ADVERTISEMENT

ಭಾಷೆ ಹನ್ನೊಂದು, ಸಮಸ್ಯೆ ನೂರೊಂದು!

ಈರಪ್ಪ ಹಳಕಟ್ಟಿ
Published 29 ಜುಲೈ 2015, 19:53 IST
Last Updated 29 ಜುಲೈ 2015, 19:53 IST

ಬೆಂಗಳೂರು: ಇದ್ದೂ ಇಲ್ಲದಂತಿರುವ ನಾಮಫಲಕ, ಶಿಥಿಲ ಕಟ್ಟಡ, ತ್ಯಾಜ್ಯ ವಸ್ತುಗಳಿಂದ ತುಂಬಿದ ಕೋಣೆ, ಗಬ್ಬೆದ್ದು ನಾರುವ ಶೌಚಾಲಯ, ಮಾಸಿದ ಗೋಡೆ, ತಲೆ ಮೇಲೆ ತೂಗುವ ಜೇಡರ ಬಲೆ, ಬಿಚ್ಚಿ ಬೀಳುವ ಮೇಲ್ಛಾವಣಿ ಪದರ, ಬಣ್ಣ ಕಳೆದುಕೊಂಡ ಕರಿಹಲಗೆ, ಕಸದ ರಾಶಿಯಾಗಿರುವ ಪೀಠೋಪಕರಣ, ದೂಳು ತಿನ್ನುತ್ತಿರುವ ಕಂಪ್ಯೂಟರ್‌ಗಳು...

ಹೀಗೆ ಹೇಳುತ್ತ ಹೋದರೆ ಒಂದಲ್ಲ ಎರಡಲ್ಲ ನೂರೊಂದಿವೆ, ಬೆಂಗಳೂರು ವಿಶ್ವವಿದ್ಯಾಲಯದ ವಿದೇಶಿ ಭಾಷಾ ವಿಭಾಗದ ಸಮಸ್ಯೆಗಳು.
ಒಂದೇ ಸೂರಿನಡಿ 11 ವಿದೇಶಿ ಭಾಷೆಯನ್ನು ಕಲಿಸುವ ಮೂಲಕ ದಕ್ಷಿಣ ಭಾರತದ ಅತಿದೊಡ್ಡ ವಿದೇಶಿ ಭಾಷಾ ಬೋಧನಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಭಾಗ, ನಗರದ ಸೆಂಟ್ರಲ್‌ ಕಾಲೇಜು ಆವರಣದ ಮೂಲೆಯೊಂದರಲ್ಲಿ ಅವಗಣನೆಗೆ ಒಳಗಾದ ಅನಾಥ ಮಗುವಿನಂತಿದೆ.

1991ರಲ್ಲಿ ಡಾ.ಸುಮನ್‌ ವೆಂಕಟೇಶ್‌ ಅವರು ಸ್ನಾತಕೋತ್ತರ ಫ್ರೆಂಚ್‌ ಕೋರ್ಸ್‌ ಮೂಲಕ ವಿಭಾಗ ಆರಂಭಿಸಿದರು. ಆಗ ಕೇವಲ ನಾಲ್ವರು ವಿದ್ಯಾರ್ಥಿಗಳಿದ್ದರು. ಈಗ ಆ ಸಂಖ್ಯೆ 450ರ ಗಡಿ ದಾಟಿದ್ದು, ವಿದೇಶಿ ಭಾಷೆಗಳ ಸಂಖ್ಯೆಯೂ 11ಕ್ಕೆ ಏರಿದೆ.

‘ರಜತ ಮಹೋತ್ಸವ’ದ ಹೊಸ್ತಿಲಲ್ಲಿರುವ ವಿಭಾಗಕ್ಕೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಇಂದು ಶೇ 50ರಷ್ಟು ಪ್ರವೇಶ ಅರ್ಜಿಗಳನ್ನು ತಿರಸ್ಕರಿಸಬೇಕಾದ ಸ್ಥಿತಿ ಬಂದಿದೆ!

‘ವಿಭಾಗದಲ್ಲಿ ಸ್ನಾತಕೋತ್ತರ ಫ್ರೆಂಚ್‌, ಪ್ರಾಥಮಿಕ ಹಂತದ ಸರ್ಟಿಫಿಕೇಟ್‌, ಡಿಪ್ಲೊಮಾ, ಹೈಯರ್‌ ಡಿಪ್ಲೊಮಾ ಮತ್ತು ಅಡ್ವಾನ್ಸ್ಡ್ ಡಿಪ್ಲೊಮಾ ಕೋರ್ಸ್‌ಗಳಿವೆ. ತುಂಬಾ ಬೇಡಿಕೆ ಇರುವ ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್, ಜಪಾನಿ ಒಳಗೊಂಡಂತೆ ಒಟ್ಟು 11 ಭಾಷೆಗಳನ್ನು ಕಲಿಸಲಾಗುತ್ತಿದೆ’ ಎಂದು ವಿಭಾಗದ ಸಂಯೋಜನಾಧಿಕಾರಿಯಾಗಿರುವ ಡಾ.ಜ್ಯೋತಿ ವೆಂಕಟೇಶ ಅವರು ಮಾಹಿತಿ ನೀಡಿದರು.

