ADVERTISEMENT

ಮಳೆ ನೀರು ಸಂಗ್ರಹ ಅಳವಡಿಸದಿದ್ದರೆ ದಂಡ

ಕಟ್ಟಡ ಮಾಲೀಕರ ವಿರುದ್ಧ ಕ್ರಮಕ್ಕೆ ಜಲಮಂಡಳಿ ತೀರ್ಮಾನ: 2016ರ ಮಾರ್ಚ್‌ನಿಂದ ಅನ್ವಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2015, 19:34 IST
Last Updated 10 ಅಕ್ಟೋಬರ್ 2015, 19:34 IST

ಬೆಂಗಳೂರು: ನಗರದಲ್ಲಿ 60x40 ಚದರ ಅಡಿ ಹಾಗೂ ಅದಕ್ಕಿಂತಲೂ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಾಣಗೊಂಡ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಲಮಂಡಳಿ ತೀರ್ಮಾನಿಸಿದೆ.

ಮಳೆ ನೀರು ವ್ಯವಸ್ಥೆ ಸಂಗ್ರಹಿಸಿಕೊಳ್ಳದ ಕಟ್ಟಡಗಳ ಮಾಲೀಕರಿಗೆ ಪ್ರತಿ ತಿಂಗಳ ನೀರಿನ ಬಿಲ್‌ನ ಶೇ 25ರಷ್ಟು ದಂಡ ವಿಧಿಸಲಾಗುವುದು. ಮೂರು ತಿಂಗಳ ಬಳಿಕವೂ ಅಳವಡಿಸಿಕೊಳ್ಳದಿದ್ದರೆ ಪ್ರತಿ ತಿಂಗಳು ಶೇ 50ರಷ್ಟು ದಂಡ ವಿಧಿಸಲಾಗುವುದು. ಗೃಹೇತರ ಬಳಕೆದಾರರಿಗೆ ಮೊದಲ ಮೂರು ತಿಂಗಳು ನೀರಿನ ಬಿಲ್‌ನ ಶೇ 50ರಷ್ಟು ದಂಡ ವಿಧಿಸಲಾಗುವುದು. ಬಳಿಕ ಶೇ 100ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ.

ಜಲಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌ ಅವರ ಅಧ್ಯಕ್ಷತೆಯಲ್ಲಿ ಜಲಮಂಡಳಿಯಲ್ಲಿ ಗುರುವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ದಂಡ ವಿಧಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ಪ್ರಸ್ತಾವವನ್ನು ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ. 2016ರ ಮಾರ್ಚ್‌ 1ರಿಂದ ಅನ್ವಯವಾಗುವಂತೆ ದಂಡ ವಿಧಿಸಲು ಮಂಡಳಿ ನಿರ್ಧರಿಸಿದೆ.

ನೀರಿನ ಅಭಾವ ನೀಗಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ರಾಜ್ಯ ಸರ್ಕಾರ ಕಾನೂನು ರೂಪಿಸಿದೆ. ಭವಿಷ್ಯದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ತಕ್ಕ ಮಟ್ಟಿಗೆ ನೀಗಿಸುವ ಉದ್ದೇಶದಿಂದ ಜಲಮಂಡಳಿ 2009ರಿಂದ ಮಳೆ ನೀರು ಸಂಗ್ರಹ ವ್ಯವಸ್ಥೆ  ಕಡ್ಡಾಯ ಮಾಡಿದೆ.  40x60 ನಿವೇಶನದ ಹಳೆಯ ಕಟ್ಟಡಗಳಿಗೆ ಹಾಗೂ ಹೊಸದಾಗಿ 30x40 ಮತ್ತು ಅದಕ್ಕಿಂತ ಹೆಚ್ಚಿನ ಕಟ್ಟಡಗಳಲ್ಲಿ ಮಳೆ ನೀರು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಮಂಡಳಿ ಸೂಚಿಸಿತ್ತು.

