ADVERTISEMENT

‘ರಂಗಭೂಮಿ ಸ್ಥಿತ್ಯಂತರದ ವೀಕ್ಷಕರು’

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2017, 19:42 IST
Last Updated 26 ಆಗಸ್ಟ್ 2017, 19:42 IST
ರಂಗಕರ್ಮಿಗಳಾದ ಕಪ್ಪಣ್ಣ, ಕಾಲಭೈರವ ಗಂಗಾಧರ್‌, ಬಿ.ವಿ. ಜಯಶ್ರೀ, ರಾಜಾರಾಂ, ನಾಗರಾಜ ಮೂರ್ತಿ, ಪ್ರಸನ್ನ ಅವರು ಏಣಗಿ ಬಾಳಪ್ಪ ಹಾಗೂ ಬಿ.ವಿ.ಗುರುಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ರಂಗಕರ್ಮಿಗಳಾದ ಕಪ್ಪಣ್ಣ, ಕಾಲಭೈರವ ಗಂಗಾಧರ್‌, ಬಿ.ವಿ. ಜಯಶ್ರೀ, ರಾಜಾರಾಂ, ನಾಗರಾಜ ಮೂರ್ತಿ, ಪ್ರಸನ್ನ ಅವರು ಏಣಗಿ ಬಾಳಪ್ಪ ಹಾಗೂ ಬಿ.ವಿ.ಗುರುಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇಪ್ಪತ್ತು ಮತ್ತು ಇಪ್ಪತ್ತೊಂದನೇ ಶತಮಾನಗಳ ಎರಡೂ ಕಾಲಘಟ್ಟವನ್ನು ಕಂಡಿರುವ ಏಣಗಿ ಬಾಳಪ್ಪ ಅವರು ಹಲವು ಸಾಮಾಜಿಕ ಹಾಗೂ ರಂಗಭೂಮಿಯ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿದ್ದರು’ ಎಂದು ರಂಗಕರ್ಮಿ ಪ್ರಸನ್ನ ಸ್ಮರಿಸಿಕೊಂಡರು.

ರಂಗಭೂಮಿ ಕ್ರಿಯಾ ಸಮಿತಿ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ಏಣಗಿ ಬಾಳಪ್ಪ ಹಾಗೂ ಬಿ.ವಿ ಗುರುಮೂರ್ತಿ’ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಕರ್ಮಿ ಕೆ.ವಿ.ನಾಗರಾಜ ಮೂರ್ತಿ, ‘ಬಿ.ವಿ. ಗುರುಮೂರ್ತಿ ಅವರು ಮೈಸೂರು ಬ್ಯಾಂಕ್‌ನಲ್ಲಿ ಕನ್ನಡ ಬಳಗವನ್ನು ಸ್ಥಾಪಿಸಿದವರು. ನವರತ್ನ ರಾಜ ಸ್ಪರ್ಧೆ ನಡೆಸುವ ಮೂಲಕ ಅನೇಕ ಬ್ಯಾಂಕ್‌ ನೌಕರರನ್ನು ರಂಗಭೂಮಿಗೆ ಪರಿಚಯಿಸಿದರು’ ಎಂದು ಹೇಳಿದರು.

ADVERTISEMENT

‘ಬ್ಯಾಂಕ್‌ನಿಂದ ನಿವೃತ್ತಿ ಹೊಂದಿದ ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ವ್ಯವಹರಿಸದ ಬ್ಯಾಂಕ್‌ಗಳ ಪಟ್ಟಿ ತಯಾರಿಸಿ, ಪ್ರಾಧಿಕಾರಕ್ಕೆ ಮಾಹಿತಿ ನೀಡುತ್ತಿದ್ದರು’ ಎಂದು ಹೇಳಿದರು.

‘ಶತಾಯುಷಿಗಳಾಗಿದ್ದರೂ ಏಣಗಿ ಬಾಳಪ್ಪ ಅವರಲ್ಲಿದ್ದ ಲವಲವಿಕೆಯನ್ನು ಇಂದಿನ ಯುವ ರಂಗಕರ್ಮಿಗಳು ಅನುಸರಿಸಬೇಕು. ಇಳಿ ವಯಸ್ಸಿನಲ್ಲೂ ಅವರು ರಂಗಗೀತೆಗಳನ್ನು ಹಾಡುತ್ತಿದ್ದ ಪರಿ ನಮ್ಮನ್ನು ಬೆರಗುಗೊಳಿಸುತ್ತಿತ್ತು’ ಎಂದು ನೆನಪಿಸಿಕೊಂಡರು.

ಲೇಖಕ ಮಂಜುನಾಥ ಅಜ್ಜಂಪುರ, ‘40 ವರ್ಷಗಳ ಹಿಂದೆಯೇ ಕನ್ನಡ ಹೋರಾಟಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ಬ್ಯಾಂಕ್‌ಗಳಲ್ಲಿ ಈಗ ಕನ್ನಡ ಬಳಕೆಯಾಗುತ್ತಿದೆ ಎಂದರೆ ಅದರಲ್ಲಿ ಗುರುಮೂರ್ತಿ ಅವರ ಕೊಡುಗೆ ಬಹಳಷ್ಟಿದೆ’ ಎಂದು ತಿಳಿಸಿದರು.

ರಂಗಕರ್ಮಿ ರಾಜರಾಮ್‌, ‘ಏಣಗಿ ಬಾಳಪ್ಪ ಅವರು ರಂಗಭೂಮಿಯ ನಡೆದಾಡುವ ವಿಶ್ವಕೋಶ. ಸುವರ್ಣ ಕಾಲದ ರಂಗಭೂಮಿಯ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ಆಗಿನ ರಂಗ ಪ್ರಯೋಗಗಳನ್ನು ನೋಡಲು ಸಾಧ್ಯವಿಲ್ಲ. ಆದರೆ, ಅವರು ಹೇಳುತ್ತಿದ್ದ ರಂಗಗೀತೆಗಳ ಮೂಲಕ ನಾವು ಅದನ್ನು ಕಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.