‘ಜಾಗತೀಕರಣದ ತರುವಾಯ ವಿದೇಶಿ ಭಾಷೆಗಳ ಕಲಿಕೆಗೆ ತುಂಬಾ ಬೇಡಿಕೆ ಬಂದಿದೆ. ವಿಭಾಗಕ್ಕೆ ಪ್ರವೇಶ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ಆದರೆ, ಶಿಥಿಲಗೊಂಡಿರುವ ಈ ಹಳೆಯ ಕಟ್ಟಡ ವಿಭಾಗ ನಡೆಸಲು ಸಾಕಾಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕರೊಬ್ಬರು ತಿಳಿಸಿದರು.

‘ಒಂದೇ ಕಟ್ಟಡವನ್ನು ವಿದ್ಯುನ್ಮಾನ ಮಾಧ್ಯಮ ವಿಭಾಗದ ಜತೆಗೆ ಹಂಚಿಕೊಂಡಿರುವ ವಿದೇಶಿ ಭಾಷೆ ವಿಭಾಗಕ್ಕೆ ಮುಖ್ಯವಾಗಿ ತರಗತಿಗಳು, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಅನೇಕ ಸೌಕರ್ಯಗಳ ಕೊರತೆ ಇದೆ. 29 ಉಪನ್ಯಾಸಕರಿದ್ದರೂ ಒಂದೇ ಒಂದು ವಿಶ್ರಾಂತಿ ಕೊಠಡಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಾರದ ಏಳು ದಿನವೂ ಈ ವಿಭಾಗದಲ್ಲಿ ತರಗತಿಗಳು ನಡೆಯುತ್ತವೆ. ಅಲ್ಲದೆ, ಇಲ್ಲಿ ಅಧ್ಯಯನಕ್ಕೆ ಹೆಚ್ಚಿನ ಬೇಡಿಕೆಯೂ ಇದೆ. ಇದಕ್ಕೆ ತನ್ನದೇ ಆದ ಸ್ವಂತ ಕಟ್ಟಡ, ವ್ಯವಸ್ಥಿತ ಗ್ರಂಥಾಲಯ ಮತ್ತು ಪ್ರಯೋಗಾಲಯ ನಿರ್ಮಿಸಿ ಕೊಟ್ಟರೆ ಸುಮಾರು ಸಾವಿರ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶ ನೀಡಬಹುದು’ ಎಂದು ಈ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಡಾ.ಕೆ. ಈರೇಶಿ ಹೇಳಿದರು.

ಕನಸಾಗಿಯೇ ಉಳಿದ ಕಟ್ಟಡ ಯೋಜನೆ: ‘2008ರಲ್ಲಿ ಪ್ರೊ. ಎಚ್.ಎ. ರಂಗನಾಥ್ ಅವರು ಕುಲಪತಿಯಾಗಿದ್ದ ವೇಳೆ ವಿಭಾಗಕ್ಕೆ ₨3 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅದಕ್ಕೆ ವಿಶ್ವವಿದ್ಯಾಲಯದ ವಾಸ್ತುವಿನ್ಯಾಸ ವಿಭಾಗದ ಉಪನ್ಯಾಸಕರೇ ಅಂತರರಾಷ್ಟ್ರೀಯ ಮಟ್ಟದ ಕಟ್ಟಡ ವಿನ್ಯಾಸವನ್ನು ಕೂಡ ರೂಪಿಸಿದ್ದರು’ ಎಂದು ತಿಳಿಸಿದರು.

‘ರಂಗನಾಥ್‌ ಅವರ ಕನಸು ನನಸಾಗುವ ಮೊದಲೇ ಅವರು ಕುಲಪತಿ ಹುದ್ದೆಯಿಂದ ನಿರ್ಗಮಿಸಿದ್ದರು. ನಂತರ ಆ ಯೋಜನೆ ಈವರೆಗೂ ನನೆಗುದಿಗೆ ಬಿದ್ದಿದೆ. ವಿಭಾಗವನ್ನು ‘ಜಾಗತಿಕ ಭಾಷೆಗಳ ಕೇಂದ್ರ’ವನ್ನಾಗಿ ರೂಪಿಸಿ ಅಲ್ಲಿ 2020ರ ವೇಳೆಗೆ ಸುಮಾರು 20ಕ್ಕೂ ಅಧಿಕ ಭಾಷೆಗಳನ್ನು ಬೋಧಿಸುವ ವ್ಯವಸ್ಥೆ ಮಾಡುವ ಕನಸು ಕಂಡಿದ್ದೆ. ಆದರೆ, ಅದು ನನಸಾಗಲಿಲ್ಲ’ ಎಂದು ನೊಂದು ನುಡಿದರು.

