ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗದ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಾನವಿಕ ವಿಭಾಗದ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ನೂರಾರು ಸೀಟುಗಳು ಖಾಲಿ ಉಳಿದಿವೆ. ಹೀಗಾಗಿ ಸೀಟುಗಳ ಭರ್ತಿ ಮಾಡಲು ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಗಳು ಅಧಿಕ ಉದ್ಯೋಗ ಅವಕಾಶ ಲಭ್ಯ ಇರುವ ಪದವಿಗಳ ಕಡೆಗೆ ಹೆಚ್ಚಿನ ಒಲವು ತೋರಿದ್ದಾರೆ. ಆಗಸ್ಟ್ 4ರಿಂದ 7ರ ವರೆಗೆ ಸ್ನಾತಕೋತ್ತರ ಪದವಿಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆದಿತ್ತು. ಹಿಂದಿ ವಿಭಾಗದಲ್ಲಿ ಎಲ್ಲ ಸೀಟುಗಳು ಖಾಲಿ ಉಳಿದಿವೆ.
ಸಂಸ್ಕೃತ ಎಂ.ಎ. ವಿಭಾಗದಲ್ಲಿ 22 ಸೀಟುಗಳು ಲಭ್ಯ ಇದ್ದವು. ಈ ಪೈಕಿ ಐದು ಸೀಟುಗಳು ಮಾತ್ರ ಭರ್ತಿ ಆಗಿವೆ. ಕನ್ನಡ, ಇಂಗ್ಲಿಷ್, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ ಪದವಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇನ್ನೊಂದೆಡೆ, ಜೈವಿಕ ತಂತ್ರಜ್ಞಾನ ಹಾಗೂ ಜೈವಿಕ ರಸಾಯನವಿಜ್ಞಾನ ಪದವಿಗಳಲ್ಲೂ ಶೇ 50ಕ್ಕಿಂತ ಅಧಿಕ ಸೀಟುಗಳು ಖಾಲಿ ಉಳಿದಿವೆ.
‘ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಲಭ್ಯ ಇಲ್ಲ. ಹೀಗಾಗಿ ಈ ಪದವಿ ಸೇರ್ಪಡೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಿಲ್ಲ. ಮಾನವಿಕ ಕ್ಷೇತ್ರದಲ್ಲೂ ಇದೇ ಸ್ಥಿತಿ ಇದೆ’ ಎಂದು ಖಾಸಗಿ ಕಾಲೇಜೊಂದರ ಪ್ರಾಂಶುಪಾಲ ಅಭಿಪ್ರಾಯಪಟ್ಟರು.
19ಕ್ಕೆ ಮತ್ತೆ ಪ್ರವೇಶ ಪ್ರಕ್ರಿಯೆ: ವಿವಿಯ ಸ್ನಾತಕೋತ್ತರ ವಿಭಾಗ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಸೀಟುಗಳ ಭರ್ತಿಗೆ ವಿವಿ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಹಾಗೂ ವಿವರಗಳನ್ನು wwww.bangaloreuniversity.ac.in ರಲ್ಲಿ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಯನ್ನು ದಂಡ ಶುಲ್ಕ ₹ 200 ಮತ್ತು ಅರ್ಜಿಯ ಶುಲ್ಕ ₹ 150(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ₹ 75) ಪಾವತಿಸಿ ವಿಭಾಗದ ಮುಖ್ಯಸ್ಥರಿಗೆ 17ರೊಳಗೆ ತಲುಪಿಸಬೇಕು. 19ರಂದು ಬೆಳಿಗ್ಗೆ 11 ಗಂಟೆಗೆ ಸಂಬಂಧಿಸಿದ ವಿಭಾಗಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು ಎಂದು ವಿವಿ ಕುಲಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.