ಬೆಂಗಳೂರು: `ಯಾರ ಬದುಕೂ ಒಬ್ಬರದ್ದಲ್ಲ ಎಂಬ ಭಾವನೆ ಆತ್ಮಕಥೆ ಬರೆಯುವಾಗ ಮತ್ತೆ ಮತ್ತೆ ನನ್ನ ಅನುಭವಕ್ಕೆ ಬರುತ್ತಿತ್ತು' ಎಂದು ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮನಬಿಚ್ಚಿ ನುಡಿದರು.
`ಅಂಕಿತ ಪುಸ್ತಕ'ದ ಆಶ್ರಯದಲ್ಲಿ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ನಡೆದ ಡಾ.ಬಿ.ಎ.ವಿವೇಕ ರೈ ಸಂಪಾದಿಸಿರುವ `ರೂಪಾಂತರ' (ಸಿ.ಎನ್.ಆರ್ ಬದುಕು-ಬರಹಗಳ ಕುರಿತ ಲೇಖನಗಳು) ಮತ್ತು `ನೆರಳುಗಳ ಬೆನ್ನು ಹತ್ತಿ' (ಡಾ.ಸಿ.ಎನ್.ರಾಮಚಂದ್ರನ್ ಅವರ ಆತ್ಮಕಥನ) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
`ನನ್ನ ಬದುಕು ರೂಪಿಸಲು ನೂರಾರು ಮಂದಿ ಯಾವುದೇ ಅಪೇಕ್ಷೆ ಇಲ್ಲದೆ ದುಡಿದಿದ್ದಾರೆ. ಸಹಾಯ ಮಾಡಿದ್ದಾರೆ, ಪ್ರೀತಿಸಿದ್ದಾರೆ. ತಂದೆ ತಾಯಿ, ಹೆಂಡತಿ- ಮಕ್ಕಳು, ಸ್ನೇಹಿತರು, ಗುರುಗಳ ಸಹಾಯ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು, ಓದುಗರು, ಪ್ರಕಾಶಕರು ಪ್ರೋತ್ಸಾಹಿಸಿದ್ದಾರೆ. ತರಗತಿಯಲ್ಲಿ ನಾನು ಮಾಡಿದ ಪಾಠ ನನ್ನೊಬ್ಬನ ಪಾಠ ಆಗಿರಲಿಲ್ಲ. ಅಲ್ಲಿ ವಿದ್ಯಾರ್ಥಿಗಳು, ಗುರುಗಳ ಸಹಾಯ ಇದ್ದೇ ಇರುತ್ತಿತ್ತು' ಎಂದು ಅವರು ನೆನಪಿಸಿಕೊಂಡರು.
`ಎಲ್ಲಿ ಹೋದರೂ ಹೊರಗಿನವನ ಹಾಗೆ ಕಾಣಿಸಿಕೊಳ್ಳುತ್ತೇನೆ. ಆದರೆ, ಯಾರೂ ನನ್ನನ್ನು ಹೊರಗಿನವರ ಹಾಗೆ ಈವರೆಗೆ ಕಂಡಿಲ್ಲ. ಈ ಬದುಕಿನಲ್ಲಿ ನಾನು ತುಂಬಾ ಅದೃಷ್ಟಶಾಲಿ. ನನಗೆ ಪ್ರೀತಿ, ಸ್ನೇಹ, ಗೌರವ, ಅಭಿಮಾನ ಎಲ್ಲವೂ ಸಿಕ್ಕಿದೆ. ಈ ಋಣವನ್ನು ತೀರಿಸಲು ಆಗುವುದಿಲ್ಲ' ಎಂದು ಅವರು ಭಾವುಕರಾದರು.
ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಕೃತಿ ಬಿಡುಗಡೆ ಮಾಡಿ, `ರಾಮಚಂದ್ರನ್ ಅವರು ಕನ್ನಡ ಜಾನಪದ ಐಸಿರಿಯನ್ನು ಇಂಗ್ಲಿಷ್ ಹಾಗೂ ಬೇರೆ ಭಾಷೆಗಳಿಗೆ ಭಾಷಾಂತರಿಸಿ ವಿಶ್ವದಾದ್ಯಂತ ಪಸರಿಸುವಂತೆ ಮಾಡಿದರು. ಅವರ ಸಾಧನೆಯನ್ನು ಎಂದೆಂದಿಗೂ ಮರೆಯಲಾಗದು' ಎಂದರು.
`ಸಿ.ಎನ್.ಆರ್. ಅವರ ಅಭಿಪ್ರಾಯವನ್ನು ಕೆಲವು ಮಂದಿ ಒಪ್ಪದೆ ಇರಬಹುದು. ಕೆಲವೊಮ್ಮೆ ಈ ಮನುಷ್ಯ ಯಾಕೆ ಈ ರೀತಿ ಮಾತನಾಡುತ್ತಾನೆ ಎಂದು ಅನಿಸುತ್ತದೆ. ಅವರು ಎಂದೂ ಸುಳ್ಳು ಹೇಳಿದವರಲ್ಲ. ಭಾರಿ ಅಂತಃಕರಣ ಉಳ್ಳ ಮನುಷ್ಯ' ಎಂದು ಅವರು ಅಭಿಪ್ರಾಯಪಟ್ಟರು.
ನವದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಿರ್ದೇಶಕ ಡಾ.ಪುರುಷೋತ್ತಮ ಬಿಳಿಮಲೆ, `ಸಂಸ್ಕೃತ ಜ್ಞಾನ, ಪಶ್ಚಿಮದ ತಿಳಿವಳಿಕೆ, ಕನ್ನಡ ಪಾರಂಪರಿಕ ಕಾವ್ಯದ ತಿಳಿವಳಿಕೆ, ಜಾನಪದ ತಿಳಿವಳಿಕೆ ಎಂಬ ನಾಲ್ಕು ಬಗೆಯ ಪಾಂಡಿತ್ಯಗಳು ಸಿ.ಎನ್.ಆರ್. ಅವರಿಗೆ ದತ್ತವಾಗಿದ್ದವು. ಸಂಸ್ಕೃತ ಓದಿದರೂ ಅವರು ಪುರೋಹಿತಶಾಹಿಯಾಗಲಿಲ್ಲ. ಪಾಶ್ಚಾತ್ಯ ತಿಳಿವಳಿಕೆ ಇದ್ದರೂ ವಸಾಹತುಶಾಹಿ ಆಗಲಿಲ್ಲ. ಪರಂಪರೆಗೆ ಸಿಲುಕಿ ಶುಷ್ಕರಾಗಲಿಲ್ಲ. ಜಾನಪದದೊಳಗೆ ಸಿಲುಕಿ ಜಾನಪದರಾಗಲಿಲ್ಲ. ಇವೆಲ್ಲವನ್ನೂ ಸೇರಿಸಿಕೊಂಡು ಮಹಾನ್ ಪಂಡಿತರಾದರು' ಎಂದು ವಿಶ್ಲೇಷಿಸಿದರು.
ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, `ಶೂದ್ರ ವರ್ಗದಿಂದ ಬಂದ ನಾವೆಲ್ಲ ಮೇಲ್ವರ್ಗದ ವಿಮರ್ಶಕರನ್ನು ಗುಮಾನಿಯಿಂದ ಕಾಣುತ್ತಿದ್ದೆವು. ಪೈಪ್ ಸೇದುವ ಗುಣದಿಂದಾಗಿ ಸಿ.ಎನ್.ಆರ್. ನಮಗೆ ಹತ್ತಿರವಾಗುತ್ತಾ ಬಂದರು. ಆದರೂ, ನಮ್ಮ ಇಂಗ್ಲಿಷ್ ದ್ವಂದ್ವದಿಂದ ಅವರನ್ನು ಸಂಶಯದಿಂದಲೇ ಕಂಡೆವು. ನನಗೆ ಉಗ್ರಾಣ ಪ್ರಶಸ್ತಿ ಸಿಕ್ಕಾಗ ಪ್ರೀತಿಯಿಂದ ಮಾತನಾಡಿದರು. ಆಗ ನನಗೆ ಈ ವ್ಯಕ್ತಿಯನ್ನು ಪ್ರೀತಿಸಬಹುದು ಎಂದು ಅನಿಸಿತ್ತು' ಎಂದರು.
ವಿಮರ್ಶಕ ಪ್ರೊ.ಟಿ.ಪಿ.ಅಶೋಕ, `ಸಿ.ಎನ್.ಆರ್. ಆತ್ಮಕಥೆಯಲ್ಲಿ ವಿನಯ, ಪ್ರೀತಿ, ಆತ್ಮವಿಮರ್ಶೆ ಇದೆ. ಆತ್ಮವಿಮರ್ಶೆ, ಭಾವುಕತೆ, ನೈತಿಕ ದ್ವಂದ್ವಗಳು ಈ ಕೃತಿಯುದ್ದಕ್ಕೂ ಕಾಣುತ್ತವೆ. ಈ ಆತ್ಮಕಥೆ ಅರ್ಧ ಶತಮಾನದ ಸಾಂಸ್ಕೃತಿಕ ಚರಿತ್ರೆಯ ಭಾಗ' ಎಂದು ಬಣ್ಣಿಸಿದರು.
ಹಿರಿಯ ಸಾಹಿತಿ ಡಾ.ಬಿ.ಎ.ವಿವೇಕ ರೈ, `ಕನ್ನಡದ ಎಲ್ಲ ಲೇಖಕರನ್ನು ಪ್ರವೇಶಿಸುವ ಮನಸ್ಸು ಸಿ.ಎನ್.ಆರ್. ಅವರಲ್ಲಿ ಇದೆ. ಅವರ ಒಟ್ಟು ಬದುಕಿನಲ್ಲಿ ಸ್ಪಷ್ಟವಾದ ಪ್ರಗತಿಪರ ನಿಲುವು ಇದೆ. ಸತ್ಯ ಹೇಳುವ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ' ಎಂದರು.
