ಇದು ಎಲ್ಲರೂ ಕೂತು ಮಾತನಾಡಿ ಬಗೆಹರಿಸಬಹುದಾದ ಸಂಗತಿ. ಆದರೆ ಮೊದಲ ಜವಾಬ್ದಾರಿ ಸರ್ಕಾರದ್ದು. ಏಕೆಂದರೆ, ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಒಳಗೊಂಡಂತೆ ರಾಜ್ಯದ 46 ಪ್ರತಿಷ್ಠಿತ ಪ್ರವಾಸಿ ತಾಣಗಳನ್ನು ಬಂಡವಾಳ ಹೂಡಲು ಮುಂದೆ ಬರುವ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿ, ಅವುಗಳ ಸುಧಾರಣೆ ಹಾಗೂ ನಿರ್ವಹಣೆಗಾಗಿ 5 ರಿಂದ 10 ವರ್ಷಗಳ ಕಾಲಾವಧಿಗೆ ಆ ಸಂಸ್ಥೆಗಳ ಉಸ್ತುವಾರಿಗೆ ಬಿಡಬಹುದು ಎಂಬ ನೀತಿಯನ್ನು 2014ರಲ್ಲಿ ರೂಪಿಸಿ 2015ರಲ್ಲಿ ಅವುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ನಮ್ಮ ಸರ್ಕಾರವೇ.
ಮೋಹನ್ ದಾಸ್ ಪೈ ಅವರ ನೇತೃತ್ವದಲ್ಲಿ ಸುಮಾರು 50 ‘ಖ್ಯಾತ ನಾಗರಿಕರು ಮತ್ತು ಕ್ಷೇತ್ರ ತಜ್ಞ’ರನ್ನು ಒಳಗೊಂಡ ಕರ್ನಾಟಕ ಪ್ರವಾಸೋದ್ಯಮ ದೂರದೃಷ್ಟಿ ಗುಂಪು (ಕೆಟಿವಿಜಿ) ರಚಿಸಿ, ಅದರ ಶಿಫಾರಸ್ಸುಗಳ ವರದಿಯನ್ನು ಆಧರಿಸಿ ಕರ್ನಾಟಕ ಪ್ರವಾಸೋದ್ಯಮ ನೀತಿ 2015–20 ಎಂಬ ಅಧಿಕೃತ ಪ್ರಕಟಣೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೀಡಿದ ಹೇಳಿಕೆ ಹೀಗಿದೆ: ‘ಕಾರ್ಪೋರೇಟ್ ಕಂಪೆನಿಗಳ ಸಹಭಾಗಿತ್ವದಲ್ಲಿ ಪ್ರವಾಸಿ ತಾಣಗಳನ್ನು ದತ್ತು ನೀಡುವ ಮೂಲಕ ಅವುಗಳ ಅಭಿವೃದ್ಧಿ ಮಾಡುವುದು ಪ್ರಮುಖವಾದ ಉಪಕ್ರಮವಾಗಿದೆ’.
ಅಂತೆಯೇ, ಪ್ರವಾಸೋದ್ಯಮ ಸಚಿವರಾದ ಅರ್.ವಿ. ದೇಶಪಾಂಡೆ ಅವರ ಹೇಳಿಕೆ: ‘ಈ ವಲಯದಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ ಆಗುವುದರಿಂದ ನಮ್ಮ ಸರ್ಕಾರಕ್ಕೆ ಪ್ರವಾಸೋದ್ಯಮ ವಲಯವು ನೈಜ ಆದ್ಯತೆಯ ಕ್ಷೇತ್ರವಾಗಿದೆ. ಆದುದರಿಂದ ನಮ್ಮ ಸರ್ಕಾರವು ಸಾರ್ವಜನಿಕ, ಖಾಸಗಿ ವಲಯದ ಸಹಭಾಗಿತ್ವ ಒಳಗೊಂಡಂತೆ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇವುಗಳಿಂದ ಪ್ರವಾಸೋದ್ಯಮ ವಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2015–20 ಈ ರೀತಿಯ ಉಪಕ್ರಮಗಳಲ್ಲಿ ಒಂದಾಗಿದೆ.
