ಬೆಂಗಳೂರು: ‘ವಿಭಿನ್ನ ನಿಲುವು’ಗಳ ಕುರಿತು ಭಾನುವಾರ ನಡೆದ ಗೋಷ್ಠಿಯು ರಾಷ್ಟ್ರೀಯತೆಯಿಂದ ಆರಂಭಿಸಿ, ನೋಟು ರದ್ದತಿವರೆಗಿನ ವಿಚಾರಗಳ ಚರ್ಚೆಗೆ ಸಾಕ್ಷಿಯಾಯಿತು.
ವಿವಿಧ ಸೈದ್ಧಾಂತಿಕ ಹಿನ್ನೆಲೆ ಹೊಂದಿರುವ ಅಂಕಣಕಾರರಾದ ಆಕಾರ್ ಪಟೇಲ್, ಮಿಹಿರ್ ಶರ್ಮ, ಪತ್ರಕರ್ತ ಪ್ರಸನ್ನ ವಿಶ್ವನಾಥನ್, ಕಾಂಗ್ರೆಸ್ ನಾಯಕಿ ರಮ್ಯಾ ತಮ್ಮ ನಿಲುವುಗಳನ್ನು ಹೇಳಿಕೊಂಡರು. ಸಮನ್ವಯಕಾರರಾಗಿದ್ದ ಹರೀಶ್ ಬಿಜೂರ್ ಅವರು ಪ್ರಶ್ನಿಸುತ್ತ, ಕೆಣಕುತ್ತ ಇವರೆಲ್ಲರೂ ಮಾತನಾಡುವಂತೆ ನೋಡಿಕೊಂಡರು.
ವಿಭಿನ್ನ ನಿಲುವು ಎಂದರೇನು?: ಬಿಜೂರ್ ಅವರು ಆರಂಭದಲ್ಲಿ ‘ವಿಭಿನ್ನ ನಿಲುವು ಎಂದರೇನು?’ ಎಂಬ ಪ್ರಶ್ನೆಯನ್ನು ನಾಲ್ವರ ಮುಂದಿಟ್ಟರು. ‘ಸಾರ್ವಜನಿಕ ಅಭಿಪ್ರಾಯಕ್ಕೆ ಸವಾಲೆಸೆದು, ಇನ್ನೊಂದು ಅಭಿಪ್ರಾಯ ಹೇಳುವುದು’ ಎಂಬ ಉತ್ತರ ಆಕಾರ್ ಅವರಿಂದ ಬಂತು.
‘ದೇಶದ ಮೇಲ್ವರ್ಗದ ಕೂಟಗಳಿಗೆ ಸೇರದ ವ್ಯಕ್ತಿಯೊಬ್ಬ, ಆ ಕೂಟಗಳನ್ನು ಪ್ರಶ್ನಿಸುವುದೇ ವಿಭಿನ್ನ ನಿಲುವು’ ಎಂದು ಪ್ರಸನ್ನ ವಿಶ್ಲೇಷಿಸಿದರು.
ಗೋಷ್ಠಿಯ ಚರ್ಚಾ ವಿಷಯ ಹಿಂದಿ ಹೇರಿಕೆಯತ್ತ ಹೊರಳಿತು. ‘ಹಿಂದಿ ಹೇರುವುದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ’ ಎಂದು ರಮ್ಯಾ ಹೇಳಿದರು.
‘ಭಾರತದಲ್ಲಿ ರಾಷ್ಟ್ರ ಭಾಷೆಯ ಸ್ಥಾನ ಪಡೆದಿರುವುದು ಇಂಗ್ಲಿಷ್ ಮಾತ್ರ. ಆದರೆ ಇದು ಒಳ್ಳೆಯದಲ್ಲ. ಕಾಶ್ಮೀರಿ, ಗುಜರಾತಿ, ಅಸ್ಸಾಮಿ ಭಾಷೆ ಮಾತನಾಡುವ ಬಡ ವರ್ಗದವರು ಪರಸ್ಪರರ ಜೊತೆ ಸಂವಾದಿಸಲು ಸಾಧ್ಯವೇ ಇಲ್ಲದ ಸ್ಥಿತಿ ದೇಶದಲ್ಲಿದೆ’ ಎಂದು ಆಕಾರ್ ವಿವರಿಸಿದರು.
ಇದಕ್ಕೆ ದನಿಗೂಡಿಸಿದ ಮಿಹಿರ್, ‘ಸರ್ಕಾರದ ಯೋಜನೆಗಳಿಗೆ ಬಹುತೇಕ ಸಂದರ್ಭಗಳಲ್ಲಿ ಹಿಂದಿ ಹೆಸರುಗಳನ್ನೇ ಇಡಲಾಗುತ್ತದೆ. ಇದು ಸಲ್ಲದು. ಯೋಜನೆಗಳಿಗೆ ಪ್ರಾದೇಶಿಕ ಭಾಷೆಗಳ ಹೆಸರು ಇಡದಿರುವುದು ತಪ್ಪು’ ಎಂದರು.
ರಾಷ್ಟ್ರದ್ರೋಹದ ಚರ್ಚೆ!: ಟ್ವಿಟರ್‌ನಲ್ಲಿ ಹ್ಯಾಷ್‌ಟ್ಯಾಗ್‌ಗಳನ್ನು (#) ಬಳಸಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಅದೇ ಮಾದರಿ ಅನುಕರಿಸಿದ ಬಿಜೂರ್, #ರಾಷ್ಟ್ರದ್ರೋಹದ ಬಗ್ಗೆ ಅನಿಸಿಕೆ ತಿಳಿಸುವಂತೆ ಸೂಚಿಸಿದರು.
ಥಟ್ಟನೆ ಪ್ರತಿಕ್ರಿಯೆ ನೀಡಿದ ರಮ್ಯಾ, ‘ನಾನು ಪಾಕಿಸ್ತಾನದ ಬಗ್ಗೆ ಈ ಹಿಂದೆ ಆಡಿದ್ದ ಮಾತು ರಾಷ್ಟ್ರದ್ರೋಹವಾಗಿದ್ದು ಹೇಗೆ ಎಂಬುದು ಅರ್ಥವಾಗುತ್ತಿಲ್ಲ. ನಾನು ನನ್ನ ದೇಶದ ಬಗ್ಗೆ ಕೆಟ್ಟ ಮಾತು ಆಡಿರಲಿಲ್ಲ’ ಎಂದರು.
ರಮ್ಯಾ ಬೆಂಬಲಿಸಿ ಮಾತನಾಡಿದ ಪ್ರಸನ್ನ, ‘ರಾಷ್ಟ್ರದ್ರೋಹಕ್ಕೆ ಸಂಬಂಧಿಸಿದ ಕಾನೂನುಗಳು ನಮ್ಮಲ್ಲಿ ಸರಿಯಿಲ್ಲ. ವ್ಯಕ್ತಿಯೊಬ್ಬನ ವಿರುದ್ಧ ರಾಷ್ಟ್ರದ್ರೋಹದ ಆರೋಪ ಹೊರಿಸುವ ವಿಚಾರದಲ್ಲಿ ನಾವು ಅಮೆರಿಕದ ಮಾದರಿ ಅನುಕರಿಸಬೇಕು’ ಎಂದು ಹೇಳಿದರು.
ಮಾತುಕತೆಯು ರಾಷ್ಟ್ರದ್ರೋಹ ಕುರಿತ ಚರ್ಚೆಯಿಂದ ಉತ್ಕಟ ರಾಷ್ಟ್ರೀಯತೆಯ ಕಡೆ ತಿರುಗಿತು. ‘ನೆಹರೂ ಪ್ರಣೀತ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ವಿದ್ಯಮಾನ ದೇಶದಲ್ಲಿ ಕಂಡುಬರುತ್ತಿದೆ’ ಎಂದು ಪ್ರಸನ್ನ ಹೇಳಿದರು.
