ADVERTISEMENT

ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:27 IST
Last Updated 8 ಅಕ್ಟೋಬರ್ 2015, 19:27 IST

ಬೆಂಗಳೂರು: ವೀರಣ್ಣಪಾಳ್ಯದ ಮಾನ್ಯತಾ ಟೆಕ್‌ಪಾರ್ಕ್ ಹಿಂಭಾಗದಲ್ಲಿರುವ ರಾಜಕಾಲುವೆಯಲ್ಲಿ ಬುಧವಾರ ಈಜಲು ತೆರಳಿ ಕೊಚ್ಚಿ ಹೋಗಿದ್ದ, ಬಾಲಕ ಪ್ರಕಾಶ್‌ (15) ಮೃತದೇಹ ಪತ್ತೆಯಾಗಿದೆ. ಎರಡು ದೋಣಿ, ಒಂದು ತೆಪ್ಪ ಹಾಗೂ ಜೆಸಿಬಿ ಯಂತ್ರದೊಂದಿಗೆ ಗುರುವಾರ ಬೆಳಿಗ್ಗೆ 6 ಗಂಟೆಗೆ ಶೋಧಕಾರ್ಯ ಆರಂಭಿಸಿದ ಅಗ್ನಿಶಾಮಕ ಸಿಬ್ಬಂದಿ, 10.15ರ ಸುಮಾರಿಗೆ ಘಟನಾ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿದ್ದ ಬಾಲಕನ ಮೃತದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದರು.

ರಾಜಕಾಲುವೆಗೆ ಹೊಂದಿಕೊಂಡಂತೆ ದಾಸರಹಳ್ಳಿ ಕೆರೆ ಇದೆ. ಇತ್ತೀಚೆಗೆ ನಗರದಲ್ಲಿ ಮಳೆ ಸುರಿಯುತ್ತಿರುವುದರಿಂದ, ಕೆರೆ ಕೋಡಿ ಹರಿದು ನೀರು ಕಾಲುವೆ ಸೇರುತ್ತಿತ್ತು. ಹಾಗಾಗಿ ನೀರು ರಭಸವಾಗಿ ಹರಿಯುತ್ತಿತ್ತು. ಜತೆಗೆ ಹೂಳು ತುಂಬಿಕೊಂಡಿದ್ದರಿಂದ, ಶೋಧಕಾರ್ಯ ಸ್ವಲ್ಪ ವಿಳಂಬವಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು. ಘಟನೆ ನಡೆದ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್‌ ದೂರದವರೆಗೆ ನಡೆದ ಶೋಧ ಕಾರ್ಯಾಚರಣೆಯಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು ಎಂದರು.

  ಡಿ.ಜೆ. ಹಳ್ಳಿಯ ನಿವಾಸಿಗಳಾದ ವೆಂಕಟೇಶ್ ಮತ್ತು ಜಯಾ ದಂಪತಿಯ ಪುತ್ರನಾದ ಪ್ರಕಾಶ್, ತನ್ನ ಅಣ್ಣ ಸೂರ್ಯ ಮತ್ತು ಸ್ನೇಹಿತ ಚಾರ್ಲ್ಸ್‌ ಜತೆ, ಬುಧವಾರ ಸಂಜೆ 4 ಗಂಟೆಗೆ ರಾಜಕಾಲುವೆಗೆ ಹೊಂದಿಕೊಂಡಂತಿದ್ದ ದಾಸರಹಳ್ಳಿ ಕೆರೆಗೆ ಈಜಲು ತೆರಳಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ. ದಂಪತಿಯ ಇಬ್ಬರು ಗಂಡು ಮಕ್ಕಳ  ಪೈಕಿ ಸೂರ್ಯ (17) ಶಿವಾಜಿನಗರದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಕಿರಿಯವನಾದ ಪ್ರಕಾಶ್‌ (15) ಡಿ.ಜೆ. ಹಳ್ಳಿಯ ತಮಿಳ್ ಸಂಘಂ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ.

ಸಮರ್ಪಕವಾಗಿ ನಿರ್ಮಿಸಿಲ್ಲ: ‘ಈ ಭಾಗದಲ್ಲಿ ನಿರ್ಮಿಸಿರುವ ರಾಜಕಾಲುವೆ ಅಷ್ಟೊಂದು ಸಮರ್ಪಕವಾಗಿಲ್ಲ. ಮನಬಂದಂತೆ ನಿರ್ಮಿಸಿದ್ದಾರೆ. ಕಾಲಕಾಲಕ್ಕೆ ಹೂಳು ತೆಗೆಯುವುದಿಲ್ಲ. ಕಾಲುವೆಯ ಅಲ್ಲಲ್ಲಿ ಗಿಡಗಂಟಿಗಳು ಎತ್ತರವಾಗಿ ಬೆಳೆದು ನಿಂತಿವೆ’ ಎಂದು ಸ್ಥಳೀಯರೊಬ್ಬರು ದೂರಿದರು. ‘ಅಲ್ಲದೆ, ಅಕ್ಕಪಕ್ಕದವರು ರಾತ್ರೊರಾತ್ರಿ ತ್ಯಾಜ್ಯ ತಂದು ಸುರಿಯುವುದು ಮಾಮೂಲಾಗಿದೆ. ಹಾಗಾಗಿ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲ’ ಎಂದು ಆರೋಪಿಸಿದರು.

ಕಾಲು ಜಾರಿ ಬಿದ್ದ
ಕೆರೆಯಲ್ಲಿ ಮೊದಲಿಗೆ ಈಜಿರುವ ಮೂವರು, ಬಳಿಕ ನೀರಿನ ರಭಸ ಹೆಚ್ಚಾಗಿದ್ದ ರಾಜಕಾಲುವೆಯ ನೀರಿನಲ್ಲಿ   ಆಟವಾಡುತ್ತಿದ್ದರು. ಈ ವೇಳೆ ಪ್ರಕಾಶ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಅಲ್ಲದೆ, ಪ್ರಕಾಶ್‌ಗೆ ಅಷ್ಟಾಗಿ ಈಜಲು ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.

ತಕ್ಷಣ ಆತನ ಅಣ್ಣ ಮತ್ತು ಸ್ನೇಹಿತ ಪ್ರಕಾಶನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ನೀರಿನ ಸೆಳೆತಕ್ಕೆ ಸಿಕ್ಕಿದ ಆತ ಕೊಚ್ಚಿ ಹೋಗಿದ್ದಾನೆ. ಆಗ ಇಬ್ಬರು ಸ್ಥಳೀಯರ ನೆರವಿಗಾಗಿ ಕೂಗಿಕೊಂಡಿದ್ದಾರೆ. ಕೂಗು ಕೇಳಿಸಿಕೊಂಡು ಕೆಲ ಸ್ಥಳೀಯರು ಸ್ಥಳಕ್ಕೆ ಬರುಷ್ಟರಲ್ಲಿ ಬಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT