ಬೆಂಗಳೂರು: ದೇಶ ರಕ್ಷಣೆಗಾಗಿ ಮಡಿದ ವೀರ ಸೈನಿಕರ ತ್ಯಾಗ, ಬಲಿದಾನದ ಸ್ಮರಣೆ, ಅವರ ಸಾಹಸ ಮತ್ತು ವೀರತ್ವದ ನೆನಪು, ಕಾರ್ಗಿಲ್ ಕದನದ ವಿಜಯದ ರೂವಾರಿಗಳಾದ ವೀರ ಸೈನಿಕರ ಸ್ಮರಣೆಯಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಒಂದು ಕ್ಷಣ ಧನ್ಯತೆಯನ್ನು ಅನುಭವಿಸಿತು.
ಸಿಟಿಜೆನ್ಸ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿನದ ಅಂಗವಾಗಿ `ಶ್ರದ್ಧಾ ಸುಮನ ಕಳಸ' ಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಡಿದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕರ್ನಲ್ ರವೀಂದ್ರನಾಥ್ ಅವರು, ತಮ್ಮ ಕಾರ್ಗಿಲ್ ಕದನದ ಅನುಭವಗಳನ್ನು ಬಿಚ್ಚಿಟ್ಟರು. `ಹದಿನಾಲ್ಕು ವರ್ಷಗಳ ಹಿಂದೆ ಕಾರ್ಗಿಲ್ ಕದನ ಆರಂಭವಾಗಿತ್ತು. ಆಗ, ಟೊಲೋಲಿಂಗ ಶಿಖರ ಶತ್ರುಗಳ ಪಾಲಾಗಿತ್ತು. ನಮ್ಮ ರಾಜಫೂತಾನಾ ರೈಫಲ್ಸ್ ಬೆಟಾಲಿಯನ್‌ಗೆ ಈ ಶಿಖರವನ್ನು ವಶಪಡಿಸಿಕೊಳ್ಳಬೇಕೆಂಬ ಆದೇಶವಿತ್ತು. ಆಗ, ನಮ್ಮ ಬೆಟಾಲಿಯನ್‌ನಲ್ಲಿ 200 ಮಂದಿ ಸೈನಿಕರಿದ್ದರು. ಅವರು ಬೇರೆ ಬೇರೆ ಧರ್ಮದ ಮತ್ತು ಬೇರೆ ಬೇರೆ ಪ್ರಾಂತದವರಾಗಿದ್ದರು. ಆದರೆ, ಅವರೆಲ್ಲರಲ್ಲಿ ನಮ್ಮ ದೇಶದ ಮಣ್ಣನ್ನು ರಕ್ಷಿಸಬೇಕೆಂಬ ಒಂದೇ ಭಾವನೆಯಿತ್ತು'
`ದುರ್ಗಮವಾದ ಶಿಖರವನ್ನು ರಾತ್ರಿಯಿಡೀ ತೆವಳಿ, ಶತ್ರುಗಳ ಗುಂಡಿನ ದಾಳಿಗೆ ಜವಾಬು ನೀಡುತ್ತ ಸಾಗಿದ್ದರು ನಮ್ಮ ವೀರ ಸೈನಿಕರು. ಬೆಳಿಗ್ಗೆ ಟೊಲೋಲಿಂಗ್ ಶಿಖರದ ಮೇಲೆ ನಮ್ಮ ಭಾರತದ ಧ್ವಜ ಹಾರಿತು. ಆದರೆ, ಆ ಸಂತಸವನ್ನು ಆಚರಿಸುವುದು ನಮ್ಮಿಂದಾಗಲಿಲ್ಲ. 80 ಸೈನಿಕರು ಗಾಯಗೊಂಡಿದ್ದರು. ಇನ್ನು ಹಲವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದರು' ಎಂದು ಕಾರ್ಗಿಲ್ ಕದನದ ಬಗ್ಗೆ ಅಭಿಮಾನದಿಂದ ಹೇಳಿದರು. ಕರ್ನಲ್ ಅವರ ಮಾತುಗಳನ್ನು ಕೇಳಿದ ಕ್ಷಣ ಅಲ್ಲಿದ್ದವರ ಕಣ್ಣುಗಳು ಅವರಿಗರಿಯದಂತೆಯೇ ಒದ್ದೆಯಾಗಿದ್ದವು.
ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, `ಗಡಿಯಲ್ಲಿ ನಮ್ಮ ವೀರ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಕಾರ್ಗಿಲ್ ಕದನದಲ್ಲಿ ಅನೇಕ ಸೈನಿಕರು ವೀರ ಮರಣವನ್ನಪ್ಪಿದ್ದಾರೆ. ಅವರ ದೇಶಪ್ರೇಮ ಎಂದಿಗೂ ಸ್ಮರಣೀಯವಾದುದು' ಎಂದರು.
`ನಮ್ಮ ಸುರಕ್ಷತೆಗಾಗಿ, ತಾಯಿ ಮಣ್ಣಿನ ಸೇವೆಗೈಯ್ಯಲು ಸೈನಿಕರು ಹಗಲಿರುಳು - 40 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಕಡಿಮೆ ಉಷ್ಣಾಂಶದಲ್ಲಿ ನಮ್ಮ ದೇಶದ ಗಡಿ ಕಾಯುತ್ತಿದ್ದಾರೆ. ಅವರ ದೇಶಪ್ರೇಮಕ್ಕೆ ಎಂದಿಗೂ ಬೆಲೆ ಕಟ್ಟಲಾಗದು' ಎಂದು ಹೇಳಿದರು.
ಇಂದಿರಾ ಗಾಂಧಿ ಸಂಗೀತ ಕಾರಂಜಿ ಸ್ಮಾರಕದಲ್ಲಿ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರತಿಮೆಯನ್ನು ಕೆ.ಜೆ.ಜಾರ್ಜ್ ಅವರು ಅನಾವರಣಗೊಳಿಸಿದರು.
ಕಾರ್ಗಿಲ್ ವೀರರಿಗೆ ಶ್ರದ್ಧಾಂಜಲಿ
ಸಿಟಿಜೆನ್ಸ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಹದಿನಾಲ್ಕನೇ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಕಾರ್ಗಿಲ್ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ `ಶ್ರದ್ಧಾಂಜಲಿ ಸಪ್ತಾಹ' ವನ್ನು ಆಚರಿಸುತ್ತಿದೆ.
ಸಂಸ್ಥೆಯ ಏಳು ಸದಸ್ಯರು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯಲ್ಲಿ ಸಂಚರಿಸಿ `ಶ್ರದ್ಧಾ ಸುಮನ ಕಳಸ' ದಲ್ಲಿ ದೇಶದ ಪವಿತ್ರ ನದಿಗಳಾದ ಕಾವೇರಿ, ಗಂಗಾ, ಮಹಾನದಿ, ಹೇಮಾವತಿ, ಶರಾವತಿ, ಗೋದಾವರಿ, ಕೃಷ್ಣ, ಕಬಿನಿ, ಭವಾನಿ, ನೇತ್ರಾವತಿ, ಸಾಬರಮತಿ, ಯಮುನಾ, ಬ್ರಹ್ಮಪುತ್ರ ಹೀಗೆ 21 ನದಿಗಳ ಪವಿತ್ರ ಜಲವನ್ನು ತುಂಬಿ, ಎಲೆ ಮತ್ತು ಹೂಗಳನ್ನು ಸಂಗ್ರಹಿಸಿದ್ದಾರೆ. ಕಳಸವು ಜುಲೈ 26 ರಂದು ಇಂಡಿಯಾ ಗೇಟ್ ತಲುಪಿ, ನಂತರ ದ್ರಾಸ್‌ನಲ್ಲಿರುವ ಕಾರ್ಗಿಲ್ ಸ್ಮಾರಕದಲ್ಲಿ ಸಂಗ್ರಹಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.