ನಗರದಲ್ಲಿ 40x60 ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ 55 ಸಾವಿರ ಕಟ್ಟಡಗಳಿವೆ ಎಂದು ಜಲಮಂಡಳಿ ಗುರುತಿಸಿತ್ತು. ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು 51 ಸಾವಿರ ಕಟ್ಟಡಗಳ ಮಾಲೀಕರು ಮಂಡಳಿಗೆ ತಿಳಿಸಿದ್ದರು. ಶೇ 95ರಷ್ಟು ಪ್ರಗತಿ ಸಾಧನೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಪ್ರಮಾಣಪತ್ರ ಸಲ್ಲಿಸಿದ ಬಹುತೇಕ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುತ್ತಿಲ್ಲ ಎಂದು ಮಂಡಳಿ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

2011ರ ಡಿಸೆಂಬರ್‌ ತಿಂಗಳೊಳಗೆ ಎಲ್ಲ ಮನೆಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು 2009ರಲ್ಲಿ ಗಡುವು ವಿಧಿಸಲಾಗಿತ್ತು. ಬಳಿಕ ಅದನ್ನು 2012ರ ಮೇ ತಿಂಗಳ ವರೆಗೆ ವಿಸ್ತರಿಸಲಾಗಿತ್ತು.  ಮಳೆ ನೀರು ವ್ಯವಸ್ಥೆ ಅಳವಡಿಸಿಕೊಳ್ಳದ ಮನೆಗಳ ನೀರಿನ ಸಂಪರ್ಕ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಬಳಿಕ ಕಟ್ಟಡ ಮಾಲೀಕರ ಬಗ್ಗೆ ಮಂಡಳಿ ಮೃದು ಧೋರಣೆ ತಳೆದಿತ್ತು.

‘ಹೊಸದಾಗಿ 30x 40 ಅಳತೆಯ ನಿವೇಶನದಲ್ಲಿ ನಿರ್ಮಾಣವಾದ ಮನೆಯಲ್ಲಿ ಮಳೆ ನೀರು ವ್ಯವಸ್ಥೆ ಅಳವಡಿಸಿಕೊಂಡಿದ್ದರೆ ಮಾತ್ರ ನೀರಿನ ಸಂಪರ್ಕ ನೀಡಬೇಕು ಎಂಬ ನಿಯಮ ಇದೆ. ಬಹುತೇಕ ಕಡೆಗಳಲ್ಲಿ ಇದರ ಪಾಲನೆ ಆಗಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಗಡುವು ಅಂತ್ಯಗೊಂಡು ನಾಲ್ಕು ವರ್ಷಗಳು ಕಳೆದಿವೆ. ಕಠಿಣ ಎಚ್ಚರಿಕೆ ನೀಡಿದರೂ ಕಟ್ಟಡ ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಗರದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿದೆ. ಹೀಗಾಗಿ ದಂಡ ವಿಧಿಸಲು  ನಿರ್ಧರಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು.

ತಿಂಗಳ ಶುಲ್ಕದಲ್ಲಿ ದಂಡದ ಪ್ರಮಾಣ
25% ಗೃಹ ಬಳಕೆದಾರರಿಗೆ ಮೊದಲ ಬಾರಿ ವಿಧಿಸಲಾಗುವ ದಂಡ
50% ಮೂರು ತಿಂಗಳ ಬಳಿಕ ದಂಡ (ಗೃಹ ಬಳಕೆ)
50% ಗೃಹೇತರ ಬಳಕೆದಾರರಿಗೆ ಮೊದಲ ಬಾರಿ ವಿಧಿಸಲಾಗುವ ದಂಡ
100% ಗೃಹೇತರ ಬಳಕೆದಾರರಿಗೆ ಮೂರು ತಿಂಗಳ ಬಳಿಕ ದಂಡ

ಮುಖ್ಯಾಂಶಗಳು
* ನಗರದಲ್ಲಿ 40x60 ವಿಸ್ತೀರ್ಣದ 55 ಸಾವಿರ ಕಟ್ಟಡಗಳು

* 2016ರ ಮಾರ್ಚ್ 1ರಿಂದ ದಂಡ  ವಿಧಿಸಲು ತೀರ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT