ಬೆಂಗಳೂರು: ‘ಧರ್ಮಗಳು ಸತ್ಯದ ಮೇಲೆ ಆಧಾರಿತವಾಗಿಲ್ಲ. ಆದರೆ, ವಿಜ್ಞಾನ ಸತ್ಯದ ಮೇಲೆ ನಿಂತಿದೆ. ವಿಜ್ಞಾನವನ್ನು ನಂಬಿ ಬದುಕಬೇಕೇ ಹೊರತು ಮೌಢ್ಯಗಳನ್ನಲ್ಲ’ ಎಂದು ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ಹೇಳಿದರು.
ನಗರದ ಮಿಥಿಕ್ ಸೊಸೈಟಿಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಘಟನೆ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಸಮುದಾಯ ಸಹಭಾಗಿಗಳೊಡನೆ ಭೇಟಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟಿವಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ ಕಾರ್ಯಕ್ರಮಗಳ ಬಗ್ಗೆ ಅಸಹನೆ ವ್ಯಕ್ತಪಡಿಸಿದ ಅವರು, ‘ನಮಗೆ ಬಾಹ್ಯಾಕಾಶದ ಬಗ್ಗೆ ತಿಳಿದಿರುವುದು ಅಲ್ಪವಷ್ಟೆ. ಆದರೆ, ಜ್ಯೋತಿಷಿಗಳು ಎಲ್ಲ ಗ್ರಹಗಳನ್ನು ತಮ್ಮ ಕೈಯಲ್ಲೇ ಹಿಡಿದವರಂತೆ ಮಾತನಾಡುತ್ತಾರೆ’ ಎಂದು ಕಿಡಿಕಾರಿದರು.
ಅಭಿವೃದ್ಧಿಗೆ ವಿಜ್ಞಾನಿಗಳು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದ ಅವರು, ಸಿ.ವಿ.ರಾಮನ್ ಮತ್ತು ಚಂದ್ರಶೇಖರ್ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡರು.
‘ವಿಜ್ಞಾನ ಕ್ಷೇತ್ರದಲ್ಲಿ ವಿಶ್ವಕ್ಕೆ ಮಾದರಿಯಾಗುವತ್ತ ಭಾರತ ಹೆಜ್ಜೆ ಇಟ್ಟಿದೆ. ಮುಂದಿನ ಸಾವಿರ ವರ್ಷಗಳಲ್ಲಿ ನಮ್ಮ ವಿಜ್ಞಾನಿಗಳು ಮಂಗಳ ಗ್ರಹವನ್ನು ಮಾನವವಾಸಕ್ಕೆ ಯೋಗ್ಯವನ್ನಾಗಿಸಿದರೆ ಅಚ್ಚರಿ ಪಡಬೇಕಿಲ್ಲ. ಈ ಬಗ್ಗೆ ನನಗಂತೂ ಖಚಿತ ನಂಬಿಕೆಯಿದೆ’ ಎಂದರು.
ಪೋಷಕರ ವಿರೋಧದ ನಡುವೆ ತಮ್ಮಿಷ್ಟದ ವಿಷಯ ಆರಿಸಿಕೊಂಡ ಭೌತಶಾಸ್ತ್ರ ವಿಜ್ಞಾನಿ ಹೋಮಿ ಭಾಭಾ ಅವರು ಜೀವನವನ್ನು ಉದಾಹರಣೆಯಾಗಿ ನೀಡಿದ ಅವರು, ‘ವಿದ್ಯಾರ್ಥಿಗಳು ಯಾವುದಾರೂ ಒಂದು ಕ್ಷೇತ್ರದಲ್ಲಿ ಅಭಿರುಚಿ ಬೆಳೆಸಿಕೊಂಡು ಅದರಲ್ಲಿಯೇ ಮುಂದುವರಿಯಬೇಕು. ಪೋಷಕರ ಆಸೆಗೆ ಕಟ್ಟುಬಿದ್ದು ಇಷ್ಟವಿಲ್ಲದ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ಅತಿಥಿ ಭಾಷಣದ ನಂತರ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಯು.ಆರ್.ರಾವ್ ಉತ್ತರ ನೀಡಿದರು. ಕುಮಾರಕೃಪ ಶಾಲೆಯ ಅವಿನಾಶ್ ಪ್ರಳಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪುರಾಣದ ರೀತಿಯ ಪ್ರಳಯ ಆಗುವುದಿಲ್ಲ. ಆದರೆ ಪ್ರಕೃತಿಯನ್ನು ಗೌರವಿಸದಿದ್ದಲ್ಲಿ ಸುನಾಮಿ, ಭೂಕಂಪ, ಬರಗಾಲದಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಲೇ ಇರಬೇಕಾಗುತ್ತದೆ’ ಎಂದರು.
ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ಕೇಳಿದ, ‘ಟ್ರಾಫಿಕ್ ಸಮಸ್ಯೆ, ಹದಗೆಟ್ಟಿರುವ ರಸ್ತೆಗಳು, ಭ್ರಷ್ಟಾಚಾರ ಇವನ್ನೆಲ್ಲಾ ಸರಿಪಡಿಸಲು ಏನು ಮಾಡಬೇಕು’ ಎಂಬ ಪ್ರಶ್ನೆಗೆ ‘ಎಲ್ಲಾ ರಾಜಕಾರಣಿಗಳನ್ನು ‘ಒನ್ ವೇ ಟಿಕೆಟ್’ ಕೊಟ್ಟು ಮಂಗಳ ಗ್ರಹಕ್ಕೆ ಅಟ್ಟಿ ಬಿಡೋಣ. ಆಗ ಸಮಸ್ಯೆಗಳು ಪರಿಹಾರವಾಗಬಹುದು’ ಎಂದು ಸಭೆಯಲ್ಲಿ ನಗೆಯ ಅಲೆ ಎಬ್ಬಿಸಿದರು.
‘ನಮ್ಮ ದೇಶ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ಬರುವುದು ಯಾವಾಗ’ ಎಂಬ ನೇತ್ರಾವತಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತ ಖರ್ಚು ಮಾಡುತ್ತಿರುವ ಹಣಕ್ಕಿಂತಲೂ 20 ಪಟ್ಟು ಹೆಚ್ಚು ಹಣವನ್ನು ಅಮೆರಿಕ ಖರ್ಚು ಮಾಡುತ್ತಿದೆ. ಅಲ್ಲಿ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಹಣ ತೊಡಗಿಸುತ್ತಾರೆ. ಆದರೆ, ನಮ್ಮ ವಿಜ್ಞಾನಿಗಳು ಎಲ್ಲದಕ್ಕೂ ಸರ್ಕಾರದ ಮೊರೆ ಹೋಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ‘ಸೈನ್ಸ್ ಟಿಟ್ ಬಿಟ್ಸ್’ ಆ್ಯಪ್ ಬಿಡುಗಡೆ ಮಾಡಲಾಯಿತು. ಬಳಿಕ ಯು.ಆರ್.ರಾವ್ ಅವರನ್ನು ಸನ್ಮಾನಿಸಲಾಯಿತು.