ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಜತೆ ಸಹವರ್ತಿ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ರಾಜ್ಯ ಘಟಕದ ಸದಸ್ಯರು ನಗರದ ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಕೇಂದ್ರ ಸರ್ಕಾರವು ಸುಧಾರಣೆಯ ಹೆಸರಿನಲ್ಲಿ ಬ್ಯಾಂಕ್‌ಗಳ ವಿಲೀನಕ್ಕೆ ಮುಂದಾಗಿದೆ. ಇದರ ಹಿಂದೆ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಅಡಗಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳನ್ನು ವಿಲೀನ ಮಾಡಬಾರದು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಎಲ್ಲ ಬ್ಯಾಂಕ್‌ಗಳ ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ₹7 ಲಕ್ಷ ಕೋಟಿ ಇದೆ. ಈ ಸಾಲ ಗಣನೀಯವಾಗಿ ಹೆಚ್ಚುತ್ತಿದೆ. ಇದು ಹೀಗೆ ಮುಂದುವರಿದರೆ ಬ್ಯಾಂಕ್‌ಗಳು ನಷ್ಟ ಅನುಭವಿಸುತ್ತವೆ. ಇದರ ಪರಿಣಾಮ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಉಂಟಾಗಲಿದೆ. ಹೀಗಾಗಿ ಸಾಲ ಮರುಪಾವತಿ ಮಾಡದವರ ವಿರುದ್ಧ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಕ್ರಮ ಕೈಗೊಳ್ಳಬೇಕು’ ಎಂದು ವೇದಿಕೆಯ ಸಂಚಾಲಕ ಎಚ್. ವಸಂತ್ ರೈ ಒತ್ತಾಯಿಸಿದರು.
‘ನೋಟು ರದ್ದತಿಯಿಂದಾಗಿ ಬ್ಯಾಂಕ್ ಅಧಿಕಾರಿಗಳು ರಾತ್ರಿ ಹಗಲು ದುಡಿದಿದ್ದಾರೆ. ಹೆಚ್ಚುವರಿ ಸಮಯ ಕೆಲಸ ಮಾಡಿದವರಿಗೆ ಓ.ಟಿ. ನೀಡಬೇಕು. ಗ್ರಾಚ್ಯುಟಿ ಕಾಯ್ದೆಗೆ ತಿದ್ದುಪಡಿ ತಂದು 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಕಾರ್ಮಿಕರಿಗೆ ₹ 20 ಲಕ್ಷ ಗ್ರಾಚ್ಯುಟಿ ನೀಡಬೇಕು’ ಎಂದು ಆಗ್ರಹಿಸಿದರು.
‘ಬ್ಯಾಂಕ್‌ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದರಿಂದ ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆ ಆಗುತ್ತದೆ. ದೇಶದಲ್ಲಿ ಸುಮಾರು 7.5 ಲಕ್ಷ ಪಿಂಚಣಿದಾರರು ಇದ್ದು, ಅವರ ಪಿಂಚಣಿಯನ್ನು ಪರಿಷ್ಕರಣೆ ಮಾಡಬೇಕು’ ಎಂದು ಒತ್ತಾಯಿಸಿದರು.