‘ಮೈಸೂರಿನಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ’
ಸಂಸ್ಕೃತ ಬೆಳೆಸಲು ಸರ್ಕಾರ ಉದಾಸೀನ: ಪದ್ಮಾಶೇಖರ್ ಬೇಸರ
ಪ್ರಜಾವಾಣಿ ವಾರ್ತೆ Published 22 ಮೇ 2017, 19:30 IST Last Updated 22 ಮೇ 2017, 19:30 IST ನಿವೃತ್ತ ಅಧ್ಯಾಪಕರಾದ ಕೃಷ್ಣಮೂರ್ತಿ (ಎಡದಿಂದ ಕುಳಿತವರು), ಎಂ.ಆರ್. ಶಾಂತಕುಮಾರ್, ವಿಷ್ಣುಮೂರ್ತಿ, ಸಿ.ಅನಂತ್, ಜಿ.ರಾಘವೇಂದ್ರ ಭಟ್, ಎಲ್.ಚಿಕ್ಕಣ್ಣ ಅವರನ್ನು ಮನು ಬಳಿಗಾರ್ ಸನ್ಮಾನಿಸಿದರು. ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಶಿಲ್ಪಾ, ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಪದ್ಮಾಶೇಖರ್ ಹಾಗೂ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪಿ.ಆರ್.ಪಾಗೋಜಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮೈಸೂರಿನಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ ಆರಂಭಿಸುತ್ತೇವೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪದ್ಮಾಶೇಖರ್ ತಿಳಿಸಿದರು.
ನಗರದಲ್ಲಿ ಸೋಮವಾರ ಆಯೋ ಜಿಸಿದ್ದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ನಿವೃತ್ತ ಅಧ್ಯಾಪ ಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಸ್ಕೃತವನ್ನು ಬೆಳೆಸಲು ಸರ್ಕಾರ ಉದಾಸೀನ ತೋರಿಸುತ್ತಿದೆ. ವಿಶ್ವವಿದ್ಯಾ ಲಯದಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಮುಂದಿನ ತಿಂಗಳಿನಲ್ಲಿ ಅಧ್ಯಯನ ಕೇಂದ್ರ ಆರಂಭಿಸುತ್ತೇವೆ’ ಎಂದರು.
‘ವಿಶ್ವವಿದ್ಯಾಲಯಕ್ಕಾಗಿ ಐದಾರು ಅಂತಸ್ತಿನ ಬೃಹದಾಕಾರದ ಕಟ್ಟಡ ಕಟ್ಟುವ ಕನಸು ನನಗಿದೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ನಗರದಲ್ಲಿ ಈಗಿರುವ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಒಂದು ಮಹಡಿ ಹೆಚ್ಚಿಸಿ ವಿದ್ಯಾರ್ಥಿಗಳ ಓದಿಗೆ ಅನುವು ಮಾಡಿಕೊಡುತ್ತೇವೆ’ ಎಂದು ತಿಳಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರ ಶೇಖರ ಶಿವಾಚಾರ್ಯ ಸ್ವಾಮೀಜಿ, ‘ರಾಜ್ಯದಲ್ಲಿನ ಮಠಗಳಿಂದ ಸಂಸ್ಕೃತ ಉಳಿದಿದೆ. ಕೆಲವರ ಮಡಿವಂತಿಕೆಯಿಂದಾಗಿ ಸಂಸ್ಕೃತ ಬೆಳೆಯುತ್ತಿಲ್ಲ. ಭಾಷೆ ಬೆಳೆಸಲು ವಿಶ್ವವಿದ್ಯಾಲಯವು ಸಂಸ್ಕೃತ ಸಂಭಾಷಣೆಯ ಕಿರುಹೊತ್ತಿಗೆ ಗಳನ್ನು ಮುದ್ರಿಸಿ ಹಂಚಬೇಕು’ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ‘10ನೇ ಶತಮಾನದ ವರೆಗೆ ರಾಜ್ಯದಲ್ಲಿನ ಹೆಚ್ಚು ಜನರಿಗೆ ದೇವನಾಗರಿ ಲಿಪಿ ಬರುತ್ತಿರಲಿಲ್ಲ. ಆಗ, ಕನ್ನಡ ಲಿಪಿಯಿಂದಲೇ ಸಂಸ್ಕೃತ ಭಾಷೆ ರಾಜ್ಯದಲ್ಲಿ ಬೆಳೆಯಿತು’ ಎಂದು ತಿಳಿಸಿದರು.
‘ಕೃಷಿಕ, ಸೈನಿಕ ಮತ್ತು ಶಿಕ್ಷಕರಿಂದ ದೇಶದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತಿದೆ. ನೈತಿಕತೆ ಮತ್ತು ಜ್ಞಾನವನ್ನು ತುಂಬುವ ಗುರುಗಳನ್ನು ಮರೆಯಬಾರದು’ ಎಂದರು.
****
ದೇಶಾಭಿಮಾನ ಮತ್ತು ಭಾಷಾಭಿಮಾನವನ್ನು ಉಕ್ಕಿಸಲು ಕಾವಿಧಾರಿಗಳ ಅಗತ್ಯವಿದೆ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