ADVERTISEMENT

ಮತ ಬೇಟೆಗೆ ‘ದೇವ’ ಯಾತ್ರೆ

ಸುರೇಖಾ ಹೆಗಡೆ
Published 3 ಮೇ 2018, 19:40 IST
Last Updated 3 ಮೇ 2018, 19:40 IST
ಆರ್.ವಿ.ದೇವರಾಜ್ ಅವರು ಗುರುವಾರ ಮೈಸೂರು ಬ್ಯಾಂಕ್ ವೃತ್ತದ ಬಳಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು
ಆರ್.ವಿ.ದೇವರಾಜ್ ಅವರು ಗುರುವಾರ ಮೈಸೂರು ಬ್ಯಾಂಕ್ ವೃತ್ತದ ಬಳಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು   

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಗೆದ್ದು ಬೀಗುವ ತವಕ ಅಭ್ಯರ್ಥಿಗಳಲ್ಲಿ ಶುರುವಾಗಿದೆ. ರ‍್ಯಾಲಿ, ಮನೆ ಮನೆಯ ಪ್ರಚಾರಗಳ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ಜೋರೇ ಇದೆ. ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ.ದೇವರಾಜ್‌ ಕೂಡ ತಮ್ಮ ಕ್ಷೇತ್ರದಲ್ಲಿನ ದೇವರ ಮೊರೆ ಹೋಗಿ ನಂತರ ಪ್ರಚಾರ ಕಾರ್ಯ ಆರಂಭಿಸಿದರು.

ಬೆಳಿಗ್ಗೆ 7.15ರ ಹೊತ್ತಿಗೆ ಮೈಸೂರು ಬ್ಯಾಂಕ್‌ ವೃತ್ತದ ಮೂಲೆಯಲ್ಲಿರುವ ದೇವಸ್ಥಾನದ ಪಕ್ಕದ ಕಲ್ಲು ಬೆಂಚಿನ ಮೇಲೆ ಜನರ ಸಮಸ್ಯೆಗಳನ್ನು ಆಲಿಸುತ್ತ ಕುಳಿತಿದ್ದರು ದೇವರಾಜ್‌. ಪಕ್ಕದಲ್ಲೇ ನಿಂತಿದ್ದ ವಾಹನದಿಂದ ಕನ್ನಡ, ತಮಿಳು ಹಾಡುಗಳು ಹೊಮ್ಮುತ್ತಿದ್ದವು.

‘ಕೋಟಿಗೊಬ್ಬ’, ‘ಸುಳ್ಳೇ ಸುಳ್ಳು ಕಾಂಗ್ರೆಸ್‌ ಬಿಟ್ಟು ಬೇರೆಲ್ಲಾ ಸುಳ್ಳು’ ಹಾಡು ಮೊಳಗುವಾಗ ದ್ವಿಚಕ್ರ ವಾಹನದಲ್ಲಿ ಹೊರಟ ಅವರು, ದಾರಿಯುದ್ದಕ್ಕೂ ನೆರೆದಿದ್ದ ಜನರೆಡೆಗೆ ಕೈ ಮಾಡುತ್ತಾ ತೆರಳಿದ್ದು ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ. ಹತ್ತಾರು ಜನರಿದ್ದ ಗುಂಪು ದೇವಸ್ಥಾನ ತಲುಪುವ ಹೊತ್ತಿಗೆ ಆಂಜ
ನೇಯನ ಬಾಲದಂತೆ ಬೆಳೆದುಬಿಟ್ಟಿತ್ತು.

ADVERTISEMENT

ಅಲ್ಲೇ ಹತ್ತಿರದಲ್ಲಿದ್ದ ಪ್ರಸನ್ನ ಗಂಗಾಧರೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ ಅವರು ಅಲ್ಲಿದ್ದ ಈಶ್ವರ, ಪಾರ್ವತಿ, ಸಾಯಿಬಾಬಾ ಮೂರ್ತಿಗೆ ನಮಸ್ಕಾರ ಸಲ್ಲಿಸಿ ಆರತಿ ಸ್ವೀಕರಿಸಿದರು. ಕಾರ್ಯಕರ್ತರ ಬಳಿ ₹100 ಪಡೆದು ಆರತಿ ತಟ್ಟೆಗೆ ದೇವರಾಜ್‌ ಹಣ ಹಾಕಿ ಕೈಮುಗಿದರು. ಬೆಂಬಲಿಗರೊಬ್ಬರು ಆರತಿ ತಟ್ಟೆಯ ಕೆಳಗೆ ₹500 ತೂರಿಸಿದರು.

‘ಕಾಂಗ್ರೆಸ್‌ಗೆ ಮತ ಹಾಕಿ. ನಿಮ್ಮ ಆಶೀರ್ವಾದ ಸದಾ ನನಗಿರಲಿ’ ಎಂದು ಕರಪತ್ರ ಹಂಚಿ ಜನರ ಬಳಿ ಮನವಿ ಮಾಡಿಕೊಂಡರು. ಹೆಜ್ಜೆ ಹೆಜ್ಜೆಗೂ ಅವರನ್ನು ನಿಲ್ಲಿಸಿ ಮಾತನಾಡಿಸುತ್ತಿದ್ದವರೇ ಹೆಚ್ಚಿನವರು.

