ಬೆಂಗಳೂರು: ‘ಮಹಿಳಾ ಸಾಹಿತ್ಯವನ್ನು ಮುಕ್ತವಾಗಿ ಸ್ವೀಕರಿಸುವ ಮನಸ್ಥಿತಿ ಸಮಾಜದಲ್ಲಿಲ್ಲ. ಮಹಿಳಾ ಸಾಹಿತ್ಯ ಚಿಂತನೆಗೆ ಮನ್ನಣೆ ನೀಡಬೇಕಾದದ್ದು ಆರೋಗ್ಯಕರ ಸಮಾಜದ ಬೆಳವಣಿಗೆ’ ಎಂದು ಶಿಕ್ಷಣ ತಜ್ಞೆ ಡಾ.ಗೀತಾರಾಮಾನುಜಮ್ ಅಭಿಪ್ರಾಯಪಟ್ಟರು.
ಕೆಂಗೇರಿ ಉಪನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಯಶವಂತಪುರ ವಿಧಾನಸಭಾ ಕ್ಷೇತ್ರದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
‘ಕನ್ನಡ ಮಣ್ಣಿನ ಸಂಸ್ಕೃತಿ ಸರ್ವ ಜನಾಂಗವನ್ನೂ ಕೈ ಬೀಸಿ ಆಹ್ವಾನಿಸುವಂತಿರುವಾಗ ಬುದ್ಧಿಜೀವಿಗಳನ್ನೊಳಗೊಂಡ ಸಾಹಿತ್ಯ ಕ್ಷೇತ್ರ ಜಾತೀಯತೆಯಿಂದ ಮುಕ್ತವಾಗಿಲ್ಲ. ನಮ್ಮವರಲ್ಲೇ ‘ಇವ ನಮ್ಮವನು, ಅವ ನಮ್ಮವನಲ್ಲ’ ಎಂಬ ಧೋರಣೆ ಇದ್ದರೆ ಸಾಹಿತ್ಯ ಮುಕ್ತವಾಗಿ ಮೂಡದು. ಸಾರ್ವತ್ರಿಕವಾಗಿಯೂ ಸ್ವೀಕಾರವಾಗದು’ ಎಂದರು.
ಕನ್ನಡ ಶಾಲೆ ಬಲಗೊಳಿಸಿ: ‘ಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಬಲ ಕಳೆದುಕೊಳ್ಳುತ್ತಿರಲು ಕಾರಣ ಹುಡುಕದೇ, ಹಲವು ರಾಜಕೀಯ ನಾಯಕರೇ ಆರ್ಥಿಕ ಪ್ರಭಾವದಿಂದ ವೈಭವದ ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಶಾಲೆಗಳು ಹಳ್ಳಿಗಳಿಗೂ ವ್ಯಾಪಿಸುತ್ತಿವೆ. ಸರ್ಕಾರಿ ಶಾಲೆಗಳನ್ನು ಉಳಿಸುವವರು ಯಾರು, ಕನ್ನಡ ಉಳಿಸಿ ಬೆಳೆಸುವವರು ಯಾರು ಎನ್ನುವ ಪ್ರಶ್ನೆಗಳು ಮೂಡಿವೆ. ಜಾಗತಿಕರಣ, ಆಧುನೀಕರಣದ ಅಬ್ಬರದಲ್ಲಿ ಕನ್ನಡ ಭಾಷೆ ಹಳ್ಳಿಯಲ್ಲಾದರೂ ಜೀವಂತವಾಗಿರಬಹುದೇ ಎಂಬ ನಿರೀಕ್ಷೆ ಸಂಶಯ ಮತ್ತು ಅಪಾಯದ ಮುನ್ಸೂಚನೆ ನೀಡುತ್ತಿದೆ’ ಎಂದರು.
‘ಬೆಂಗಳೂರಿನಲ್ಲಿ ಈಗಾಗಲೇ ಕೆರೆಗಳನ್ನು ನುಂಗಿ ವ್ಯವಹಾರಕ್ಕೆ ಒಡ್ಡಲಾಗಿದೆ. ಈಗ ಸರ್ಕಾರಿ ಶಾಲೆಗಳ ಸರದಿ ಶುರುವಾಗಿದೆ. ಮುಖ್ಯ ರಸ್ತೆಗಳಲ್ಲಿರುವ ಸರ್ಕಾರಿ ಶಾಲೆಗಳ ಜಾಗ ವಿಶಾಲವಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣ ನೀಡಿ, ಶಾಲೆಗಳನ್ನು ಮುಚ್ಚಿ, ಜಾಗ ಕಬಳಿಸುವವರು ಹೆಚ್ಚುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡದಲ್ಲೇ ಸಹಿ: ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ, ‘ನಾನು ಸಹಿ ಮಾಡುವುದು ಕನ್ನಡದಲ್ಲೇ. ಕನ್ನಡದಲ್ಲಿ ಮಾಡುವ ಸಹಿ ನನಗೆ ಅಗಾಧ ಶಕ್ತಿ ತಂದುಕೊಟ್ಟಿದೆ. ನನ್ನ ಮಾತೃ ಭಾಷೆ ಎಲ್ಲ ಭಾಷೆಗಿಂತಲೂ ಎತ್ತರದಲ್ಲಿದೆ’ ಎಂದರು.
