ADVERTISEMENT

ಶೈಕ್ಷಣಿಕ ಅಸಮಾನತೆಯಿಂದ ಭಾಷಾ ಬಿಕ್ಕಟ್ಟು

ಕನ್ನಡ ಅಧ್ಯಾಪಕರ ಸಮಾವೇಶದಲ್ಲಿ ಬರಗೂರು ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 19:47 IST
Last Updated 27 ಜೂನ್ 2014, 19:47 IST
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟವು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕನ್ನಡ ಅಧ್ಯಾಪಕರ ಸಮಾವೇಶ’ದಲ್ಲಿ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಅಧ್ಯಾಪಕರ ಜೊತೆಗೆ ಸಮಾಲೋಚನೆ ನಡೆಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿ.ಬಿ.ಹೊನ್ನುಸಿದ್ಧಾರ್ಥ್‌ ಮತ್ತಿತರರು ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟವು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕನ್ನಡ ಅಧ್ಯಾಪಕರ ಸಮಾವೇಶ’ದಲ್ಲಿ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಅಧ್ಯಾಪಕರ ಜೊತೆಗೆ ಸಮಾಲೋಚನೆ ನಡೆಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿ.ಬಿ.ಹೊನ್ನುಸಿದ್ಧಾರ್ಥ್‌ ಮತ್ತಿತರರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ಶೈಕ್ಷಣಿಕ ಅಸಮಾ­ನತೆಯೇ ಭಾಷೆಯ ಬಿಕ್ಕಟ್ಟಿಗೆ ಕಾರಣ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ವಿಶ್ವ­ವಿದ್ಯಾ­ಲಯದ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟವು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕನ್ನಡ ಅಧ್ಯಾಪಕರ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಕನ್ನಡ ಕಲಿತರೆ ಉದ್ಯೋಗ ಸಿಗು­ವು­ದಿಲ್ಲ ಎಂಬ ಬಿಕ್ಕಟ್ಟು ಒಂದು ಶತಮಾನ­ದಿಂದಲೂ ಇದೆ. ಪ್ರಸ್ತುತ  ತೆಲುಗು, ತಮಿಳು ಸೇರಿದಂತೆ ಎಲ್ಲ ದೇಶೀಯ ಭಾಷೆಗಳು ಸಹ ಇಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಒಂದರಿಂದ ನಾಲ್ಕನೇ ತರಗತಿವರೆಗಿನ ಶಿಕ್ಷಣ ಮಾಧ್ಯಮವನ್ನು ಪರಿಗಣಿಸಿ ಎಲ್ಲಿಯೂ ಉದ್ಯೋಗವನ್ನು ನೀಡುವುದಿಲ್ಲ’ ಎಂದರು.

‘ಒಂದೇ ವಯಸ್ಸಿನ ಬಡವರ ಮಕ್ಕಳು ಅಂಗನವಾಡಿಗೆ ಶ್ರೀಮಂತರ ಮಕ್ಕಳು ಎಲ್‌ಕೆಜಿ, ಯುಕೆಜಿಗೂ ಹೋಗುತ್ತವೆ. ಇದು ಕೇವಲ ಭಾಷಾ ಮಾಧ್ಯಮದ ಸಮಸ್ಯೆ ಅಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆ ಕೂಡ ಅದಕ್ಕೆ ಕಾರಣ­ವಾಗಿದೆ’ ಎಂದರು.

‘ದೇಶದಲ್ಲಿ ಶೇ 12ರಷ್ಟು ಮಂದಿ ಉನ್ನತ ಶಿಕ್ಷಣ ಕಲಿಯುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವೃತ್ತಿ ಶಿಕ್ಷಣ ಶ್ರೇಷ್ಠ, ಸಾಮಾನ್ಯ ಶಿಕ್ಷಣ ಶ್ರೇಷ್ಠ ಅಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ. ವೃತ್ತಿ ಶಿಕ್ಷಣ ಮತ್ತು ಸಾಮಾನ್ಯ ಶಿಕ್ಷಣದ
ನಡು­ವಿನ ಅಸಮತೋಲನವನ್ನು ತಪ್ಪಿಸುವ ಶಿಕ್ಷಣ ಪದ್ಧತಿಯನ್ನು ರೂಪಿಸಬೇಕಾದ ಅಗತ್ಯ ಇದೆ’ ಎಂದು ಹೇಳಿದರು.

‘ಬ್ರಿಟಿಷರ ಕಾಲದಲ್ಲಿ ಕನ್ನಡ ಉತ್ತಮ­ವಾಗಿತ್ತು ಎಂಬ ಭ್ರಮೆ ಕೆಲವರಲ್ಲಿ ಇದೆ. ಆಡಳಿತದ ಅನುಕೂಲಕ್ಕಾಗಿ  ಮಾತ್ರ ಅವರು ಕನ್ನಡವನ್ನು ಬಳಸುತ್ತಿದ್ದರು. ಅವರ ಶಿಕ್ಷಣ ಮಾಧ್ಯಮ ಇಂಗ್ಲಿಷ್‌ ಆಗಿತ್ತು. 1800ರಲ್ಲಿ ಹೊನ್ನಾವರದಲ್ಲಿ ಮೊದಲ ಇಂಗ್ಲಿಷ್‌ ಮಾಧ್ಯಮ ಶಾಲೆ­ಯನ್ನು  ಆರಂಭಿಸಲಾಯಿತು. 1914ರ ವೇಳೆಗೆ ರಾಜ್ಯದಲ್ಲಿ 322 ಇಂಗ್ಲಿಷ್‌ ಮಾಧ್ಯಮ ಶಾಲೆಗಳಿದ್ದರೆ ಕೇವಲ 173 ಕನ್ನಡ ಮಾಧ್ಯಮ ಶಾಲೆಗಳಿದ್ದವು’ ಎಂದರು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಮಾತ­ನಾಡಿ, ‘ಈವರೆಗಿನ ಯಾವ ಸರ್ಕಾರ­ಗಳೂ ಶಿಕ್ಷಕರ ಸಮಸ್ಯೆಗಳ ನಿವಾ­ರಣೆಗೆ ಆದ್ಯತೆ ನೀಡಿಲ್ಲ. ಅನುದಾನರಹಿತ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷ­ಕರಿಗೆ ಕನಿಷ್ಠ ವೇತನ ಸಹ ಇಲ್ಲ. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲ­ಪತಿ ಪ್ರೊ.ಬಿ.ತಿಮ್ಮೇಗೌಡ ಮಾತ­ನಾಡಿ, ‘ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಶೇ 40ರಷ್ಟು ಕನ್ನಡ ಅಧ್ಯಾಪಕರ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ನೇಮಕ ಮಾಡಲು ಕ್ರಮ ಕೈಗೊಳ್ಳ­ಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.