ಬೆಂಗಳೂರು: ನಗರದಲ್ಲಿ ಮೊಳೆ ಮಾಫಿಯಾ ಹಾವಳಿ ಜೋರಾಗಿದ್ದು, ಸುಸಜ್ಜಿತ ರಸ್ತೆಗಳಲ್ಲಿ ಪ್ರತಿದಿನವೂ ನೂರಾರು ವಾಹನಗಳು ಪಂಕ್ಚರ್ ಆಗುತ್ತಿವೆ. ಈ ಬಗ್ಗೆ ಹಲವು ಠಾಣೆಗಳಲ್ಲಿ ದೂರು ದಾಖಲಾದರೂ ಮಾಫಿಯಾದ ಕೃತ್ಯ ಮಾತ್ರ ನಿಂತಿಲ್ಲ.
ಇಂಥ ಮಾಫಿಯಾದಿಂದ ಕಷ್ಟ ಅನುಭವಿಸಿದ್ದ ಸಾಫ್ಟ್‌ವೇರ್ ಎಂಜಿನಿಯರ್ 42 ವರ್ಷದ ಬೆನಡಿಕ್ಟ್ ಜೆಬಕುಮಾರ್, ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದುವರೆಗೂ ರಸ್ತೆಯಲ್ಲಿ ಎಸೆದಿದ್ದ 75 ಕೆ.ಜಿಯಷ್ಟು ಮೊಳೆಗಳನ್ನು ಅವರು ಸಂಗ್ರಹಿಸಿದ್ದಾರೆ.
ಇಕೊ ಸ್ಪೇಸ್‌ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಜೆಬಕುಮಾರ್, ಬನಶಂಕರಿಯಲ್ಲಿ ವಾಸವಿದ್ದಾರೆ. ಪ್ರತಿದಿನವೂ ಹೊರವರ್ತುಲ ರಸ್ತೆ ಮೂಲಕ ಸೈಕಲ್‌ನಲ್ಲಿ ಕಚೇರಿಗೆ ಹೋಗುತ್ತಾರೆ. ಮಾರ್ಗಮಧ್ಯೆ ಆಯಸ್ಕಾಂತ್ ನೆರವಿನಿಂದ ಮೊಳೆಗಳನ್ನು ಪತ್ತೆ ಮಾಡುತ್ತಿದ್ದಾರೆ.
ಬೆಳಿಗ್ಗೆ 7ರ ಸುಮಾರಿಗೆ ಮನೆಯಿಂದ ಹೊರಡುವ ಜೆಬಕುಮಾರ್, ಎರಡು ಗಂಟೆಗಳವರೆಗೆ ಮೊಳೆ ಸಂಗ್ರಹಿಸುತ್ತಾರೆ. ಅವರ ಕೆಲಸಕ್ಕೆ ಸಹಕಾರ ನೀಡಿರುವ ಮಗ, 5 ಅಡಿ ಉತ್ತದ ಆಯಸ್ಕಾಂತದ ಕೋಲು ಸಿದ್ಧಪಡಿಸಿ ಕೊಟ್ಟಿದ್ದಾನೆ.
‘2014ರಿಂದ ಈ ಕೆಲಸ ಸಂಗ್ರಹ ಮಾಡುತ್ತಿದ್ದೇನೆ. ದಿನಕ್ಕೆ ಕನಿಷ್ಠ 200 ಗ್ರಾಂ ಹಾಗೂ ಗರಿಷ್ಠ 800 ಗ್ರಾಂನಷ್ಟು ಮೊಳೆ ಸಿಕ್ಕಿವೆ. ಚಪ್ಪಲಿಗೆ ಬಡಿಯುವ ಮೊಳೆಗಳೇ ಹೆಚ್ಚು. ಸದ್ಯ ಸಂಗ್ರಹಿಸಿದ ಮೊಳೆಗಳ ತೂಕ 70 ಕೆ.ಜಿ ಆಗಿದೆ’ ಎಂದು ಬೆನಡಿಕ್ಟ್ ಜೆಬಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘2013ರಲ್ಲಿ ಕೆಲಸ ಸಿಕ್ಕಿತು. ಬನಶಂಕರಿಯಿಂದ ಸಿಲ್ಕ್‌ಬೋರ್ಡ್ ಮಾರ್ಗವಾಗಿ ಇಕೊ ಸ್ಪೇಸ್‌ನಲ್ಲಿರುವ ಕಚೇರಿಗೆ ಬೈಕ್‌ನಲ್ಲಿ ಹೋಗುತ್ತಿದ್ದೆ. ನಾಲ್ಕೇ ವಾರದಲ್ಲಿ ಆರು ಬಾರಿ ಬೈಕ್ ಟೈರ್‌ಗಳು ಪಂಕ್ಚರ್ ಆದವು’
‘ರಸ್ತೆ ಪಕ್ಕದ ಪಂಕ್ಚರ್ ಅಂಗಡಿಯವರು ₹200ರಿಂದ ₹300 ಕೇಳುತ್ತಿದ್ದರು. ಒಂದೇ ಅಂಗಡಿ ಇದ್ದಿದ್ದರಿಂದ ವಿಧಿಯಿಲ್ಲದೆ ಹಣ ಕೊಡುತ್ತಿದೆ’ ಎಂದರು.
