ಬೆಂಗಳೂರು: ‘ಸಂಗೀತ ವಿಭಾಗವನ್ನು ಹೊಂದಿರುವ ದೇಶದ ನೂರಾರು ವಿಶ್ವವಿದ್ಯಾಲಯಗಳು ಈವರೆಗೆ ಯಾವೊಬ್ಬ ಕಲಾವಿದನನ್ನೂ ಸೃಷ್ಟಿಸಲಿಲ್ಲ’ ಎಂದು ಹಿರಿಯ ಕವಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
‘ಗಾನಕಲಾಭೂಷಣ ವೀಣೆ ರಾಜಾರಾವ್ ಸ್ಮಾರಕ ಪ್ರತಿಷ್ಠಾನ’ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಸಂಗೀತ ವಿದ್ವಾನ್ ಡಾ.ರಾ.ಸತ್ಯನಾರಾಯಣ ಅವರಿಗೆ ‘ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
‘ಬ್ರಿಟಿಷರು ಪರಿಚಯಿಸಿದ ಅಧ್ಯಯನ ಕ್ರಮ ಅಳವಡಿಸಿಕೊಂಡಿರುವ ವಿಶ್ವವಿದ್ಯಾಲಯದ ಸಂಗೀತ ವಿಭಾಗಗಳಿಂದ ಕಲಾವಿದರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ನಮ್ಮಲ್ಲಿ ಇಂದಿಗೂ ಜೀವಂತವಾಗಿರುವ ವಿದ್ವಾಂಸರು ನಡೆಸುವ ಗುರುಕುಲ ಮಾದರಿ ಶಿಕ್ಷಣದಿಂದ ಶಾಸ್ತ್ರೀಯ ಸಂಗೀತದ ಪರಂಪರೆ ಮುಂದುವರಿದಿದೆ’ ಎಂದು ಅವರು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಡಾ.ಎಂ.ರಾಮಾ ಜೋಯಿಸ್ ಮಾತನಾಡಿ, ‘ಸ್ವಾತಂತ್ರೋತ್ತರ ಭಾರತದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳು ಹೆಚ್ಚಿವೆ. ಆದರೆ, ವಿದ್ಯಾವಂತರು ಹೆಚ್ಚುತ್ತಿಲ್ಲ. ನಮ್ಮ ಪಠ್ಯಕ್ರಮದಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಬದುಕಿನ ಆಚರಣೆ ಬೋಧಿಸುವ ಅಂಶಗಳು ಇಲ್ಲದ ಕಾರಣ ದಿನೇದಿನೇ ನೈತಿಕ ಮೌಲ್ಯಗಳು ಅಧಃಪತನವಾಗುತ್ತಿವೆ. ಪರಿಣಾಮ, ಅತ್ಯಾಚಾರ ಘಟನೆಗಳು ಮರುಕಳಿಸುತ್ತಿವೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಅಭಿನಂದನಾ ನುಡಿಯಾಡಿದ ಸಂಗೀತ ವಿಮರ್ಶಕ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ, ‘ವೇದಿಕೆ ಮೇಲೆ ಕುಳಿತು ತಾಳ ತಟ್ಟುವುದೇ ಸಂಗೀತವೆಂಬ ಭಾವನೆ ಇಟ್ಟುಕೊಂಡವರು ಶಾಸ್ತ್ರದ ಬಗ್ಗೆ ಅವಹೇಳನದ ಮಾತನಾಡುವ ಸಮಯದಲ್ಲಿ ಸತ್ಯನಾರಾಯಣ ಅವರು ಶಾಸ್ತ್ರದ ಕುರಿತು ಒಲುವು ತೋರಿದರು. ಸಂಗೀತ ಶಾಸ್ತ್ರ ಕುರಿತು ಅವರು ರಚಿಸಿರುವ ಗ್ರಂಥಗಳಲ್ಲಿ ಆಳವಾದ ಅಧ್ಯಯನ, ವಿಸ್ತಾರವಾದ ಟೀಕು, ವಿದ್ವತ್‌ಪೂರ್ಣ ಸಂಪಾದನೆ, ತೌಲನಿಕ ಅಧ್ಯಯನಗಳನ್ನು ಕಾಣಬಹುದಾಗಿದೆ’ ಎಂದು ತಿಳಿಸಿದರು. ‘ಮಯೂರ ಮಾಸಪತ್ರಿಕೆಯ ಸಹಾಯಕ ಸಂಪಾದಕಿ ಡಾ.ಆರ್.ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.