‘ಏಳು ವರ್ಷಗಳ ಹಿಂದೆ ವಿಭಾಗಕ್ಕೆ ‘ಭಾಷಾ ಪ್ರಯೋಗಾಲಯ’ ರೂಪಿಸುವುದಕ್ಕಾಗಿ 30 ಹೊಸ ಕಂಪ್ಯೂಟರ್‌ ಮತ್ತು ಅವುಗಳಿಗೆ ಅಗತ್ಯವಾದ ಪೀಠೋಪಕರಣಗಳು ಬಂದವು. ಆದರೆ, ಈವರೆಗೆ ಪ್ರಯೋಗಾಲಯ ನಿರ್ಮಾಣವಾಗಿಲ್ಲ. ಇದರಿಂದಾಗಿ, 28 ಕಂಪ್ಯೂಟರ್‌ಗಳು, ಅವುಗಳ ಪೀಠೋಪಕರಣಗಳು  ಇಂದಿಗೂ ದೂಳು ತಿನ್ನುತ್ತ ಬಿದ್ದಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಎನ್‌.ಪ್ರಭುದೇವ್‌  ಅವರು ಕುಲಪತಿಯಾಗಿದ್ದ ವೇಳೆ ವಿಭಾಗದಲ್ಲಿ ‘ಸಂಭಾಷಣೆ ಕೋರ್ಸ್‌’ ಆರಂಭಿಸುವ ಪ್ರಸ್ತಾವಕ್ಕೆ ಅನುಮೋದನೆ ದೊರೆತಿತ್ತು. ಆದರೆ, ಅದಕ್ಕೆ ಅಗತ್ಯವಾದ ಪ್ರಯೋಗಾಲಯ ನಿರ್ಮಾಣವಾಗದ ಕಾರಣ ಇಂದಿಗೂ ಆ ಕೋರ್ಸ್‌ ಆರಂಭವಾಗಿಲ್ಲ’ ಎಂದರು.

‘ಪ್ರಯೋಗಾಲಯ ನಿರ್ಮಾಣಕ್ಕಾಗಿ ವಿಭಾಗದ ಕಟ್ಟಡದಲ್ಲಿ ಈ ಹಿಂದೆ ಮುದ್ರಣ ಯಂತ್ರವಿದ್ದ ಕೊಠಡಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಕಳೆದ 8 ವರ್ಷಗಳಿಂದ ಅನುಪಯುಕ್ತ ವಸ್ತುಗಳಿಂದ ತುಂಬಿರುವ ಆ ಕೊಠಡಿಯನ್ನು ಸ್ವಚ್ಛಗೊಳಿಸಿ ವಿಭಾಗಕ್ಕೆ ಒಪ್ಪಿಸುವ ಕಾರ್ಯವನ್ನು ಯಾವ ಕುಲಪತಿಯೂ ಮಾಡಲಿಲ್ಲ.  ಕುಲಪತಿ ತಿಮ್ಮೇಗೌಡ ಅವರು ಕೂಡ ಅದನ್ನು ಖಾಲಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ, ಈವರೆಗೆ ಕೆಲಸ ಮಾತ್ರ ಆಗಿಲ್ಲ’ ಎಂದು ಅತಿಥಿ ಉಪನ್ಯಾಸಕರೊಬ್ಬರು ತಿಳಿಸಿದರು.

‘ಈ ಹಿಂದೆ ವಿಭಾಗವು ಅಂತರ್ಜಾಲದ ಮೂಲಕ ಅನೇಕ ದೇಶಗಳ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕವಿಟ್ಟುಕೊಂಡಿತ್ತು. ಆಗ ಕೋರ್ಸ್‌ಗಳಿಗೆ ಅಗತ್ಯವಾದ ಅಧ್ಯಯನ ಸಾಮಗ್ರಿಗಳು, ಪಠ್ಯಪುಸ್ತಕಗಳು, ವಿಡಿಯೊಗಳ ಜತೆಗೆ  ಶಿಷ್ಯವೇತನ ಮತ್ತು ಉದ್ಯೋಗಾವಕಾಶಗಳಂತಹ ಮಾಹಿತಿಗಳು ರಾಯಭಾರಿ ಕಚೇರಿಗಳಿಂದ ವಿಭಾಗಕ್ಕೆ ದೊರೆಯುತ್ತಿದ್ದವು. ಆದರೆ, ಕಳೆದ 4 ವರ್ಷದಿಂದ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ತುಂಬ ತೊಂದರೆಯಾಗುತ್ತಿದೆ’ ಎಂದರು.

