ADVERTISEMENT

ವಿ.ವಿಗಳಲ್ಲಿ ಏಕ ರೂಪ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ತಿಮ್ಮೇಗೌಡ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ಬೆಂಗಳೂರು: ‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಏಕ ರೂಪ ಪರೀಕ್ಷಾ ವೇಳಾಪಟ್ಟಿ, ಶುಲ್ಕ, ಫಲಿತಾಂಶ ಸೇರಿದಂತೆ ಆಂತರಿಕ ಮೌಲ್ಯಾಂಕವನ್ನು ಪಾಲಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿ ಸಭೆ ನಡೆಸಿ ಉನ್ನತ ಶಿಕ್ಷಣ ಪರಿಷತ್ತಿಗೆ ಶೀಘ್ರದಲ್ಲೇ ವರದಿ ನೀಡಲಿದೆ’ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಅವರು ತಿಳಿಸಿದರು.

ಶುಕ್ರವಾರ ಜ್ಞಾನಭಾರತಿ ಆವರಣದ ಸೆನೆಟ್ ಸಭಾಂಗಣದಲ್ಲಿ ನಡೆದ ಅಕಾಡೆಮಿಕ್‌ ಕೌನ್ಸಿಲ್‌ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈಗ ಎಲ್ಲ ವಿಶ್ವವಿದ್ಯಾಲಯಗಳು ವಿಭಿನ್ನ ರೀತಿಯ ಪರೀಕ್ಷಾ ವೇಳಾಪಟ್ಟಿ ಮತ್ತು ಆಂತರಿಕ ಮೌಲ್ಯಾಂಕ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಬೇರೆ ವಿವಿಗಳಲ್ಲಿ ಪ್ರವೇಶ ಮತ್ತು ಉದ್ಯೋಗಾವಕಾಶ ಪಡೆದುಕೊಳ್ಳಲು ತೊಂದರೆ ಉಂಟಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಬೆಂಗಳೂರು ವಿವಿಯಲ್ಲಿ ಗ್ರೇಡ್‌ಗಳಲ್ಲಿ ಆಂತರಿಕ ಮೌಲ್ಯಾಂಕ ಗಳನ್ನು ನೀಡಲಾಗುತ್ತದೆ. ಆದರೆ, ಕೆಲವು ವಿವಿಗಳು ಆಂತರಿಕ ಮೌಲ್ಯಾಂಕಕ್ಕೆ ಹೆಚ್ಚಿನ ಅಂಕಗಳನ್ನು ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಸರಾಸರಿ ಅಂಕಗಳು ಹೆಚ್ಚಾಗುತ್ತವೆ.  ಹೀಗಾಗಿ, ನಮ್ಮ ವಿವಿಯಲ್ಲಿ ಓದಿದ ವಿದ್ಯಾರ್ಥಿಗಳ ಸರಾಸರಿ ಅಂಕಗಳು ಕಡಿಮೆ ಆಗಲಿದೆ. ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುತ್ತೇವೆ’ ಎಂದರು.

ಸಭೆಯ ಮುಖ್ಯ ನಿರ್ಣಯಗಳು
* ಪದ್ಮಶ್ರೀ ಕಾಲೇಜ್ ಆಫ್ ಎಜುಕೇಷನ್-ನ ಬಿಇಡಿ ಕೋರ್ಸ್ ರದ್ದು
* ಕಾಮಗಾರಿ, ಕೇಂದ್ರ ಖರೀದಿ, ಗ್ರಂಥಾಲಯ ಸಮಿತಿಗೆ ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರ ನಾಮನಿರ್ದೇಶನಕ್ಕೆ ಒಪ್ಪಿಗೆ 
* ಮುಂದಿನ ಶೈಕ್ಷಣಿಕ ವರ್ಷದಿಂದ ದೂರ ಶಿಕ್ಷಣದಲ್ಲಿ ಎಂಬಿಎ, ಎಂಎಸ್ಸಿ (ಭೂಗೋಳ-ಶಾಸ್ತ್ರ), ಎಂಎಸ್ಸಿ ಅಥವಾ ಡಿಪ್ಲೊಮಾ ಇನ್ ಜಿಯೋ ಇನ್ಫ್‌ರ್‌ಮ್ಯಾಟಿಕ್ಸ್, ಬಿಲಿಬ್ ಕೋರ್ಸ್ ಪ್ರಾರಂಭಕ್ಕೆ ಒಪ್ಪಿಗೆ
* 2014-–15ನೇ ಸಾಲಿನಿಂದ ಎಂಪಿಇಡಿ ಕೋರ್ಸ್‌ನಲ್ಲಿ ಚಾಯ್ಸ್ ಬೇಸ್ ಕ್ರೆಡಿಟ್ ಸಿಸ್ಟಂ ಅಳವಡಿಕೆಗೆ ಒಪ್ಪಿಗೆ

ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ಎನ್.ನಿಂಗೇಗೌಡ ಮಾತನಾಡಿ, ‘ಪರೀಕ್ಷಾ ಶುಲ್ಕ, ಮೌಲ್ಯಮಾಪಕರ ಸಂಭಾವನೆ, ಫಲಿತಾಂಶ ಸೇರಿದಂತೆ ಇತರೆ ವಿಷಯಗಳಲ್ಲಿ ಎಲ್ಲ ವಿವಿಗಳು ಏಕರೂಪತೆ ಕಾಯ್ದುಕೊಳ್ಳುವ ಉದ್ದೇಶದಿಂದ ಉನ್ನತ ಶಿಕ್ಷಣ ಪರಿಷತ್ತು ‘ಪರೀಕ್ಷಾ ಸುಧಾರಣಾ ಸಮಿತಿ’ ರಚಿಸಿದೆ’. ದಾವಣಗೆರೆ ವಿವಿ ಕುಲಪತಿ ಡಾ.ಬಿ.ಬಿ. ಕಲಿವಾಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಐದು ವಿವಿ ಕುಲಸಚಿವರು (ಮೌಲ್ಯಮಾಪನ) ಸದಸ್ಯರಾಗಿದ್ದೇವೆ’ ಎಂದರು.

ಚಿಂತನೆ: ಬಿಇಡಿ ಕೋರ್ಸ್‌ನಲ್ಲಿ ಜರ್ಮನ್‌, ಫ್ರೆಂಚ್‌ ಭಾಷೆ ಬಿಇಡಿ ಕೋರ್ಸ್‌ನಲ್ಲಿ ಜರ್ಮನ್ ಅಥವಾ ಫ್ರೆಂಚ್ ಭಾಷಾ ವಿಷಯ ಅಳವಡಿಸುವ ಬಗ್ಗೆ ವಿವಿ ಚಿಂತಿಸಿದೆ. ಈ ಎರಡು ವಿಷಯಗಳನ್ನು ಬೋಧಿಸುವ ಶಿಕ್ಷಕರ ಅಲಭ್ಯತೆ ಕಾಡುತ್ತಿರುವುದರಿಂದ ಬಿಇಡಿ ಕೋರ್ಸ್‌ನಲ್ಲಿ ಈ ಎರಡು ಭಾಷೆಗಳನ್ನು ಪರಿಚಯಿಸಲು ಚಿಂತಿಸಲಾಗುವುದು ಎಂದು ಕುಲಪತಿ ತಿಳಿಸಿದರು.

ಕೇಂದ್ರೀಯ ವಿದ್ಯಾಲಯಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಜರ್ಮನಿ ಭಾಷಾ ವ್ಯಾಸಂಗ ಮಾಡುತ್ತಿದ್ದು, ಇವರ ಬೋಧನೆಗೆ ಶಿಕ್ಷಕರ ಅಲಭ್ಯತೆ ಇದೆ. ಬಿಇಡಿ ಕೋರ್ಸ್‌ನಲ್ಲಿ ಜರ್ಮನಿ ಭಾಷಾ ಶಿಕ್ಷಣ ನೀಡುವುದು ಉತ್ತಮ ಎಂದು ಶಿಕ್ಷಣ ನಿಕಾಯದ ಡೀನ್ ಪ್ರೊ.ಎಂ.ಎಸ್.ತಳವಾರ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT