ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗಿನ ರೀಚ್– 1 ವಿಸ್ತರಣೆ ಕಾಮಗಾರಿಗಾಗಿ ಮರಗಳನ್ನು ಕಡಿಯುವ ಬದಲು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ವೈಟ್‌ಫೀಲ್ಡ್ ನಿವಾಸಿಗಳು ಶನಿವಾರ ಜಾಗೃತಿ ಜಾಥಾ ನಡೆಸಿದರು.
ಬೆಳಿಗ್ಗೆ 8ಕ್ಕೆ ಸಸ್ಯ ವೈದ್ಯ ವಿಜಯ್ ನಿಶಾಂತ್ ಅವರ ನೇತೃತ್ವದಲ್ಲಿ ಐಟಿಪಿಎಲ್ ಕ್ರಿಕೆಟ್ ಮೈದಾನದಿಂದ ಪ್ರಾರಂಭವಾದ ಜಾಥಾ ಹೋಪ್ ಫಾರ್ಮ್‌ವರೆಗೂ ಸಾಗಿತು. ಇದೆ ವೇಳೆ ಮಾತನಾಡಿದ ವಿಜಯ್ ನಿಶಾಂತ್, ‘ವೈಟ್‌ಫೀಲ್ಡ್, ಸಿಲ್ಕ್‌ಬೋರ್ಡ್‌ನಲ್ಲಿ ಜರುಗಲಿರುವ ಮೆಟ್ರೊ ಕಾಮಗಾರಿ ಹಾಗೂ ಎಚ್‌ಎಎಲ್, ಇಸ್ರೊ ಜಂಕ್ಷನ್‌ಗಳಲ್ಲಿ ಕೈಗೊಳ್ಳಲಿರುವ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆಯ ಸಲುವಾಗಿ ಈಗಾಗಲೇ ಹಲವು ಮರಗಳನ್ನು ಕಡಿಯಲಾಗಿದೆ. ಈಗ ಮತ್ತೆ 60ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಗರುತು ಹಾಕಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಾಮಗಾರಿಗಳು ನಡೆಯಲಿರುವ ರಸ್ತೆಗಳ ಬದಿಯಲ್ಲಿ ಹೊಂಗೆ, ಇಂಡಿಯನ್ ಕಾರ್ಕ್, ಗುಲ್‌ಮೊಹರ್, ಸುಬಾಬುಲ್, ಕಾಪರ್‌ಪಾಟ್, ಆಫ್ರಿಕನ್ ಟ್ಯೂಲಿಪ್ ಜಾತಿಯ ಮಳೆ ತರಿಸುವ ಮರಗಳು ಹೆಚ್ಚಿವೆ. 100 ಸೆಂ.ಮೀ ನಿಂದ 400 ಸೆಂ.ಮೀ ಸುತ್ತಳತೆಯಿರುವ 25 ಮೀಟರ್ ಎತ್ತರ ಬೆಳೆದಿರುವ ಮರಗಳನ್ನು ಕಡಿಯಲು ಹೇಗೆ ಮನಸ್ಸು ಬರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶದ ಉಲ್ಲಂಘನೆ: ‘ಯಾವುದೇ ಯೋಜನೆಗೆ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದರೆ ವೃಕ್ಷ ಸಮಿತಿಯ ಅನುಮತಿ ಬೇಕು. ಸಮಿತಿಯು ಸಾರ್ವಜನಿಕ ಸಭೆ ನಡೆಸಿ ಇದಕ್ಕೆ ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಇದೆ. ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್‌ನವರು ಒಂದೇ ಯೋಜನೆಯನ್ನು ಒಂದಕ್ಕಿಂತ ಹೆಚ್ಚು ಹಂತಗಳನ್ನಾಗಿ ವಿಂಗಡಿಸುವ ಮೂಲಕ ಈ ನಿಯಮ ಪಾಲನೆಯ ಹೊಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕಡಿಯಬೇಕಾದ ಮರಗಳ ಸಂಖ್ಯೆಯನ್ನು 49ಕ್ಕಿಂತ ಕಡಿಮೆ ಇರುವಂತೆ ತೋರಿಸುತ್ತಿದ್ದಾರೆ. ಈ ವಿಚಾರ ಗೊತ್ತಿದ್ದರೂ ಅರಣ್ಯ ಘಟಕದವರು ಮರಗಳನ್ನು ಕಡಿಯಲು ಅನುಮತಿ ನೀಡುತ್ತಿದ್ದಾರೆ. ಇದು ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ’ ಎಂದು ವಿಜಯ ನಿಶಾಂತ್ ಬೇಸರ ವ್ಯಕ್ತಪಡಿಸಿದರು.
‘ಅಭಿವೃದ್ಧಿಯ ಹೆಸರಲ್ಲಿ ಪರಿಸರಕ್ಕೆ ಹಾನಿ ಮಾಡುವ ಬದಲು ಪ್ರತ್ಯೇಕ ಉಪಾಯಗಳನ್ನು ಅಳವಡಿಸಿಕೊಂಡು ಪ್ರಕೃತಿಯನ್ನು ಸಮೃದ್ಧಗೊಳಿಸಬೇಕು’ ಎಂದು ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿ ವೈಟ್‌ಫೀಲ್ಡ್ ನಿವಾಸಿ ವಂದನಾ ಕೌಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.