ಬೆಂಗಳೂರು: ‘ಸಾಹಿತ್ಯ ಲೋಕದಲ್ಲೂ ಲಿಂಗತಾರತಮ್ಯ ಜೀವಂತವಾಗಿದೆ. ಜ್ಞಾನಪೀಠ ಪಡೆದಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರೂ ಮಹಿಳೆ ಅಡುಗೆಮನೆಗೆ ಸೀಮಿತವಾಗಿರಬೇಕು ಎಂಬ ಮಾತುಗಳನ್ನಾಡಿದ್ದಾರೆ’ ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಬೇಸರ ವ್ಯಕ್ತಪಡಿಸಿದರು.
ಸ್ವಾಭಿಮಾನಿ ಕರ್ನಾಟಕ ವೇದಿಕೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕಿ ಎ.ಜಿ.ರತ್ನ ಕಾಳೇಗೌಡ ಅವರ ಸಮಗ್ರ ಸಾಹಿತ್ಯ ಕುರಿತ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಸ್ವತಿ ಬಾಯಿ ಅವರು ತಮ್ಮ ಕೃತಿಯನ್ನು ಓದಿ ಅಭಿಪ್ರಾಯ ತಿಳಿಸಬೇಕೆಂದು ಮಾಸ್ತಿಯವರಿಗೆ ಪ್ರತಿಯನ್ನು ಕಳುಹಿಸಿದ್ದರು. ಆಗ ಮಾಸ್ತಿ ಅವರು, ‘ಯಾಕಮ್ಮ ಇದೆಲ್ಲ ಬರೆಯುತ್ತೀರಾ ಸುಮ್ಮನೆ ಅಡುಗೆ ಮಾಡಿಕೊಂಡಿರುವುದಲ್ಲವಾ’ ಎಂದು ಹೇಳಿದ್ದರೆಂದು ಲೇಖಕಿ ತಮ್ಮ ಕೃತಿಯಲ್ಲಿ ಬರೆದುಕೊಂಡಿದ್ದಾರೆ ಎಂದು ವಿವರಿಸಿದರು.
ಖುಷ್ವಂತ್ ಸಿಂಗ್ ಅವರು ಅಮೃತಾ ಸಿಂಗ್ ಅವರಿಗೆ ಹೀಗೆಯೇ ಹೇಳಿದ್ದರು. ಇದಲ್ಲದೆ, ಕವಿಗೋಷ್ಠಿಯೊಂದರಲ್ಲಿ ಹಿರಿಯ ಕವಿಯೊಬ್ಬರು ವಿಜಯಾ ದಬ್ಬೆಗೆ, ‘ನೀವು ಕವಿಗಳನ್ನು ಸೃಷ್ಟಿಸಿ. ನಾವು ಕಾವ್ಯವನ್ನು ಸೃಜಿಸುತ್ತೇವೆ’ ಎಂದಿದ್ದರು. ಇದಕ್ಕೆ ದಬ್ಬೆ ಅವರು, ‘ನಾವು ಎರಡನ್ನೂ ಮಾಡಲು ಶಕ್ತರಿದ್ದೇವೆ. ನಿಮಗೆ ಅದು ಸಾಧ್ಯವಾ’ ಎಂದು ಪ್ರಶ್ನಿಸಿದ್ದರು ಎಂದು ಕೆಲವು ಘಟನೆಗಳನ್ನು ನೆನಪಿಸಿಕೊಂಡರು.
ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಬೆರಳೆಣಿಕೆಯಷ್ಟು ಸಾಹಿತಿಗಳನ್ನು ಬಿಟ್ಟರೆ, ಯಾವ ಸಾಹಿತಿಗಳೂ ತೀವ್ರವಾಗಿ ಪ್ರತಿಭಟಿಸಲಿಲ್ಲ. ಮಹಿಳೆಯರನ್ನು ಈಗಲೂ ಎರಡನೇ ದರ್ಜೆಯ ಪ್ರಜೆಯಾಗಿಯೇ ಕಾಣುತ್ತಾರೆ ಎಂದರು.
ವಿದ್ವಾಂಸ ಮಲ್ಲೇಪುರ ಜಿ. ವೆಂಕಟೇಶ, ‘ಸಾಹಿತ್ಯವನ್ನು ಸಹೃದಯದಿಂದ ನೋಡುವವರ ಲೋಕ ಹಾಗೂ ವಿಮರ್ಶೆ ಲೋಕ ಮೌನವಾಗಿರುವುದು ನವ ಬರಹಗಾರರಿಗೆ ಅಪಾಯಕಾರಿ’ ಎಂದು ಅಭಿಪ್ರಾಯ ಪಟ್ಟರು.
‘ನಾನಾ ರೂಪದಲ್ಲಿ ಸಾಹಿತ್ಯದ ರಾಜಕಾರಣ ಟಿಸಿಲೊಡೆದಿದ್ದು, ಏನನ್ನೂ ವಿಮರ್ಶೆ ಮಾಡದೆ ಮೌನವಹಿಸುವುದು ರಾಜಕೀಯದ ದಾಳವೇ ಆಗಿದೆ. ಈ ತಿರಸ್ಕಾರಕ್ಕೆ ಸಾಕಷ್ಟು ಲೇಖಕರು ಬಲಿಯಾಗುತ್ತಾರೆ. ಹಾಗಾಗಿ ಬರಹಕಾರರು ಆಕೃತಿಯನ್ನು ನಿರ್ಮಿಸುವಂತಹ ಕೃತಿಗಳ ರಚನೆ ಮಾಡಿ, ಆ ಮೂಲಕವೇ ಗುರುತಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ರತ್ನ ಕಾಳೇಗೌಡ, ‘ಇಲ್ಲಿವರೆಗೆ ಸುಮಾರು 80 ಕೃತಿಗಳನ್ನು ರಚಿಸಿದ್ದೇನೆ. ಆದರೆ, ಬಿಡುಗಡೆ ಭಾಗ್ಯ ಸಿಕ್ಕಿದ್ದು ಇದೇ ಮೊದಲು. ಇದನ್ನು ನನ್ನ ಚೊಚ್ಚಲ ಕೃತಿ ಎನ್ನಬಹುದು. ಸಾಹಿತ್ಯ ಲೋಕದಲ್ಲಿ ಸಾಕಷ್ಟು ನೋವುಗಳನ್ನು ನಾನು ಅನುಭವಿಸಿದ್ದೇನೆ. ಆದರೆ, ಈ ಸಂದರ್ಭದಲ್ಲಿ ಖುಷಿಯನ್ನಷ್ಟೇ ಹೇಳುತ್ತೇನೆ’ ಎಂದು ಮನಬಿಚ್ಚಿ ಮಾತನಾಡಿದರು.
ರತ್ನ ಕಾಳೇಗೌಡ ಅವರು ರಚಿಸಿದ ನಾಟಕ ‘ಆತ್ಮಾಹುತಿ’ಯನ್ನು ಬಿಡುಗಡೆಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.