ಬೆಂಗಳೂರು: ‘ಸಕಲ ಜೀವರಾಶಿಯನ್ನೂ ಸಲಹುತ್ತಿರುವ ಭೂಮಿಯನ್ನು ಧ್ವಂಸ ಮಾಡಲಾಗುತ್ತಿದೆ. ಇದು ಮನುಕುಲಕ್ಕೆ ಅತ್ಯಂತ ಅಪಾಯಕಾರಿ’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ– 186’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಜ್ಞಾನ ಮತ್ತು ತಂತ್ರಜ್ಞಾನಗಳು ಉಳ್ಳವರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುವ ಅಸ್ತ್ರಗಳಾಗಿವೆ. ಇವುಗಳ ಮೂಲಕ ಪರಿಸರವನ್ನು ಲೂಟಿ ಮಾಡಲಾಗುತ್ತಿದೆ’ ಎಂದು ಬೇಸರಿಸಿದರು.
‘ಇಂದು ವಿಶ್ವ ಭೂಮಿದಿನ. ಜಗತ್ತಿನ 130 ರಾಷ್ಟ್ರಗಳು ಈ ದಿನವನ್ನು ಆಚರಿಸಿವೆ. ಆದರೆ, ರಾಜ್ಯದಲ್ಲಿ ಒಂದೇ ಒಂದು ಕಾರ್ಯಕ್ರಮವನ್ನೂ ಹಮ್ಮಿಕೊಂಡಿಲ್ಲ. ಸಣ್ಣಪುಟ್ಟ ಐರೋಪ್ಯ ರಾಷ್ಟ್ರಗಳಲ್ಲಿ ಪರಿಸರಕ್ಕೆ ಸಾಂವಿಧಾನಿಕ ಹಕ್ಕು ನೀಡಲಾಗಿದೆ. ಅಲ್ಲಿನ ಜನ, ಪರಿಸರವನ್ನು ಮನೆಯ ಸದಸ್ಯ ಎಂಬಂತೆ ಭಾವಿಸಿದ್ದಾರೆ. ಅಂತಹ ಭಾವನೆ ನಮ್ಮಲ್ಲೂ ಮೂಡಬೇಕು’ ಎಂದರು.
‘ನಾನು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಕ್ಕಹಳ್ಳಿಯಲ್ಲಿ. ದಟ್ಟ ಅರಣ್ಯ, ಕೆರೆ ಹಾಗೂ ನದಿಗಳು ಹರಿಯುವ ಸ್ಥಳ ನಮ್ಮದು. ಇಲ್ಲಿ ಒಂದು ಎಕರೆ ಪ್ರದೇಶದಲ್ಲಿ 3.50 ಲಕ್ಷ ಸಸ್ಯ, ಪ್ರಾಣಿ ಸೇರಿದಂತೆ ಜೀವರಾಶಿಗಳು ನೆಲೆಸಿರುತ್ತವೆ. ಇಷ್ಟೊಂದು ಜೀವವೈವಿಧ್ಯದಿಂದ ಕೂಡಿರುವ ಪ್ರದೇಶ ದೇಶದಲ್ಲಿ ಎಲ್ಲೂ ಇಲ್ಲ’ ಎಂದು ಹೇಳಿದರು.
(ನಾಗೇಶ ಹೆಗಡೆ)
‘ಬಾಲ್ಯದಲ್ಲಿ ಚೆನ್ನಾಗಿ ಓದು ಎಂದು ಯಾರೋ ಹೇಳಿದಂತಾಯಿತು. ಹೀಗಾಗಿ ಓದಲು ಆರಂಭಿಸಿದೆ. 7ನೇ ತರಗತಿ ಹೊತ್ತಿಗೆ ಶಿವರಾಮ ಕಾರಂತರಿಂದ ಹಿಡಿದು ಕುವೆಂಪುವರೆಗೆ ಹಲವು ಕೃತಿಗಳನ್ನು ಓದಿದೆ. ಪ್ರೌಢಶಾಲೆಗೆ ಹೋಗು, ಭೂವಿಜ್ಞಾನ ಹಾಗೂ ಕನ್ನಡ ಓದು, ಐಐಟಿಗೆ ಹೋಗಿ ವಿಜ್ಞಾನ ಕಲಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬೇಡ, ಗಾಂಧೀಜಿ ಬಗ್ಗೆ ತಿಳಿದುಕೊ ಎಂದು ಯಾರೋ ಹೇಳಿದಂತಾಯಿತು. ಅದರಂತೆ ಮಾಡಿದೆ’ ಎಂದು ಹೇಳಿದರು.
ಹೆಪ್ಪುಗಟ್ಟಿದ ಪೆಟ್ರೋಲ್: ‘ಪ್ಲಾಸ್ಟಿಕ್ ಎಂಬುದು ಹೆಪ್ಪುಗಟ್ಟಿದ ಪೆಟ್ರೋಲ್ ಇದ್ದಂತೆ. ಇದನ್ನು ಅವೈಜ್ಞಾನಿಕವಾಗಿ ಸುಡುತ್ತಿರುವುದರಿಂದ ಮನುಷ್ಯರ ಹಾರ್ಮೋನ್‌ಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದ ಮನುಷ್ಯ ವಿವಿಧ ರೋಗಗಳಿಗೆ ತುತ್ತಾಗಲಿದ್ದಾನೆ. ಅಲ್ಲದೆ, ಸಕಲ ಜೀವರಾಶಿಗೂ ಇದು ಮಾರಕ’ ಎಂದರು.
ಇದೇ ವೇಳೆ ನಾಗೇಶ ಹೆಗಡೆ ಅವರ ‘ಭೂಮಿ ಎಂಬ ಗಗನನೌಕೆ’ ಕೃತಿಯನ್ನು ಕಥೆಗಾರ ವಸುಧೇಂದ್ರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ‘ಅಪಾರ ಜ್ಞಾನವುಳ್ಳ ಹೆಗಡೆ ಅವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡದಿರುವುದು ಬೇಸರದ ಸಂಗತಿ’ ಎಂದರು.
**
ಕಸ್ತೂರಿ ರಂಗನ್ ವರದಿ: ವಿರೋಧ ಸಲ್ಲ
‘ಪಶ್ಚಿಮಘಟ್ಟದ ಸಂರಕ್ಷಣೆಗಾಗಿ ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ನೀಡಿರುವ ವರದಿಗಳು ಒಳ್ಳೆಯ ಉದ್ದೇಶದಿಂದ ಕೂಡಿವೆ. ಕಸ್ತೂರಿ ರಂಗನ್ ವರದಿ ಪ್ರಕಾರ, ಪಶ್ಚಿಮಘಟ್ಟದ ಭಾಗಗಳಲ್ಲಿ ನೆಲೆಸಿರುವ ಜನರು ಕಲ್ಲು, ಮಣ್ಣು, ಮರ ಹೀಗೆ ಯಾವುದೇ ಸಂಪನ್ಮೂಲವನ್ನು ಬಳಸಿಕೊಳ್ಳಬಹುದು.
ಆದರೆ, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಹೇಳಲಾಗಿದೆ. ಆದರೆ, ಕೆಲವರು ಸ್ವಾರ್ಥಕ್ಕಾಗಿ ವರದಿಯನ್ನು ವಿರೋಧಿಸುತ್ತಿದ್ದಾರೆ. ಇದರಿಂದ ವರದಿ ಜಾರಿಯಲ್ಲಿ ಗೊಂದಲ ಉಂಟಾಗಿದೆ’ ಎಂದು ನಾಗೇಶ ಹೆಗಡೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.