ಬೆಂಗಳೂರು: ‘ತುಳುನಾಡು ಇನ್ನೊಂದು ರಾಜ್ಯವಾಗಿ ಬೆಳೆಯಬೇಕೆಂದು ಕೂಗೆಬ್ಬಿಸುವುದು ಹುಚ್ಚುತನ. ಹೊಸ ನೆತ್ತರಿನವರು ಏನೋ ಹೇಳಬಹುದು. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಎಂದೆಂದಿಗೂ ಕನ್ನಡ ನೆಲದ ಅವಿಭಾಜ್ಯ ಅಂಗ’ ಎಂದು ರಂಗಕರ್ಮಿ ಡಿ.ಕೆ.ಚೌಟ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಅವರು ಮಾತನಾಡಿದರು.
'ಕನ್ನಡವನ್ನು ಬಿಟ್ಟು ತುಳು ಸ್ವತಂತ್ರ ಭಾಷೆಯಾಗಬೇಕು ಎಂಬ ಅಪೇಕ್ಷೆಯನ್ನು ತುಳು ಭಾಷಿಗರು ಹೊಂದಬಾರದು. ತುಳು ಮತ್ತು ಕನ್ನಡ ಅಕ್ಕತಂಗಿಯರಿದ್ದಂತೆ. ತುಳು ಬೆಳೆಯಬೇಕೆಂಬ ಆಸೆ ಅಕ್ಕನಾದ ಕನ್ನಡಕ್ಕೂ ಇರಬೇಕು. ಅಕ್ಕನಾದ ಕನ್ನಡಕ್ಕೆ ಗೌರವ, ಪ್ರೀತಿ ತೋರಬೇಕೆಂಬುದು ತಂಗಿ ಸ್ಥಾನದಲ್ಲಿರುವ ತುಳುವಿಗೂ ಇರಬೇಕು’ ಎಂದರು.
‘ಎತ್ತಿನಹೊಳೆ, ಎಮ್ಮೆಹೊಳೆ ಏನೇ ಇರಲಿ. ನೀವು ಯಾವ ನೀರನ್ನು ಕೇಳುತ್ತಿದ್ದೀರಿ, ಅವರು ಯಾರಿಗೆ ನೀರು ಕೊಡುವುದಿಲ್ಲ ಎನ್ನುತ್ತಿದ್ದಾರೋ ನನಗಂತೂ ತಿಳಿಯದು. ಆದರೆ, ನಾನು ಮಾತ್ರ ಕಾಸರಗೋಡಿನ ಅಪ್ಪಟ ಕನ್ನಡಿಗ. ನನ್ನ ಮಾತೃ ಭಾಷೆ ತುಳು ಇರಬಹುದು. ಆದರೆ, ನನ್ನ ತಾಯ್ನೆಲ ಮತ್ತು ಸಂಸ್ಕೃತಿ ಕನ್ನಡವೇ ಆಗಿದೆ’ ಎಂದು ಸ್ಪಷ್ಟಪಡಿಸಿದರು.
‘ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿದರೆ ಕನ್ನಡಕ್ಕೆ ಏನೂ ನಷ್ಟವಿಲ್ಲ. ಇದಕ್ಕಾಗಿ ನಾಡಿನ ಶಾಸಕರು ಹಾಗೂ ಸಂಸದರು ದೆಹಲಿಯಲ್ಲಿ ಹೋರಾಡಲಿ. ಇಲ್ಲದಿದ್ದರೆ ಈಗ ಸಣ್ಣದಾಗಿ ಕೇಳುತ್ತಿರುವ ಪ್ರತ್ಯೇಕತೆ ಕೂಗು ಮುಂದೆ ಅಪಾಯಕಾರಿಯಾಗಿ ಬೆಳೆಯಲು ಆಸ್ಪದ ಕೊಟ್ಟಂತಾಗುತ್ತದೆ. ಕನ್ನಡಿಗರು ತಂಗಿಯನ್ನು (ತುಳು) ಉಳಿಸಿಕೊಳ್ಳುವ ದೃಢನಿಶ್ಚಯ ಮಾಡಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
‘ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸಲು ಸಾಕಷ್ಟು ಸಾಹಿತ್ಯ ಲಭ್ಯವಿಲ್ಲ ಎನ್ನುವ ಅಭಿಪ್ರಾಯ ಸಾಹಿತ್ಯ ವಲಯದಲ್ಲಿ ಕೇಳಿಬಂತು. ಆಗ, ನಾಟಕಗಳನ್ನು ತುಳುವಿನಲ್ಲೇ ಬರೆಯಲು ಆರಂಭಿಸಿದೆ. ತುಳುವಿನಲ್ಲಿ ಬರೆದ ಎಲ್ಲ ಕೃತಿಗಳೂ ಕನ್ನಡಕ್ಕೆ ಅನುವಾದವಾಗಿವೆ. ತುಳುವಿನಲ್ಲಿ ಬರೆದ ಕೃತಿಗಳಿಗಿಂತ ಕನ್ನಡಕ್ಕೆ ಅನುವಾದವಾಗಿರುವ ಕೃತಿಗಳೇ ಹೆಚ್ಚು ಮಾರಾಟವಾಗಿವೆ’ ಎಂದು ಅವರು ತುಳು ಭಾಷೆಯಲ್ಲಿ ಬರೆಯಲು ಪ್ರೇರಣೆಯಾದ ಅಂಶವನ್ನು ಬಹಿರಂಗಪಡಿಸಿದರು.