ಇವುಗಳೆಲ್ಲದರ ಜೊತೆಗೆ ನೂತನ ಪ್ರವಾಸೋದ್ಯಮ ನೀತಿಯು ಕರ್ನಾಟಕ ರಾಜ್ಯವನ್ನು ರಾಷ್ಟ್ರ ಪ್ರವಾಸೋದ್ಯಮದಲ್ಲಿ ಮುಂಚೂಣಿ ಸ್ಥಾನಕ್ಕೇರಿಸಲಿದೆ’.
(ಉಲ್ಲೇಖ: http://karnatakatourism.org/policy/karnataka_policy_kannada.pdf)
ವಿಚಾರ ಹೀಗಿರುವಾಗ, ಬಂಡವಾಳ ಹೂಡಲು ಮುಂದೆ ಬಂದ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಇವರನ್ನು ಒಲಿಸಿಕೊಳ್ಳಲು ಸರ್ಕಾರವೇ ಪ್ರಯತ್ನ ಮಾಡುತ್ತಿದೆ. ‘ಕೆಟಿವಿಜಿಯ ವರದಿ ಪ್ರಕಾರ, 2024ರ ಹೊತ್ತಿಗೆ, ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಈಗಿರುವ 10 ಕೋಟಿಯಿಂದ 21 ಕೋಟಿಗೆ ಹೆಚ್ಚಾಗುವುದೆಂದು ಅಂದಾಜಿಸಲಾಗಿದೆ.
‘ಮುಂದಿನ ಐದು ವರ್ಷಗಳಲ್ಲಿ (2015–2020) ಪ್ರವಾಸೋದ್ಯಮ ಕ್ಷೇತ್ರದಲ್ಲಿ ₹ 74 ಸಾವಿರ ಕೋಟಿಯಷ್ಟು ಬಂಡವಾಳ ಹೂಡಿಕೆ ಆಗಲಿದೆ ಎಂದು ಕೆಟಿವಿಜಿ ಅಂದಾಜಿಸಿದ್ದು, ಅದರಲ್ಲಿ ಸುಮಾರು ಅರ್ಧದಷ್ಟು ಖಾಸಗಿ ಕ್ಷೇತ್ರದಿಂದ ಲಭ್ಯವಾಗುವ ಸಾಧ್ಯತೆಗಳಿವೆ’ ಎಂದು ಹೇಳಿದೆ.
ಇದು ಸಾಧ್ಯವೋ ಇಲ್ಲವೋ ತಜ್ಞರು ನಿರ್ಧರಿಸಲಿ. ಸಾಧುವೋ ಅಲ್ಲವೋ ಎನ್ನುವುದರ ಬಗ್ಗೆಯೂ ಮುಕ್ತ ಚರ್ಚೆಯಾಗಲಿ. ಆದರೆ, ಸಹಭಾಗಿತ್ವಕ್ಕೆ ಸಿದ್ಧವಾಗಿರುವ ಖಾಸಗಿ ಸಂಸ್ಥೆಗಳ ಮಂದಿಯನ್ನು ರಿಯಲ್ ಎಸ್ಟೇಟ್ ದಂಧೆ ಮಾಡುವವರು ಎಂಬಂತೆ ಬಿಂಬಿಸುವುದು ತಪ್ಪು. ಈ ಹಿನ್ನೆಲೆಯನ್ನು ಅರಿಯದೆ ಪ್ರತಿಭಟನೆಗೆ ಮುಂದಾಗಿರುವ ಕಲಾವಿದರು ಈ ರೀತಿ ಮಾತನಾಡುತ್ತಿದ್ದರೆ ಅದು ಅನ್ಯಾಯ.
ಅರಿತೂ ಅದೇ ಮಾತನಾಡಿದರೆ ಅಪರಾಧ. ಪ್ರವಾಸೋದ್ಯಮ ಸಚಿವರೇ ನೀತಿ ಪ್ರಕಟಣೆಯಲ್ಲಿ ಈ ರೀತಿ ಹೇಳುತ್ತಾರೆ: ‘ನಮ್ಮ ಉದ್ಯಮ ಪಾಲುದಾರರ ಭಾಗವಹಿಸುವಿಕೆ, ಬೆಂಬಲ ಮತ್ತು ಬದ್ಧತೆಗಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’.
