ಬೆಂಗಳೂರು: ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್‌ಗೆ ಸೇರಿದ ಭೂಮಿಯಲ್ಲಿ ಸರ್ಕಾರದ ಎರಡು ಇಲಾಖೆ ಮತ್ತು ಮೂವರು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿರುವುದು ಜಂಟಿ ಸರ್ವೆಯಲ್ಲಿ ಪತ್ತೆಯಾಗಿದೆ.
ಅರಣ್ಯ, ಕಂದಾಯ ಹಾಗೂ ಸರ್ವೆ ಇಲಾಖೆ ಈ ಎಸ್ಟೇಟ್‌ನಲ್ಲಿ ಆಗಿರುವ ಒತ್ತುವರಿ ಗುರುತಿಸಲು ಐದು ತಿಂಗಳುಗಳಿಂದ ಜಂಟಿ ಡಿಜಿಟಲ್ ಸರ್ವೆ ಕೈಗೊಂಡಿದ್ದವು.
‘468 ಎಕರೆ 33 ಗುಂಟೆ ವಿಸ್ತೀರ್ಣದ ಎಸ್ಟೇಟ್‌ನಲ್ಲಿ 15 ಎಕರೆ ಜಾಗವನ್ನು ರಾಜ್ಯ ಸರ್ಕಾರ ರೇಷ್ಮೆ ಇಲಾಖೆ ಬಳಸಿಕೊಂಡಿದೆ. 1 ಎಕರೆ 20 ಗುಂಟೆಯನ್ನು ಆಯುಷ್ ಇಲಾಖೆ ಉಪಯೋಗಿಸಿಕೊಂಡಿದೆ. ಸರ್ವೆ ನಂ. 38ರ ಆಸುಪಾಸಿನಲ್ಲಿ ಮೂವರು ಖಾಸಗಿ ವ್ಯಕ್ತಿಗಳಲ್ಲಿ ಒಬ್ಬರು 10 ಗುಂಟೆ, ಇನ್ನೊಬ್ಬರು 12 ಗುಂಟೆ ಹಾಗೂ ಮತ್ತೊಬ್ಬರು 15 ಗುಂಟೆ ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿರುವುದು ಸರ್ವೆಯಲ್ಲಿ ಕಂಡುಬಂದಿದೆ’ ಎಂದು ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಚ್.ಪುಟ್ಟಹಲಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ವೆ ವರದಿ ಮತ್ತು ನಕ್ಷೆಯನ್ನು ಕಂದಾಯ ಇಲಾಖೆ ಮಂಡಳಿಗೆ ಸಲ್ಲಿಸಿದೆ. ಸರ್ಕಾರದ ಎರಡು ಇಲಾಖೆಗಳ ಒತ್ತುವರಿ ಹೊರತುಪಡಿಸಿ, ಖಾಸಗಿ ವ್ಯಕ್ತಿಗಳ ಒತ್ತುವರಿ ತೆರವುಗೊಳಿಸಿ, ಮಂಡಳಿಯ ಸುಪರ್ದಿಗೆ ಕೊಡುವಂತೆ ತಹಶೀಲ್ದಾರ್ ಮತ್ತು ಭೂ ಸರ್ವೇಕ್ಷಣಾ ಇಲಾಖೆಗೆ ಪತ್ರ ಬರೆಯಲಾಗಿದೆ. ರೇಷ್ಮೆ ಮತ್ತು ಆಯುಷ್ ಇಲಾಖೆಗಳು ಮಾಡಿರುವ ಒತ್ತುವರಿ ಜಾಗದ ಒಡೆತನವೂ ಮಂಡಳಿ ಬಳಿಯೇ ಇರಲಿದೆ’ ಎಂದು ತಿಳಿಸಿದರು.
