ಬೆಂಗಳೂರು: ‘ವಿಶ್ವದ ಉಗಮದ ಬಗ್ಗೆ ಮ್ಯಾಪಿಂಗ್ ಮಾಡುವ ಹೊಸ ವಿಧಾನಗಳು ಬರಲಿವೆ. ಇದರಿಂದ ಈ ವಿಶ್ವದ ಬಗ್ಗೆ ಇನ್ನಷ್ಟು ರೋಚಕ ವಿಷಯಗಳು ಗೊತ್ತಾಗಲಿವೆ. ಆ ಬಳಿಕವೂ ಬ್ರಹ್ಮಾಂಡ ನಿಗೂಢವಾಗಿಯೇ ಉಳಿಯಲಿದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಜಾರ್ಜ್ ಎಫ್. ಸ್ಮೂಥ್ ಅಭಿಪ್ರಾಯಪಟ್ಟರು.
ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ನೊಬೆಲ್ ಮ್ಯೂಸಿಯಂ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನ ವಿವಿಧ ಭಾಗಗಳ ವಿಜ್ಞಾನಿಗಳು ಮತ್ತು ಸಾರ್ವಜನಿಕರೊಂದಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಳ್ಳುವ ಉದ್ದೇಶದಿಂದ ಮ್ಯೂಸಿಯಂ ಈ ಉಪನ್ಯಾಸ ಸರಣಿಯನ್ನು ಆಯೋಜಿಸಿದೆ.
ಡಾ.ಸ್ಮೂಥ್ ಅವರು ಭಾರತದಲ್ಲಿ ಇನ್ನು ಮೂರು ಕಡೆಗಳಲ್ಲಿ ಉಪನ್ಯಾಸ ನೀಡುವರು. ಮ್ಯೂಸಿಯಂ ಮೊದಲ ಬಾರಿಗೆ ಬಹು ನಗರಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಉಪನ್ಯಾಸದಲ್ಲಿ ಸ್ಮೂಥ್ ಅವರು ವಿಶ್ವದ ಉಗಮದ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.