ಸರ್ಕಾರಕ್ಕೆ ಬಂಡವಾಳ ಹೂಡಿಕೆಯ ಅಗತ್ಯವಿದೆ. ಇದನ್ನು ಕಲಾವಿದರು ಒಪ್ಪುವುದು ಬಿಡುವುದು ಬೇರೆ ಮಾತು. ಅದರೆ ಸಿದ್ಧರಾಮಯ್ಯನವರ ಸರ್ಕಾರಕ್ಕಂತೂ ಬೇಕು ಅನಿಸಿದೆ. ಖಾಸಗಿ ಬಂಡವಾಳ ಹೂಡಿಕೆಯಿಂದ ಮುಂದಿನ 10 ವರ್ಷಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಈ ವಲಯದಲ್ಲಿ ಸೃಷ್ಟಿಸಬಹುದು ಎಂದು ಸರಕಾರ ನಂಬಿದೆ. ವರದಿಯ ಪ್ರಕಾರ ಇದರಿಂದ ನಿರೀಕ್ಷಿತ ಅರ್ಥಿಕ ಗಳಿಕೆ ₹ 85 ಸಾವಿರ ಕೋಟಿ.
‘ಕರ್ನಾಟಕ ಪ್ರವಾಸೋದ್ಯಮ ನೀತಿ 2015–2020’, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ವೇಗ ತರಲು ಮತ್ತು ಅನುಕೂಲ ಕಲ್ಪಿಸಲು ಗಮನವನ್ನು ಕೇಂದ್ರೀಕರಿಸುತ್ತದೆ ಮತ್ತು ಒಂದು ಪರಿಣಾಮ ಆಧಾರಿತ ಉಪಕ್ರಮವಾಗಿಸಲು ಶ್ರಮಿಸುತ್ತದೆ. ಈ ನೀತಿಯು ಖಾಸಗಿ ವಲಯದಿಂದ ಮತ್ತು ಸ್ಥಳೀಯ ಉದ್ಯಮಿಗಳಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಪ್ರೋತ್ಸಾಹಿಸುವ ನಿಷ್ಪಕ್ಷಪಾತ ಮಾರ್ಗವನ್ನು ಅನುಸರಿಸುತ್ತದೆ’.
‘ಪ್ರವಾಸೋದ್ಯಮ ನೀತಿಯು ಕರ್ನಾಟಕದಲ್ಲಿ ಸುರಕ್ಷಿತ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಅನುವಾಗುವ ಪರಿಸರವನ್ನು ರೂಪಿಸಲು ಶ್ರಮಿಸುತ್ತದೆ ಮತ್ತು ಪ್ರವಾಸಿಗರಿಗೆ ಗುಣಮಟ್ಟದ ಅನುಭವ ಒದಗಿಸಲು ಪ್ರಾಮುಖ್ಯತೆ ನೀಡುತ್ತದೆ.
ಈ ನೀತಿಯು, ಪ್ರವೃತ್ತಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು, ಅಂದರೆ ನಿಯಂತ್ರಣ ಮತ್ತು ನಿರ್ಬಂಧಗಳೆಡೆಯಿಂದ ಸ್ಥಳೀಯ ಮಟ್ಟದಲ್ಲಿ ವಿಕೇಂದ್ರೀಕರಣ ಮತ್ತು ಸಬಲೀಕರಣದೆಡೆಗೆ; ಆಶ್ರಯ-ಪೋಷಣೆ ವ್ಯವಸ್ಥೆಯಿಂದ ಪಾಲುದಾರಿಕೆಯನ್ನು ನೀಡುವೆಡೆಗೆ ಮತ್ತು ನೇರ ಸರ್ಕಾರಿ ನೇತೃತ್ವದ ವ್ಯವಸ್ಥೆಯಿಂದ ಈ ವಲಯದ ವಿವಿಧ ಭಾಗೀದಾರರೊಂದಿಗೆ ಮೈತ್ರಿ ಸಾಧಿಸುವೆಡೆಗೆ ಪರಿವರ್ತನೆ ಹೊಂದಲು ಪ್ರೋತ್ಸಾಹ ನೀಡುತ್ತದೆ’ ಎಂದು ವರದಿ ಒಪ್ಪಿಸುತ್ತದೆ.
