ADVERTISEMENT

ಶಾಪಗ್ರಸ್ತ ಗಂಧರ್ವರಂತಿದ್ದ ಆನಂದಕಂದ

ಪ್ರೊ.ರಾಘವೇಂದ್ರ ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 20:10 IST
Last Updated 2 ನವೆಂಬರ್ 2014, 20:10 IST
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಗಾನಜಗಲಿ’ ಕಾರ್ಯಕ್ರಮದಲ್ಲಿ ಉಪಾಸನಾ ಟ್ರಸ್ಟ್‌ನ ವಿದ್ಯಾರ್ಥಿಗಳು ಆನಂದಕಂದರ ಕವಿತೆಗಳನ್ನು ಪ್ರಸ್ತುತಪಡಿಸಿದರು	–ಪ್ರಜಾವಾಣಿ ಚಿತ್ರ
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಗಾನಜಗಲಿ’ ಕಾರ್ಯಕ್ರಮದಲ್ಲಿ ಉಪಾಸನಾ ಟ್ರಸ್ಟ್‌ನ ವಿದ್ಯಾರ್ಥಿಗಳು ಆನಂದಕಂದರ ಕವಿತೆಗಳನ್ನು ಪ್ರಸ್ತುತಪಡಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅನೇಕ ದಶಕಗಳ ಕಾಲ ಶಾಪಗ್ರಸ್ತ ಗಂಧರ್ವ­ರಂತಿದ್ದ ಆನಂದ­ಕಂದರು (ಡಾ.ಬೇಟಗೇರಿ ಕೃಷ್ಣಶರ್ಮ) ಇತ್ತೀಚಿನ ಕೆಲ ವರ್ಷಗಳಲ್ಲಿ ಟ್ರಸ್ಟ್‌ನ ಕಾರ್ಯಕ್ರಮಗಳ ಮೂಲಕ ಮತ್ತೆ ಮರುಜನ್ಮ ಪಡೆಯುತ್ತಿದ್ದಾರೆ’ ಎಂದು ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ರಾಘ­ವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಟ್ರಸ್ಟ್‌, ನಿರ್ಮಾಣ್‌ ಸಮೂಹ ಸಂಸ್ಥೆ, ಉಪಾಸನಾ ಟ್ರಸ್ಟ್‌ ಸಹಯೋಗ­ದಲ್ಲಿ ಆಯೋಜಿಸಿದ್ದ ಆನಂದಕಂದರ ಕವಿತೆಗಳ ಗಾಯನ ಕಾರ್ಯಕ್ರಮ ‘ಗಾನಜಗಲಿ’ ಯಲ್ಲಿ ಅವರು ಮಾತನಾಡಿದರು.

‘ಬಡತನದಿಂದ ಔಪಚಾರಿಕ ಶಿಕ್ಷಣ ಪಡೆಯದ ಆನಂದಕಂದರು ತಮ್ಮೆಲ್ಲ ಕಷ್ಟಕಾರ್ಪಣ್ಯಗಳ ನಡುವೆ ತಮ್ಮ ಸಾಹಿತ್ಯಿಕ ವ್ಯಕ್ತಿತ್ವವನ್ನು ಸ್ವಯಂ ರೂಪಿಸಿ­ಕೊಂಡ­ವರು. ಶಾಲೆಯ ಹೊರಗೆ ಶಿಕ್ಷಣ ಪಡೆಯುತ್ತ ಮಠದ ಅಯ್ಯನವರ ಸಹಾಯದಿಂದ ಹಳೆಗನ್ನಡ ಸಾಹಿತ್ಯ­ವನ್ನು ಅಧ್ಯಯನ ಮಾಡಿದ ಅವರು, ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ­ರಿಗೆ ಬಗೆಹರಿ­ಯದ ಸಂಶಯಗಳನ್ನು ನಿವಾ­ರಿ­ಸು­ವಷ್ಟು ತಲಸ್ಪರ್ಶಿ­ಯಾದ ಜ್ಞಾನ­ವನ್ನು ಸಂಪಾದಿಸಿ­ದರು’ ಎಂದು ಹೇಳಿದರು.

