ಬೆಂಗಳೂರು: ‘ವಿಜಯಾ ದಬ್ಬೆ ಅವರಿಗೆ ಸಾಹಿತ್ಯ ಚಟುವಟಿಕೆ ತೊರೆಯಬೇಕು ಎಂದು ಸಾಕಷ್ಟು ಒತ್ತಡ ಹೇರಲಾಗಿತ್ತು. ಆದರೂ ಅವರು ಸಾಹಿತ್ಯವನ್ನೇ ಅಪ್ಪಿಕೊಂಡು ಮಹಿಳಾ ಚಳವಳಿಗೆ ಗಟ್ಟಿ ನೆಲೆ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು’ ಎಂದು ಲೇಖಕಿ ಡಾ.ಬಿ.ಎಂ. ಸುಮಿತ್ರಾ ಬಾಯಿ ತಿಳಿಸಿದರು.
ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಲೇಖಕಿ ಡಾ. ವಿಜಯಾ ದಬ್ಬೆ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ತ್ರೀವಾದಿ ಸಾಹಿತ್ಯ ಲೋಕದಲ್ಲಿ ದಬ್ಬೆ ಅವರ ನಡಿಗೆ ಅವಿಸ್ಮರಣೀಯ. ‘ಕೊನೆಯಮಾತು’ ಎಂಬ ಶೀರ್ಷಿಕೆಯಲ್ಲಿ ಅವರು ತಮ್ಮ ಮೊದಲ ಕವನ ರಚಿಸಿದ್ದರು. ಕಾವ್ಯ, ವಿಮರ್ಶೆ, ಮೀಮಾಂಸೆಯ ಯುಗದಲ್ಲಿ ತನ್ನದೇ ಆದ ತಾತ್ವಿಕ ನೆಲೆಗಟ್ಟನ್ನು ಇಟ್ಟುಕೊಂಡಿಕೊಂಡಿದ್ದರು’ ಎಂದು ಹೇಳಿದರು.
ಲೇಖಕಿ ಡಾ.ವಿಜಯಾ, ‘ಸರಳತೆ, ಸ್ಪಷ್ಟತೆ ಅವರ ಬರವಣಿಗೆ ಹಾಗೂ ಭಾಷಣದ ಪ್ರಮುಖ ಗುಣಗಳು. ಲೇಖಕಿಯರ ಸಂಘಟನೆಗಳು, ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಸೇರಿ ಅವರು ಸ್ತ್ರೀವಾದಕ್ಕೆ ತಾತ್ವಿಕ ಚೌಕಟ್ಟನ್ನು ನೀಡಿದರು’ ಎಂದು ಸ್ಮರಿಸಿದರು.
‘ಜಾತಿವಾದ ಹಾಗೂ ಮಹಿಳಾ ಶೋಷಣೆಯ ವಿರುದ್ಧ ದನಿ ಎತ್ತಿದ ಅವರು ಹಲವು ವಿರೋಧಗಳ ಮಧ್ಯೆಯೂ ಅಂದುಕೊಂಡಿದ್ದನ್ನು ಸಾಧಿಸಿದರು. ಅಂತಹವರ ವ್ಯಕ್ತಿತ್ವ ಈ ಪೀಳಿಗೆಯವರಿಗೆ ಮಾದರಿಯಾಗಬೇಕು’ ಎಂದು ಹೇಳಿದರು.
ಲೇಖಕಿ ಎನ್. ಗಾಯತ್ರಿ ಮಾತನಾಡಿ, ‘ಸ್ತ್ರೀವಾದವು ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಬೀಜವಾಗಿ ಮೊಳಕೆಯೊಡೆಯುವ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಅವರು ನಡೆಸಿದ ಬಿತ್ತನೆ ಅಮೂಲ್ಯವಾದುದು. ಮಾತು, ಬರಹ ಮತ್ತು ಸಂಘಟಿತ ಕ್ರಿಯೆಯ ಮೂಲಕ ಕರ್ನಾಟಕದ ಮಹಿಳಾ ಚಳವಳಿಗೆ ಮಾಸದ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.