ಮ್ಯೂಸಿಯಂ ನೀಲನಕ್ಷೆಗೆ ಉಪಸಮಿತಿ ರಚನೆ: ಸುಮಾರು ₹25 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರೋರಿಚ್ ಮತ್ತು ದೇವಿಕಾರಾಣಿ ಮ್ಯೂಸಿಯಂಗೆ ಜನವರಿಯಲ್ಲಿ ಶಂಕುಸ್ಥಾಪನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮ್ಯೂಸಿಯಂ ನೀಲನಕ್ಷೆಯನ್ನು ಆದಷ್ಟು ಶೀಘ್ರ ಅಂತಿಮಗೊಳಿಸಲು ಸರ್ಕಾರ ಉಪ ಸಮಿತಿಯನ್ನೂ ರಚಿಸಿದೆ.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಆರ್.ಸುಧಾಕರ್ ರಾವ್ ನೇತೃತ್ವದ ಈ ಉಪ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಅಭಿಜಿತ್ ಸೇನ್ ಗುಪ್ತ, ಚಿರಂಜೀವಿ ಸಿಂಗ್, ರಂಗಕರ್ಮಿ ಪ್ರಕಾಶ್ ಬೆಳವಾಡಿ, ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ (ಚೀಫ್ ಕ್ಯುರೇಟರ್) ಸುರೇಶ್, ಪುರಾತತ್ವ ಇಲಾಖೆ ಆಯುಕ್ತ ವೆಂಕಟೇಶ್ ಸದಸ್ಯರಾಗಿದ್ದಾರೆ.
ರಾಜ್ಯ ಸರ್ಕಾರದ ಈ ಹಿಂದಿನ ಮುಖ್ಯಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮ್ಯೂಸಿಯಂ ನೀಲನಕ್ಷೆ ಬಗ್ಗೆ ಚರ್ಚೆ ನಡೆಯಿತು. ಪುರಾತತ್ವ ಇಲಾಖೆಯು ಸಿದ್ಧಪಡಿಸಿರುವ ನೀಲನಕ್ಷೆಯನ್ನು ತಜ್ಞರು ಒಪ್ಪಲಿಲ್ಲ. ಮ್ಯೂಸಿಯಂ ಪಾರಂಪರಿಕ ಕಟ್ಟಡದ ಶೈಲಿ ಮತ್ತು ಅಂತರರಾಷ್ಟ್ರೀಯ ಕಲಾ ತಾಣದಂತಿರಬೇಕೆಂದು ಅಭಿಪ್ರಾಯಪಟ್ಟರು. ತಜ್ಞ ವಾಸ್ತುಶಿಲ್ಪಿಗಳು ಸಿದ್ಧಪಡಿಸಿರುವ ನೀಲನಕ್ಷೆಯಲ್ಲಿ ಮಾರ್ಪಾಟು ಮಾಡಲು ಸಲಹೆ ನೀಡಿದರು.
ನೀಲನಕ್ಷೆ ಅಂತಿಮಗೊಳಿಸಲು ತಜ್ಞರ ಉಪ ಸಮಿತಿ ರಚಿಸಲಾಯಿತು. ಉಪಸಮಿತಿ ಸಭೆ ಕರೆದು, ನೀಲನಕ್ಷೆ ಅಂತಿಮಗೊಳಿಸಲು ಸುಧಾಕರ್ ರಾವ್ ಅವರಿಗೂ ಪತ್ರ ಬರೆಯಲಾಗಿದೆ ಎಂದು ಪುಟ್ಟಹಲಗಯ್ಯ ತಿಳಿಸಿದರು.
ಬೇಲಿ, ಕಾಂಪೌಂಡ್‌ಗೆ ವಿರೋಧ
ಎಸ್ಟೇಟ್‌ಗೆ ತಂತಿ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಲು ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. ಬನ್ನೇರುಘಟ್ಟ ಅಭಯಾರಣ್ಯಕ್ಕೆ ಸಮೀಪದಲ್ಲೇ ಈ ತಾಣ ಇರುವುದರಿಂದ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿ ಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಡ್ಡಿ ಮಾಡಬಾರದು. ಒತ್ತುವರಿ ತಡೆಯಲು ಸುತ್ತಲೂ ದಟ್ಟ ಮರಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದ್ದಾರೆ.
‘ಬೇಲಿ ಅಥವಾ ಕಾಂಪೌಂಡ್ ನಿರ್ಮಿಸದಿದ್ದರೆ ಒತ್ತುವರಿ ತಡೆಯುವುದು ಕಷ್ಟವಾಗುತ್ತದೆ. ಅಲ್ಲದೆ ಅತಿಕ್ರಮ ಪ್ರವೇಶ ನಿರ್ಬಂಧಿಸುವುದು ಅಸಾಧ್ಯ. ಎಸ್ಟೇಟ್ ಒಳಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರೂ ಪ್ರಯೋಜನಕ್ಕೆ ಬಾರದಂತಾಗುತ್ತದೆ. ಇದನ್ನು ತಜ್ಞರಿಗೂ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳಿಗೂ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ಮಂಡಳಿ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.