ಠಾಣೆಗೆ ದೂರು ಕೊಟ್ಟಿದ್ದರು: ರಸ್ತೆಯಲ್ಲಿ ಮೊಳೆ ಕಂಡುಬರುತ್ತಿದ್ದರಿಂದ ನುಮಾನಗೊಂಡ ಜೆಬಕುಮಾರ್, ಸಂಚಾರ ಠಾಣೆಗೆ ದೂರು ಕೊಟ್ಟಿದ್ದರು.
‘ರಸ್ತೆಯ ಅಕ್ಕ–ಪಕ್ಕದ ಪಂಕ್ಚರ್ ಅಂಗಡಿಯವರು ಈ ಕೃತ್ಯ ಎಸಗುತ್ತಿದ್ದಾರೆ ಎಂಬುದು ಗೊತ್ತಾಗಿತ್ತು. ಆ ಬಗ್ಗೆ ಠಾಣೆಗೆ ದೂರು ಕೊಟ್ಟಿದ್ದೆ. ಪೊಲೀಸರು ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು’
‘ಬಂಧನದ ಬಳಿಕವೂ ರಸ್ತೆಯಲ್ಲಿ ಮೊಳೆ ಬೀಳುವುದು ತಪ್ಪಿಲ್ಲ. ಪ್ರಯಾಣಿಕರು ಪ್ರತಿದಿನವೂ ನರಕಯಾತನೆ ಅನುಭವಿಸುತ್ತಿದ್ದಾರೆ’ ಎಂದು ಜೆಬಕುಮಾರ್ ವಿವರಿಸಿದರು.
ಶಾಶ್ವತ ಪರಿಹಾರ ಅಗತ್ಯ: ‘ಕೆಲ ಸೇತುವೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಪ್ರತಿದಿನಕ್ಕೆ 50ಕ್ಕೂ ಹೆಚ್ಚು ವಾಹನಗಳು ಇಂಥ ಮೊಳೆಗಳಿಂದ ಪಂಕ್ಚರ್ ಆಗುತ್ತಿವೆ. ಕಚೇರಿ ಹಾಗೂ ಇತರೆ ಕೆಲಸಕ್ಕೆ ಹೋಗುವರು ಅದರಿಂದ ಕಂಗಾಲಾಗಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಒಂದಾಗಿ ಚಿಂತನೆ ನಡೆಯಬೇಕು’ ಎಂದು ಜೆಬಕುಮಾರ್ ಅಭಿಪ್ರಾಯಪಟ್ಟರು.
*
‘ಮೈ ರೋಡ್ ಮೈ ರೆಸ್ಪಾನ್ಸಿಬಿಲಿಟಿ’ ಪೇಜ್
ಮೊಳೆ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಜೆಬಕುಮಾರ್ ಅವರು ‘ಮೈ ರೋಡ್ ಮೈ ರೆಸ್ಪಾನ್ಸಿಬಿಲಿಟಿ’ ಫೇಸ್‌ಬುಕ್ ಪೇಜ್ ಹುಟ್ಟುಹಾಕಿದ್ದಾರೆ.
8,771 ಮಂದಿ ಈ ಪೇಜ್ ಲೈಕ್ ಮಾಡಿದ್ದಾರೆ. ಅವರಲ್ಲಿ ಕೆಲವರು, ಮೊಳೆ ಸಂಗ್ರಹಿಸಿ ಅದರ ಭಾವಚಿತ್ರಗಳನ್ನು ಸಹ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಪೇಜ್ ಮೂಲಕವೇ ಮತ್ತಷ್ಟು ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದೇನೆ ಎಂದು ಜೆಬಕುಮಾರ್ ಅವರು ಹೇಳುತ್ತಾರೆ.
*
ಮೈಸೂರು ರಸ್ತೆಯಲ್ಲೂ ಮೊಳೆ ಹಾವಳಿ
ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲೂ ಮೊಳೆ ಹಾವಳಿ ಹೆಚ್ಚಿದೆ. ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದುವರೆಗೂ ಆರೋಪಿಗಳ ಪತ್ತೆ ಆಗಿಲ್ಲ. ಮೊಳೆ ಬೀಳುವುದು ತಪ್ಪುತ್ತಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.