿ ಮಾತೃಪ್ರೇಮ ಪ್ರಧಾನವಾಗಿದೆ. ಅವರ ವ್ಯಕ್ತಿತ್ವ ರೂಪುಗೊಳ್ಳಲು ಅವರ ತಾಯಿ ಹಾಗೂ ಧಾರವಾಡದ ಸ್ನೇಹಿತರು ಕಾರಣ’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ದ.ರಾ. ಬೇಂದ್ರೆ ಕಾವ್ಯಕೂಟದ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ದ.ರಾ.ಬೇಂದ್ರೆ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರ ಪ್ರತಿ ಕವನದಲ್ಲಿಯೂ ಮಾತೃಪ್ರೇಮವನ್ನು ಕಾಣಬಹುದು. ಒಬ್ಬ ಕವಿಯ ಆತ್ಮಕತೆಯನ್ನು ಓದಿದಾಗ ಅವರ ಕವನಗಳು ವಿಸ್ತರಣೆಗೆ ಸಿಗುತ್ತವೆ. ಬೇಂದ್ರೆ ಕಾವ್ಯ ಪ್ರತಿಭೆಯ ಉಗಮ ತಾಯಿಯಿಂದ ಆಗಿದೆ. ಆದರೆ, ಶಾಲ್ಮಲೆಯ ಉಗಮದಂತೆ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಅವರ ಪ್ರಣಯ ಗೀತೆಗಳಲ್ಲಿ ಶೃಂಗಾರ ಭಾವ ಸಂಚಾರಿಯಾಗಿದೆ. ತಾಯಿತನದ ಭಾವ ಸ್ಥಿರವಾಗಿದೆ. ಅವರ ಕಾವ್ಯದಲ್ಲಿ ಜಾನಪದೀಯ ಲಯ, ಗೀತ ಗುಣ, ಲಯ ಮಾಧುರ್ಯ ಇರುವುದರಿಂದ ಇತರ ಕವಿಗಳ ಕಾವ್ಯಕ್ಕಿಂತ ಅದು ಭಿನ್ನವಾಗಿದೆ ಎಂದರು. ದ.ರಾ.ಬೇಂದ್ರೆ ಕಾವ್ಯಕೂಟದ ವತಿಯಿಂದ ಆಯೋಜಿಸಿದ್ದ ಸ್ಮೃತಿ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತುಮಕೂರು ವಿಶ್ವವಿದ್ಯಾಲಯದ ಜಿ.ಎನ್.ಉಷಾ (ಪ್ರಥಮ), ಮೈಸೂರು ವಿಶ್ವವಿದ್ಯಾಲಯದ ಮಂಜುಮಣಿ (ದ್ವಿತೀಯ) ಮತ್ತು ತುಮಕೂರು ವಿಶ್ವವಿದ್ಯಾಲಯದ ಎಸ್.ಆರ್.ವೆಂಕಟೇಶ್ (ತೃತೀಯ) ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.