ನಟ ರವಿ ಭಟ್, ಪತ್ನಿ ಸರಸ್ವತಿ ರಾಮಚಂದ್ರನ್ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕೃತ್ತಿಕಾ ಶರತ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
`ನನ್ನ ಕಾದಂಬರಿ ಓದುವ ನರಕಯಾತನೆ'
ನಾನು `ಶಾಮಣ್ಣ' ಕಾದಂಬರಿ ಬರೆದಾಗ ಕೆಲವು ವಿಮರ್ಶಕರು ಹೊಗಳಿ ನನ್ನನ್ನು ಅಟ್ಟಕ್ಕೇರಿಸಿದರು. ಸಿ.ಎನ್.ಆರ್. ಅವರು `ಪ್ರಜಾವಾಣಿ' ಪತ್ರಿಕೆಯಲ್ಲಿ ಕಠೋರ ವಿಮರ್ಶೆ ಬರೆದರು. ಇದರಿಂದ ಅಸಮಾಧಾನಗೊಂಡ ನಾನು ಅವರೊಂದಿಗೆ ಜಗಳ ಕಾದೆ. ಈ ಕಾದಂಬರಿಯನ್ನು ಇನ್ನೊಮ್ಮೆ ಓದು ಎಂದು ಸಲಹೆ ನೀಡಿದರು. ನಾನು ಆ ಕೆಲಸ ಮಾಡಲಿಲ್ಲ.
10 ವರ್ಷಗಳ ನಂತರ ಕಾದಂಬರಿಯನ್ನು ಮರು ಮುದ್ರಣ ಮಾಡಬೇಕಾಯಿತು. ಆಗ ಕಾದಂಬರಿ ಓದುವಾಗ ನರಕಯಾತನೆ ಅನುಭವಿಸಿದೆ. ಆಗ ಅವರ ಮಾತು ನೆನಪಾಯಿತು. ಆಮೂಲಾಗ್ರವಾಗಿ ಆ ಕಾದಂಬರಿಯನ್ನು ತಿದ್ದಿ ಬರೆದೆ. ಇದು ಲೇಖಕರನ್ನು ವಿಮರ್ಶಕರು ಬೆಳೆಸುವ ಕ್ರಮ.
-ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ
`ಈಗಲಾದರೂ ಪೈಪ್ ಸೇದುವುದನ್ನು ಬಿಡಿ, ಬಿಡಬೇಡಿ'
`ಯಾರೇ ಏನೇ ಹೇಳಿದರೂ ಪೈಪ್ ಸೇದುವುದನ್ನು ಮಾತ್ರ ಬಿಡಬೇಡಿ. ಈಗ ಮನುಷ್ಯನಿಗೆ ಮನೋರಂಜನೆಯೇ ಇಲ್ಲ. ಅದಕ್ಕಾಗಿ ಈ ಮನೋರಂಜನೆಯನ್ನು ಬಿಡಬೇಡಿ. ಆದರೆ, ಪ್ರಮಾಣ ಮಾತ್ರ ಕಡಿಮೆ ಮಾಡಿ. ದಿನಕ್ಕೆ ಎರಡು ಬಾರಿ ಪೈಪ್ ಸೇದಿದರೆ ಸಾಕು' ಎಂದು ಕುಂ. ವೀರಭದ್ರಪ್ಪ ಅವರು ಸಿ.ಎನ್.ಆರ್. ಅವರಲ್ಲಿ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಪುರುಷೋತ್ತಮ ಬಿಳಿಮಲೆ ಅವರು, `ಕೆಲವು ಸಮಯದ ಹಿಂದೆಯೇ ಪೈಪ್ ಸೇದುವ ಅಭ್ಯಾಸ ಬಿಡುವಂತೆ ವಿನಂತಿಸಿದ್ದೆ' ಎಂದು ಸ್ಮರಿಸಿಕೊಂಡರು. `ನಾನು ಆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದೆ. ಆ ಸಮಯದಲ್ಲಿ ಸಿ.ಎನ್.ಆರ್. ಅವರು ದಿಲ್ಲಿಗೆ ಬಂದಿದ್ದರು. ಈ ಪ್ರಾಯದಲ್ಲಿ ನೀವು ಸಿಗರೇಟ್ ಬಿಟ್ಟರೆ ಉತ್ತಮ ಎಂದು ಸಿ.ಎನ್.ಆರ್. ಅವರಿಗೆ ಸಲಹೆ ನೀಡಿದ್ದೆ. ಇಷ್ಟು ವರ್ಷ ಹೇಗೂ ಆಯಿತಲ್ಲ. ಇನ್ನೂ ಹೇಗೂ ನಡೆಯುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.