ಅಲ್ಲದೆ ಈ ನೀತಿಯಿಂದ ಪ್ರವಾಸಿ ಕ್ಷೇತ್ರಗಳ ‘ಖಾಸಗೀಕರಣ’ ಅಗುತ್ತದೆ ಎನ್ನುವ ಅರೋಪವನ್ನು ಅನುಮಾನದಿಂದ ಎದುರಿಸಬೇಕು. ಏಕೆಂದರೆ ನೀತಿಯ ಪ್ರಕಾರ ಒಪ್ಪಂದ ಮಾಡಿಕೊಳ್ಳುವುದು ಐದು ವರ್ಷಕ್ಕೆ ಮಾತ್ರ ಮತ್ತು ಪರಸ್ಪರ ಒಪ್ಪಿಗೆಯಿಂದ ಇನ್ನೈದು ವರ್ಷಗಳ ಮಟ್ಟಿಗೆ ಮಾತ್ರ ವಿಸ್ತರಿಸಬಹುದು. ಬಂಡವಾಳ ಹೂಡಿಕೆಯಿಂದ ನಿರ್ಮಾಣಗೊಳ್ಳಬಹುದಾದ ಸ್ಥಿರಾಸ್ತಿ ಮತ್ತು ಸುಧಾರಣೆಗಳು ಸರ್ಕಾರದ ವಶದಲ್ಲೇ ಉಳಿಯುತ್ತವೆ.
ಇನ್ನೊಂದು ಮಾತು. ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿ ನಿರ್ವಹಣೆಗೆ ಐದು ವರ್ಷಕ್ಕೂ ಬಿಟ್ಟುಕೊಡಬಾರದು ಎಂದು ಪ್ರತಿಭಟಿಸುವ ಕಲಾವಿದರ ಮಾತನ್ನು ಒಪ್ಪುವುದಾದರೆ, ಮಿಕ್ಕ 45 ಕ್ಷೇತ್ರಗಳು ಅಷ್ಟು ಪ್ರತಿಷ್ಠಿತವಾದುವಲ್ಲ ಎಂದು ಹೇಳಬಹುದೆ? ಉದಾಹರಣೆಗೆ ಹಂಪಿ, ಬಾದಾಮಿ-ಐಹೊಳೆ, ಬೇಲೂರು-ಹಳೇಬೀಡು, ಜೋಗ ಜಲಪಾತ, ಲಾಲ್ ಬಾಗ್, ರಂಗನತಿಟ್ಟು?
ತಾನೇ ರಚಿಸಿದ ನೀತಿಯನ್ನು ಸರ್ಕಾರ ಒಮ್ಮೆಗೆ ತೊರೆಯಬಹುದೆ? ಹೀಗೆ ರಗಳೆಗೆ ಬೆಚ್ಚಿ ಜುಲೈ 2015ರಲ್ಲಿ ಮಾಡಿಕೊಂಡ ಒಪ್ಪಂದವನ್ನು ರದ್ದುಪಡಿಸಿದರೆ ಮುಂದೆ ಬಂಡವಾಳ ಹೂಡಬಲ್ಲವರಲ್ಲಿ ವಿಶ್ವಾಸ ಉಳಿಸಿಕೊಳ್ಳುವುದು ಸಾಧ್ಯವೆ? ಸರ್ಕಾರ, ಸಾರ್ವಜನಿಕ ಪ್ರತಿನಿಧಿಗಳನ್ನು, ಪ್ರತಿಭಟಿಸುತ್ತಿರುವ ಕಲಾವಿದರ ಪ್ರತಿನಿಧಿಗಳನ್ನು, ತಜ್ಞರು ಮತ್ತು ಒಪ್ಪಂದಕ್ಕೆ ಸಂಬಂಧಪಟ್ಟ ಎಲ್ಲರನ್ನು ಮುಕ್ತ ಚರ್ಚೆಗೆ ಕರೆದು ವಿವಾದವನ್ನು ತಿಳಿಗೊಳ್ಳಿಸುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.