‘ಇಂಟರ್‌ನೆಟ್ ಜತೆಗೆ ವಿದ್ಯಾರ್ಥಿಗಳಿಗೆ ಬೋಧಿಸಲು ಅಗತ್ಯವಾದ ಕಂಪ್ಯೂಟರ್‌, ತಂತ್ರಾಂಶ, ಹೆಡ್‌ಫೋನ್‌, ಪ್ರೊಜೆಕ್ಟರ್‌ನಂತಹ ಪ್ರಾಥಮಿಕ ಸೌಕರ್ಯಗಳಿಲ್ಲ. ಹೀಗಾದರೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಹೇಗೆ’ ಎನ್ನುವುದು ಅವರ ಪ್ರಶ್ನೆ.

ಕೈ ತಪ್ಪುತ್ತಿರುವ ಆದಾಯ: ‘ಕೆಲ ಕಾರ್ಪೋರೇಟ್‌ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವಿದೇಶಿ ಭಾಷೆ ತರಬೇತಿ ನೀಡುವಂತೆ ವಿಭಾಗಕ್ಕೆ ಬೇಡಿಕೆ ಇಡುತ್ತಿವೆ. ಆದರೆ, ಮೂಲ ಸೌಕರ್ಯಗಳ ಕೊರತೆ ಕಾರಣ ಆ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ.   ಇದರಿಂದ ವಿಭಾಗಕ್ಕೆ ಬರಲಿದ್ದ ದೊಡ್ಡ ಆದಾಯ ಕೈ ತಪ್ಪುತ್ತಿದೆ’ ಎಂದರು ಉಪನ್ಯಾಸಕರೊಬ್ಬರು.

ಎಂಜಿನಿಯರ್‌ಗಳೇ ಕಾರಣ: ‘ವಿವಿಯ ಮುಖ್ಯ ಎಂಜಿನಿಯರ್‌ ಮತ್ತು ಸಹಾಯಕ ಎಂಜಿನಿಯರ್‌ಗಳ ಮುಸುಕಿನ ಗುದ್ದಾಟದಿಂದ ವಿಭಾಗದ ಸ್ಥಿತಿ ಗಂಡ ಹೆಂಡಿರ ಜಗಳದಲ್ಲಿ ಬಡವಾದ ಕೂಸಿನಂತಾಗಿದೆ. ಇದೇ ರೀತಿ ವಿವಿಯ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಇದು ವಿವಿಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ’  ಅವರು ತಿಳಿಸಿದರು.

ವರ್ಷದಲ್ಲಿ ಸ್ಥಳಾಂತರ: ‘ವಿದೇಶಿ ಭಾಷೆ ವಿಭಾಗಕ್ಕೆ ಹೊಸ ಕಟ್ಟಡ ನಿರ್ಮಿಸಲು ಈ ಹಿಂದೆ ಯೋಜನೆ ಸಿದ್ಧಪಡಿಸಿದ್ದು ನನಗೆ ಗೊತ್ತಿಲ್ಲ. ಆದರೆ, ವಿಭಾಗದ ಪಕ್ಕದಲ್ಲಿಯೇ ನಿರ್ಮಾಣವಾಗುತ್ತಿರುವ ವಾಣಿಜ್ಯ ವಿಭಾಗದ ಹೊಸ ಕಟ್ಟಡದಲ್ಲಿ ಹೆಚ್ಚುವರಿ ಮಹಡಿಯೊಂದನ್ನು ನಿರ್ಮಿಸಿ ಅಲ್ಲಿಗೆ ವಿಭಾಗವನ್ನು ಸ್ಥಳಾಂತರಿಸುತ್ತೇವೆ. ಇದಕ್ಕೆ ಸುಮಾರು ಒಂದು ವರ್ಷ ಕಾಲಾವಧಿ ಬೇಕು’ ಎಂದು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹೇಳಿದರು.

‘ಈ ವಿಭಾಗದ ಕಟ್ಟಡ ನಿರ್ಮಿಸಲು ಸರ್ಕಾರ ಅನುದಾನ ನೀಡುವುದಿಲ್ಲ. ಆದ್ದರಿಂದ, ಪ್ರತ್ಯೇಕ ಕಟ್ಟಡ ನಿರ್ಮಿಸುವುದು ಕಷ್ಟ. ನನೆಗುದಿಗೆ ಬಿದ್ದಿರುವ ‘ಭಾಷಾ ಪ್ರಯೋಗಾಲಯ’ಕ್ಕೆ ಸೆಂಟ್ರಲ್‌ ಕಾಲೇಜಿನ ಗ್ರಂಥಾಲಯದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.