ಅಲ್ಲಿಂದ ಹೊರಟ ದೇವರಾಜ್‌, ಬಸವನಗುಡಿಯ ದೊಡ್ಡಗಣೇಶನ ಸನ್ನಿಧಾನ ತಲುಪಿದರು. ಅಷ್ಟೊತ್ತಿಗಾಗಲೇ ಮತ್ತೊಂದಿಷ್ಟು ಬೆಂಬಲಿಗರು ಅಲ್ಲಿ ಜಮಾಯಿಸಿದ್ದರು. ಕೆಲವು ಸಮಯ ಕಿಕ್ಕಿರಿದ ರಸ್ತೆಯಲ್ಲಿ ಹಾರ್ನ್‌ನದ್ದೇ ಸದ್ದು. ಗಣೇಶನ ಆಶೀರ್ವಾದ ಪಡೆದು ಲಕ್ಕಸಂದ್ರದ ಅಕ್ಕಯ್ಯಮ್ಮ ದೇವಸ್ಥಾನಕ್ಕೆ ಅವರ ಪ್ರಯಾಣ ಸಾಗಿತು.

ಜನಸಂದಣಿ ಕರಗಿತು ಎನ್ನುವ ಹೊತ್ತಿಗೆ ಮತ್ತೆ ಬೆಂಬಲಿಗರ ಘೋಷ. ಈ ಬಾರಿ ಗಣೇಶನ ದರುಶನ ಪಡೆದು ಮತ ಯಾಚಿಸಲು ಬಂದಿದ್ದು ದೇವರಾಜ್‌ ಪತ್ನಿ ಆರ್‌.ವಿ.ಮಮತಾ. ಅಲ್ಲಿಗೆ ಬೆಂಬಲಿಗರ ಸಂಖ್ಯೆ ದುಪ್ಪಟ್ಟಾಯಿತು. ಅವರೇ ಅಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ನಿಂತರು. ಮಮತಾ ಕೂಡ ಲಕ್ಕಸಂದ್ರದ ಅಕ್ಕಯ್ಯಮ್ಮ ದೇವಸ್ಥಾನದತ್ತ ಮುಖ ಮಾಡಿದರು.

ಬಿಜೆಪಿ, ಕಾಂಗ್ರೆಸ್‌ ಬೆಂಬಲಿಗರ ರ‍್ಯಾಲಿಯಲ್ಲಿ ಸಿದ್ದಾಪುರದ ರಸ್ತೆ ತುಂಬಿ ತುಳುಕುತ್ತಿತ್ತು. ಬೀದಿ ಬೀದಿಗಳಲ್ಲಿ ನಿಂತು ಪ್ರಚಾರ ವೈಖರಿ ನೋಡುತ್ತಿದ್ದ ಜನರ ಬಳಿ ಮತಯಾಚನೆ ಬಿರುಸಿನಿಂದ ನಡೆಯಿತು.

‘ಕಾಲು ಹೇಳುವಷ್ಟು ಹೊತ್ತು ಹೆಜ್ಜೆ’

ಬೆಳಿಗ್ಗೆ 4.30ಕ್ಕೆ ಏಳುತ್ತೇನೆ. ಮೊದಲೆಲ್ಲಾ ಯೋಗ ಮಾಡುತ್ತಿದ್ದೆ. ಈಗ ಕಾಲು ಸಾಕು ಎನ್ನುವಷ್ಟು ಹೊತ್ತು ವಾಕಿಂಗ್‌ ಮಾಡುತ್ತೇನಷ್ಟೇ. ಒಂದು ದಿನ ಕೃಷ್ಣ ರಾವ್‌ ಪಾರ್ಕ್‌, ಇನ್ನೊಂದು ದಿನ ಲಾಲ್‌ಬಾಗ್‌, ಮತ್ತೊಂದು ದಿನ ರಿಚರ್ಡ್ಸ್‌ ಉದ್ಯಾನ. ದಿನವಿಡಿಯ ಚೈತನ್ಯಕ್ಕಾಗಿ ಸ್ವಲ್ಪ ಹೊತ್ತು ವ್ಯಾಯಾಮ ಮಾಡುತ್ತೇನೆ. ಈಗ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದೇನೆ ಅನ್ನುವುದನ್ನು ಬಿಟ್ಟರೆ ದಿನಚರಿಯಲ್ಲಿ ಅಂಥ ಬದಲಾವಣೆಯೇನೂ ಇಲ್ಲ.

ಪ್ರತಿನಿತ್ಯ ಬೆಳಿಗ್ಗೆ 5.30ಕ್ಕೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಾನು ಹಾಜರ್‌. ಅಲ್ಲಿ ಬರುವ ಜನರ ಸಮಸ್ಯೆ ಕೇಳಿ ಅಲ್ಲೇ ಪರಿಹಾರವನ್ನೂ ನೀಡುತ್ತೇನೆ. ರಾತ್ರಿ 11.30ರವರೆಗೂ ಕ್ಷೇತ್ರಾಭಿವೃದ್ಧಿಯ ವಿವಿಧ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೇನೆ. ಸಮಸ್ಯೆ ಎಂದು ಯಾವುದೇ ಸಮಯಕ್ಕೆ ಕರೆದರೂ ನಾನು ಹಾಜರಿರುತ್ತೇನೆ.

–ಆರ್‌.ವಿ.ದೇವರಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.