ಬೆಂಗಳೂರು: ರಾಜ್ಯದ ರಾಷ್ಟ್ರಕವಿ ಗೌರವಕ್ಕೆ ಆಯ್ಕೆಯಾಗುವ ಕವಿ ಹೆಸರು ಇದೇ 13ರಂದು (ಶುಕ್ರವಾರ) ಬಹುತೇಕ ಅಂತಿಮವಾಗುವ ಸಾಧ್ಯತೆ ಇದೆ.
ರಾಷ್ಟ್ರಕವಿ ಆಯ್ಕೆಗೆ ರಚಿಸಲಾಗಿರುವ ಡಾ. ಕೋ. ಚೆನ್ನಬಸಪ್ಪ ನೇತೃತ್ವದ ತಜ್ಞರ ಸಮಿತಿಯು 13ರಂದು ಸಭೆ ಸೇರಲಿದ್ದು, ಅಂದೇ ಅಂತಿಮ ನಿರ್ಧಾರ ಅಂದು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಮಿತಿಯ ಪದ ನಿಮಿತ್ತ ಸದಸ್ಯರಾಗಿರುವ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
96 ಪ್ರತಿಕ್ರಿಯೆಗಳು |
---|
ರಾಷ್ಟ್ರಕವಿ ಆಯ್ಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 96 ಅಭಿಪ್ರಾಯಗಳು ಬಂದಿವೆ. ಮೂವರು ಇಂತಹ ಆಯ್ಕೆಯೇ ಬೇಡ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ, ಸೂಕ್ತ ವ್ಯಕ್ತಿಯನ್ನು ಶಿಫಾರಸು ಮಾಡುವಂತೆ 130 ವಿದ್ವಾಂಸರಿಗೆ ಸಮಿತಿ ಕೋರಿತ್ತು. 26 ಮಂದಿ ಪ್ರತಿಕ್ರಿಯಿಸಿದ್ದಾರೆ. ಏಳು ಮಂದಿ ರಾಷ್ಟ್ರಕವಿ ಆಯ್ಕೆಯೇ ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ. |
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಂಬತ್ತು ಮಂದಿಯ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಅದರಲ್ಲಿ ಮೂವರು ಹಿರಿಯರ ಹೆಸರು ಮುಂಚೂಣಿಯಲ್ಲಿದೆ’ ಎಂದರು.
‘ರಾಷ್ಟ್ರಕವಿ ಆಯ್ಕೆ ಕುರಿತಂತೆ ಸಮಿತಿಯಲ್ಲೇ ಭಿನ್ನ ಅಭಿಪ್ರಾಯಗಳು ಕೇಳಿ ಬಂದಿವೆ. ಹಾಗಾಗಿ ಆಯ್ಕೆ ನಿಧಾನವಾಗಿದೆ. ಇಂತಹ ಬಿರುದು ಬಾವಲಿಗಳ ಅಗತ್ಯವಿದೆಯೇ ಎಂದು ಕೆಲವರು ಅಭಿಪ್ರಾಯಪಟ್ಟರೆ, ‘ರಾಷ್ಟ್ರಕವಿ’ ಯಾಕೆ? ‘ನಾಡಕವಿ’ ಎಂದು ಕರೆದರೆ ಆಗುವುದಿಲ್ಲವೇ ಎಂಬ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ’ ಎಂದರು.
‘ಈ ಗೌರವಕ್ಕೆ ಕವಿಗಳೇ ಆಗಬೇಕೆ? ಕವಯಿತ್ರಿಗಳು ಆಗುವುದಿಲ್ಲವೇ? ಇತರ ಸಾಹಿತಿಗಳನ್ನು ಪರಿಗಣಿಸಲು ಸಾಧ್ಯವಿಲ್ಲವೇ? ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ’ ಎಂದರು.
ನಿಯಮಗಳ ರಚನೆ: ಅರ್ಹರನ್ನು ಆಯ್ಕೆ ಮಾಡುವ ಸವಾಲು ಸಮಿತಿಯ ಮುಂದಿದೆ. ಇದರ ಜೊತೆಗೆ ರಾಷ್ಟ್ರಕವಿ ಆಯ್ಕೆಗೆ ಮಾನದಂಡ ಅಥವಾ ನಿಯಮಗಳನ್ನು ರಚಿಸಿ ಸಮಿತಿಯು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.