‘ಸಂಪಾದನೆಗಾಗಿ ದೇಶ ಬಿಟ್ಟು ಹೋಗಿದ್ದೆ. ಜೀವನಕ್ಕಾಗಿ ಸಾಕಷ್ಟು ಸಂಪಾದಿಸಿದೆ. 25 ವರ್ಷಗಳ ನಂತರ ದೇಶಕ್ಕೆ ಹಿಂದಿರುಗಿದೆ. ನಾಡಿನ ಅವಶ್ಯಕತೆ ಎಂದು ಭಾವಿಸಿ ರಫ್ತು ವ್ಯವಹಾರ ನಡೆಸಿದೆ. 70ನೇ ವರ್ಷಕ್ಕೆ ಕಾಲಿಟ್ಟಾಗ ವ್ಯವಹಾರ ಸ್ಥಗಿತಗೊಳಿಸಿ ಸಾರ್ವಜನಿಕ ಕ್ಷೇತ್ರ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ಬಾಲ್ಯದಿಂದಲೂ ರಂಗಭೂಮಿ ಮೇಲೆ ಅಪಾರ ಆಸಕ್ತಿ ಇತ್ತು. 6ನೇ ತರಗತಿಯಲ್ಲೇ ನಾಟಕಗಳಿಗಾಗಿ ಬಣ್ಣ ಹಚ್ಚಿದ್ದೇನೆ. ಇಂದಿಗೂ ಬಣ್ಣದ ಮೇಲೆ ಪ್ರೀತಿ ಹೋಗಿಲ್ಲ’ ಎಂದರು.
‘ಕನ್ನಡ ರಂಗಭೂಮಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಕಾರ್ಪೊರೇಟ್ ವಲಯದಿಂದ ನೆರವು ಸಿಗುತ್ತಿಲ್ಲ. ಸುಧಾಮೂರ್ತಿಯವರಿಗೂ ಕನ್ನಡ ರಂಗಭೂಮಿ ಬಗ್ಗೆ ತಾತ್ಸಾರ ಇದ್ದಂತಿದೆ. ಕಾರ್ಪೊರೇಟ್ ವಲಯ ಮನಸು ಮಾಡಿದರೆ ಕನ್ನಡ ರಂಗಭೂಮಿಗೆ ಉತ್ತೇಜನ ಸಿಗುತ್ತದೆ' ಎಂದರು.
‘ಎಷ್ಟು ಬೇಕೋ ಅಷ್ಟೇ ಮಾತು’
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಚೌಟ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಮಾರ್ಮಿಕವಾಗಿ ಖಂಡಿಸಿದರು.
'ನನಗೆ ಯಾರೋ ನೀವು ಇಷ್ಟೇ ಮಾತನಾಡಬೇಕೆಂದು ಹೇಳಿಕೊಟ್ಟಿದ್ದಾರೆ. ಈಗಿನ ಸಂದರ್ಭದಲ್ಲಿ ಬಹಳ ಯೋಚಿಸಿ ಮಾತನಾಡಬೇಕಾಗಿದೆ. ಇಲ್ಲದಿದ್ದರೆ ನಾಳೆ ನಿಮ್ಮ ಮನೆಗೂ ಬಂದೀತು, ನಿಮ್ಮ ಗೇಟಿಗೂ ಬಂದೀತು ಎಂದು ಎಚ್ಚರಿಸಿದ್ದಾರೆ' ಎಂದರು.
* ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರಿಸಬೇಕೆಂಬ ಒತ್ತಾಯಕ್ಕೆ ಕನ್ನಡಿಗರೂ ಧ್ವನಿಗೂಡಿಸಬೇಕು. ಇಲ್ಲದಿದ್ದರೆ ಈಗ ಸಣ್ಣದಾಗಿ ಕೇಳುತ್ತಿರುವ ಪ್ರತ್ಯೇಕತೆ ಕೂಗು ಮುಂದೆ ಅಪಾಯಕಾರಿಯಾಗಿ ಬೆಳೆಯಬಹುದು
–ಡಿ.ಕೆ.ಚೌಟ,ಹಿರಿಯ ರಂಗಕರ್ಮಿ
(18ನೇ ಸೆಪ್ಟೆಂಬರ್ 2017ರಂದು ಈ ಸುದ್ದಿ ಮೊದಲ ಬಾರಿಗೆ ಪ್ರಕಟವಾಗಿತ್ತು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.