ಬೆಂಗಳೂರು: ಕನ್ನಡದ ಸಾಹಿತಿ ಎಸ್.ಎಲ್.ಭೈರಪ್ಪ ಹಾಗೂ ತೆಲುಗು ಚಿತ್ರನಟ ರಾಜೇಂದ್ರ ಪ್ರಸಾದ್ ಅವರಿಗೆ ಈ ಸಾಲಿನ ಶ್ರೀಕೃಷ್ಣ ದೇವರಾಯ ಪ್ರಶಸ್ತಿ ನೀಡಲು ತೆಲುಗು ವಿಜ್ಞಾನ ಸಮಿತಿ ನಿರ್ಧರಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎ.ರಾಧಾಕೃಷ್ಣರಾಜು, ‘ಸಮಿತಿಯು ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಅಥವಾ ರಂಗಭೂಮಿ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ಶ್ರೀಕೃಷ್ಣದೇವರಾಯ ಪ್ರಶಸ್ತಿ ನೀಡುತ್ತಾ ಬಂದಿದೆ. ಇದೊಂದು ಗೌರವ ಪ್ರಶಸ್ತಿ. ಪುರಸ್ಕೃತರಿಗೆ ನಗದು ನೀಡುವುದಿಲ್ಲ.
ಏಪ್ರಿಲ್ 22ರಂದು ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ಟಿ.ಸುಬ್ಬರಾಮರೆಡ್ಡಿ ಲಲಿತ ಕಲಾ ಪರಿಷತ್ತಿನ ಆಶ್ರಯದಲ್ಲಿ ಏರ್ಪಡಿಸಿರುವ ಸಮಿತಿಯ 65ನೇ ಯುಗಾದಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ಎಂದರು.
‘ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡಿನ ರಾಜ್ಯಪಾಲರಾದ ಸಿ.ಎಚ್.ವಿದ್ಯಾಸಾಗರ ರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಹಾಗೂ ರಾಜ್ಯಸಭಾ ಸದಸ್ಯ ಟಿ.ಸುಬ್ಬರಾಮಿ ರೆಡ್ಡಿ ಅಥಿತಿಯಾಗಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.