ರಾಷ್ಟ್ರೀಯತೆಯ ಹೆಸರಿನಲ್ಲಿ ಇನ್ನೊಂದು ದೇಶದ ಕಲಾವಿದರಿಗೆ ಬಹಿಷ್ಕಾರ ಹಾಕುವ ಪರಿಸ್ಥಿತಿ ಇರಬಾರದು ಎಂದು ರಮ್ಯಾ ಅನಿಸಿಕೆ ವ್ಯಕ್ತಪಡಿಸಿದರು.
‘ನಮ್ಮನ್ನು ಜಗತ್ತು ಹೇಗೆ ಸ್ವೀಕರಿಸುತ್ತಿದೆಯೋ, ಅದೇ ರೀತಿಯಲ್ಲಿ ನಾವು ಕೂಡ ಇನ್ನೊಂದು ದೇಶದವರನ್ನು ಸ್ವೀಕರಿಸಬೇಕು’ ಎಂದು ಆಕಾರ್ ಹೇಳಿದರು.
ಆಹಾರ ಪದ್ಧತಿ: ಬಿಜೂರ್ ಅವರು ಮಾತುಕತೆಯನ್ನು ಆಹಾರ ಪದ್ಧತಿ ಕಡೆ ಹೊರಳಿಸಿದರು. ಆಗ ಆಕಾರ್ ಅವರು, ‘ಪಾಕಿಸ್ತಾನದಲ್ಲಿ ಹಿಂದೂಗಳು ಹಾಗೂ ಕ್ರೈಸ್ತರನ್ನು ಹಿಂಸಿಸಿದಂತೆಯೇ, ಭಾರತದಲ್ಲಿ ಗೋಮಾಂಸ ಭಕ್ಷಣೆ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯಗಳ ಮೇಲೆ ದಾಳಿಗಳು ನಡೆದಿವೆ’ ಎಂದರು.
ಈ ಮಾತಿಗೆ ತಕರಾರು ಎತ್ತಿದ ಪ್ರಸನ್ನ, ‘ಗೋವನ್ನು ಗೌರವದಿಂದ ಕಾಣುವವರು ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಗೋರಕ್ಷಣೆಯ ಮಾತು ಸಂವಿಧಾನದಲ್ಲಿಯೂ ಕಂಡುಬರುತ್ತದೆ’ ಎಂದು ವಾದಿಸಿದರು.
‘ಬಲಾಢ್ಯ ನಾಯಕನ ದೊಡ್ಡ ತಪ್ಪು’: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಕುರಿತು ಚರ್ಚೆ ನಡೆಯುತ್ತಿದ್ದಾಗ ಮಿಹಿರ್ ಅವರು, ‘ಬಲಾಢ್ಯ ನಾಯಕರು ಭಾರಿ ಪ್ರಮಾಣದಲ್ಲೇ ತಪ್ಪು ಮಾಡುತ್ತಾರೆ. ನೋಟು ರದ್ದತಿಯು ಅಂಥದ್ದೊಂದು ತಪ್ಪು’ ಎಂದು ಕುಟುಕಿದರು.
ಬಾರದ ಕನ್ಹಯ್ಯಾ
ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದರು.
* ನಿರ್ದಿಷ್ಟ ಆಹಾರ ಪದ್ಧತಿ ಅನುಸರಿಸುವ ಒಂದು ಗುಂಪು, ಬೇರೆ ಆಹಾರ ಪದ್ಧತಿಯ ಇನ್ನೊಂದು ಗುಂಪಿಗಿಂತ ಹೆಚ್ಚು ದೇಶಪ್ರೇಮಿ ಎನ್ನಲಾಗದು.
-ಮಿಹಿರ್ ಶರ್ಮ, ಅಂಕಣಕಾರ
* ಟ್ವಿಟರ್‌ನಲ್ಲಿರುವ ನನ್ನ ಹಿಂಬಾಲಕರಲ್ಲಿ ಬಿಜೆಪಿಯವರೇ ಹೆಚ್ಚು. ನಾನು ವಿವಾದಾತ್ಮಕ ಮಾತು ಆಡಲಿ ಎಂದು ಅವರು ಕಾಯುತ್ತಿರುತ್ತಾರೆ.
- ರಮ್ಯಾ, ಕಾಂಗ್ರೆಸ್ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.