ಬೆಂಗಳೂರು: ‘ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅವರು ಕನ್ನಡದ ವಿದ್ವತ್ ಪರಂಪರೆಯ ಸಮರ್ಥ ಪ್ರತಿನಿಧಿಯಾಗಿದ್ದಾರೆ’ ಎಂದು ವಿಮರ್ಶಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಕನ್ನಡ ಜನಶಕ್ತಿ ಕೇಂದ್ರವು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅವರನ್ನು ಅಭಿನಂದಿಸಿ ಮಾತನಾಡಿದರು. ಸಿಎನ್ಆರ್ ಅವರಲ್ಲಿರುವ ವಿದ್ವತ್ತು ಆಡಂಬರದ, ಪ್ರದರ್ಶನದ ವಸ್ತುವಾಗಿಲ್ಲ. ಸ್ವಪ್ರದರ್ಶನವಿಲ್ಲದ, ಓದುಗರನ್ನು ಸಂಗಾತಿಯಂತೆ ಮುನ್ನಡೆಸುವ ವಿನಯದ ವಿದ್ವತ್ ಆಗಿದೆ ಎಂದರು.
‘ಆಧುನೀಕರಣ ಎಂದರೆ ಸಂಪ್ರದಾಯವನ್ನು ವಿರೋಧಿಸುವುದಲ್ಲ. ಅವರು ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯ ಅವರು ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಪರಂಪರೆಯಲ್ಲಿ ಗೌರವ ಮತ್ತು ಆಧುನಿಕತೆಯಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ. ಕಥೆ, ಕಾದಂಬರಿ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೃಷಿ ಮಾಡಿದ್ದಾರೆ ಎಂದು ಬಣ್ಣಿಸಿದರು.
‘ಮಲೆ ಮಹಾದೇಶ್ವರ ಮೌಖಿಕ ಕಾವ್ಯ’ವನ್ನು ಇಂಗ್ಲಿಷ್‌ಗೆ ಅನುವಾದಿಸುವ ಮೂಲಕ ಬಹುಮುಖ್ಯವಾದ ಸಾಂಸ್ಕೃತಿಕ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ‘ನೆರಳುಗಳ ಬೆನ್ನುಹತ್ತಿ’ ಅವರ ಆತ್ಮಕತೆಯಲ್ಲಿ ಎಲ್ಲಿಯೂ ನಾಟಕೀಯತೆ ಕಾಣುವುದಿಲ್ಲ ಎಂದರು.
ಅಭಿನಂದನೆ ಸ್ವೀಕರಿಸಿ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ತಮಿಳುನಾಡಿನಲ್ಲಿ ಸಾಹಿತ್ಯದ ವಿಮರ್ಶೆ ಚಿತ್ರರಂಗದ ಹಿಡಿತದಲ್ಲಿದೆ. ಆಂಧ್ರಪ್ರದೇಶದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನ ವಿಮರ್ಶಕರು ಪರಸ್ಪರ ಸಂಭಾಷಿಸುವುದೇ ಇಲ್ಲ. ಆದರೆ, ರಾಜ್‌ಕುಮಾರ್ ಅವರಿಂದಾಗಿ ಕನ್ನಡದ ವಿಮರ್ಶಾಲೋಕ ಚಿತ್ರರಂಗದ ಹಿಡಿತದಿಂದ ತಪ್ಪಿಸಿಕೊಂಡಿದೆ ಎಂದು ಹೇಳಿದರು.
ರಾಜ್ಯದಲ್ಲಿ 90ರ ದಶಕದ ನಂತರ ರಾಜ್‌ಕುಮಾರ್ ಬಯಸಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗಬಹುದಿತ್ತು. ಯಾವುದೇ ಉನ್ನತ ಹುದ್ದೆ ಅಲಂಕರಿಸಬಹುದಿತ್ತು. ಅವರೆಂದೂ ತಮ್ಮ ನಿಲುವನ್ನು ಬದಲಿಸಲಿಲ್ಲ. ಅವರ ಆ ಗಟ್ಟಿತನ ಕನ್ನಡ ಸಂಸ್ಕೃತಿಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ಒಬ್ಬ ವಿಮರ್ಶಕ ಲೇಖಕನಿಂದ ಅಧಿಕೃತತೆ, ನಂಬಿಕೆ ಹಾಗೂ ವಿಶ್ವಾಸವನ್ನು ಗಳಿಸಿಕೊಳ್ಳಬೇಕು. ಸಿಎನ್ಆರ್ ಕನ್ನಡದ ಎಲ್ಲ ಲೇಖಕರು ಇಷ್ಟಪಡುವ ಶ್ರೇಷ್ಠ ವಿಮರ್ಶಕರಾಗಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.