‘ಹೊಸಗನ್ನಡ ಕಾವ್ಯದ ಭಾಷೆ ಮತ್ತು ಶೈಲಿಯನ್ನು ರೂಪಿಸುವ ಪ್ರಯೋಗ­ದಲ್ಲಿ ಅತ್ಯಂತ ಕ್ರಿಯಾಶೀಲ­ರಾಗಿ ನಿರತರಾಗಿದ್ದ ಆನಂದಕಂದರು, ಜಾನಪದ ಸತ್ವವನ್ನು ಹೊಸಗನ್ನಡ ಸಾಹಿತ್ಯಕ್ಕೆ ಕಸಿ ಮಾಡುವಂತಹ ಕಾರ್ಯ­ದಲ್ಲಿ ಗರಿಷ್ಠಮಟ್ಟದ ಕೊಡುಗೆ ನೀಡಿದ್ದರು. ಭಿನ್ನ ಕವಿ ಸಮಯದ ಏಳು ಸಂಕಲನಗಳನ್ನು ಹೊರತಂದ ಅವರು ಹೊಸಗನ್ನಡ ಸಾಹಿತ್ಯ ಚರಿತ್ರೆ ಸಂದರ್ಭ­ದಲ್ಲಿ ಪ್ರಗತಿಶೀಲ ಕಾವ್ಯವನ್ನು ಪ್ರತಿನಿಧಿ­ಸುವಂತಹ ‘ಕಾರಹುಣ್ಣಿವೆ’ ಎನ್ನುವ ಸಂಕಲನ ರಚಿಸಿದ್ದರು’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಸಣ್ಣಕತೆಗಳಿಗೆ ಬುನಾದಿ ಹಾಕಿಕೊಟ್ಟ ಆನಂದಕಂದರು, ಮಾಸ್ತಿ ಅವರ ಐತಿಹಾಸಿಕ ಕಾದಂಬರಿಗಳಿಗಿಂತ ಯಾವ ರೀತಿ ಕಡಿಮೆ ಇಲ್ಲದ ಕಾದಂಬರಿಗಳನ್ನು ಬರೆದರು. ಜತೆಗೆ, ಮೊದಲಿಗರಾಗಿ ಇಡೀ ರಾಜ್ಯದಲ್ಲಿ ಜಾನಪದ ಸಂಗ್ರಹದ ಕಾರ್ಯ ಆರಂಭಿಸಿದರು. ಪತ್ರಕರ್ತ­ರಾಗಿ ಕೂಡ ಸುಮಾರು 20 ವರ್ಷ­ಕ್ಕಿಂತಲೂ ಅಧಿಕ ಕಾಲ ಅನೇಕ ಪತ್ರಿಕೆ­ಗಳಲ್ಲಿ ಕಾರ್ಯ­ನಿರ್ವಹಿಸಿದರು. ಅವರ ಕಾವ್ಯ ಮತ್ತು ಸಾಹಿತ್ಯವನ್ನು ಜನರಿಗೆ ತಲುಪಿ­ಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಟ್ರಸ್ಟ್‌ ರಚಿಸಿದೆ. ಟ್ರಸ್ಟ್‌ ಮೂಲಕ ಕಳೆದ  ನಾಲ್ಕು ವರ್ಷಗಳಿಂದ ಅನೇಕ ಕಾರ್ಯ­ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಹಿರಿಯ ಕವಿ ಎಚ್‌.ಎಸ್. ವೆಂಕಟೇಶ­ಮೂರ್ತಿ ಮಾತನಾಡಿ, ‘ಖಂಡ ಜೀವನ ನಡೆಸುತ್ತಿರುವ ಅಖಂಡ ಕರ್ನಾಟಕದ ಕಲ್ಪನೆ ಬಹಳ ದುರಂತ­ಮಯ­ವಾದದ್ದು. ನಮ್ಮ ಪ್ರಾದೇಶಿಕ ಪ್ರದೇಶ-­ಗಳ ನಡುವೆ ಸಂವಹನದ ಕೊರತೆ­ಯನ್ನು ನಾವು ಎದುರಿಸುತ್ತಿ­ದ್ದೇವೆ. ಈ ಎಲ್ಲೆಯನ್ನು ಮೀರುವ ದಿಸೆಯಲ್ಲಿ ಇವತ್ತು ನಾವು ನಮ್ಮ ಮಹಾ ಕವಿಗಳ­ನ್ನಾದರೂ ನಮ್ಮ ನಾಡ ಕವಿಗಳನ್ನಾಗಿ ಬೆಳೆಸಿ, ಉಳಿಸಿ­ಕೊಂಡು ಬಳಸಿ­ಕೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯ­ಪಟ್ಟರು.

ಕಾರ್ಯಕ್ರಮದಲ್ಲಿ ಆನಂದಕಂದರ ಕವಿತೆ­ಗಳನ್ನು ಪ್ರಸ್ತುತಪಡಿಸಲಾಯಿತು. ಉಪಾಸನಾ ಟ್ರಸ್ಟ್‌ನ ಅಧ್ಯಕ್ಷ ಉಪಾಸನಾ ಮೋಹನ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.