ಕನ್ನಡಿಗರು ಕನ್ನಡ ಮಾತನಾಡಲು ಅವಮಾನವೆಂಬುದನ್ನು ಮೊದಲು ಬಿಡಬೇಕು. ಕನ್ನಡದಲ್ಲಿ ಮಾತನಾಡಲು ಹೆಮ್ಮೆಪಡಬೇಕು
ಡಾ.ಗೀತಾರಾಮಾನುಜಮ್
ಯಶವಂತಪುರ ವಿಧಾನಸಭಾ ಕ್ಷೇತ್ರದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ
ಪರಭಾಷಿಗರ ಜತೆಗೆ ಪರಭಾಷೆಯಲ್ಲೇ ಮಾತನಾಡುವ ಮಾನಸಿಕತೆಯನ್ನು ಕನ್ನಡಿಗರು ಬಿಡಬೇಕು.
ಡಿ.ವಿ.ಸದಾನಂದಗೌಡ
ಕೇಂದ್ರ ಸಚಿವ
ಮೆರವಣಿಗೆ ರಂಗೇರಿಸಿದ ಮಂಗಳಮುಖಿಯರು
ಡಾ.ಗೀತಾರಾಮಾನುಜಮ್ ಅವರನ್ನು ಅಲಂಕೃತ ಸಾರೋಟಿನಲ್ಲಿ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಆವರಣದಿಂದ ಶೇಷಾದ್ರಿಪುರ ಪದವಿ ಕಾಲೇಜು ಸಭಾಂಗಣದವರೆಗೆ ಮೆರವಣಿಗೆ ಮಾಡಲಾಯಿತು. ಪೂಜಾ ಕುಣಿತ, ಡೊಳ್ಳು ಕುಣಿತ ಕಲಾವಿದರ ತಂಡ ಮೆರವಣಿಗೆ ಕಳೆಗಟ್ಟಿಸಿದರೆ, ಮಂಗಳಮುಖಿಯರು ಬ್ಯಾಂಡ್ ನಿನಾದಕ್ಕೆ ಕುಣಿದು ಕುಪ್ಪಳಿಸಿ ಮೆರವಣಿಗೆಗೆ ಮತ್ತಷ್ಟು ರಂಗುನೀಡಿದರು.
ಸಭಾಂಗಣದ ಪ್ರವೇಶ ದ್ವಾರದ ಬದಿಯಲ್ಲಿದ್ದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಭೇಟಿ ನೀಡಿದ ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ನೆಚ್ಚಿನ ಲೇಖಕರ ಪುಸ್ತಕಗಳನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿಸಿದರು.
ಸಮ್ಮೇಳನದಲ್ಲಿ ‘ಕನ್ನಡ ಅಂದು ಇಂದು ಮುಂದು’, ‘ಕನ್ನಡ ಸಾಹಿತ್ಯ ಪರಂಪರೆ’ ಕುರಿತು ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ನಡೆದವು.
ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸಾಗಬೇಕಿರುವ ಹಾದಿಯ ಬಗ್ಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಭಿಕರು ನೇರ ಸಂವಾದ ನಡೆಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 16 ಸಾಧಕರನ್ನು ಸನ್ಮಾನಿಸಲಾಯಿತು.ರಂಗತರಂಗ ಟ್ರಸ್ಟ್ ಕಲಾವಿದರ ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಾರದಾ ಕಲಾನಿಕೇತನ ತಂಡದ ಕಲಾವಿದರು ಪ್ರದರ್ಶಿಸಿದ ‘ಮಾಡಿದ್ದುಣ್ಣೋ ಮಾರಾಯ’ ಸಾಮಾಜಿಕ ಹಾಸ್ಯ ನಾಟಕ ಪ್ರೇಕ್ಷಕರನ್ನು ಮುದಗೊಳಿಸಿದವು. ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.