ಬೆಂಗಳೂರು: ‘ಬಾ ಇಲ್ಲಿ, ಇವರ ಹೆಸರೇನು, ಈ ಮನೆಯ ಓನರ್ ಯಾರು ಹೇಳು ನೋಡೋಣ’ ಎಂದು ಕೇಳುತ್ತಿದ್ದಂತೆ ಬೂತ್ ಏಜೆಂಟ್ ತಬ್ಬಿಬ್ಬು. ‘ನೋಡು... ನಿನ್ನ ಏರಿಯಾದ ಪ್ರತಿ ಮನೆ, ಅಲ್ಲಿರುವವರ ಹೆಸರು ಎಲ್ಲ ತಿಳಿದುಕೊಂಡಿರಬೇಕು, ಗೊತ್ತಾಯ್ತಾ’ ಎಂದು ಹೆಗಲ ಮೇಲೆ ಕೈಇಟ್ಟು ಪ್ರೀತಿಯಿಂದ ಗದರಿದರು ಮಲ್ಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಂಗಲ್ ಶ್ರೀಪಾದ ರೇಣು.
ಮುಂಜಾನೆ 6.30ಕ್ಕೇ ತಮ್ಮ ಮನೆಯಿಂದ ಹೊರಟ ಅವರು ಯಶವಂತಪುರ ತ್ರಿವೇಣಿ ರಸ್ತೆಯಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕಾರ್ಯಕರ್ತರೊಬ್ಬರ ಮನೆಯಲ್ಲಿ ಪುಳಿಯೋಗರೆ, ವಡಾ, ಕಾಫಿ ಸೇವಿಸಿದರು. ನೀರು ಕೊಡಿ ಎಂದು ಕೇಳಿ ಒಂದು ತಂಬಿಗೆ ನೀರು ಕುಡಿದು ಮತ ಯಾಚನೆಗೆ ಅಣಿಯಾದರು.
ಹೆಂಗಳೆಯರು ಆರತಿ ಎತ್ತಿ, ಓಕುಳಿ ನೀರು ನೆಲಕ್ಕೆ ಚೆಲ್ಲುತ್ತಿದ್ದಂತೆ ಪಟಾಕಿ ಉರಿಯಿತು. ಅಲ್ಲಿಂದ ಶುರುವಾದ ಶ್ರೀಪಾದ್ ಅವರ ಪಾದರಸ ನಡಿಗೆ ಸಂಜೆಯಾದರೂ ಕುಂದಲಿಲ್ಲ. ಕಾರ್ಯಕರ್ತರು ಮನೆಮನೆಯ ಬಾಗಿಲು ತಟ್ಟಿ ಒಳಗಿದ್ದವರನ್ನು ಕರೆಯುತ್ತಿದ್ದರು. ಕೈ ಜೋಡಿಸಿ ‘ನಮಸ್ಕಾರ’ ಎಂದು ಹೇಳುತ್ತಿದ್ದ ಶ್ರೀಪಾದ್ ಮುಂದೆ ಸಾಗುತ್ತಿದ್ದರು. ಇವರಿಗೇ ಮತ ಹಾಕಿ ಎಂದು ಹೇಳುವ ಕೆಲಸ ಕಾರ್ಯಕರ್ತರದ್ದು.
ಮನೆಯಿಂದ ಹೊರಬಂದ ತಮ್ಮ ಸ್ನೇಹಿತರು, ಸಂಬಂಧಿಕರನ್ನು ಅಭ್ಯರ್ಥಿಗೆ ಪರಿಚಯ ಮಾಡಿಸಿಕೊಡುವುದರಲ್ಲಿ ಕಾರ್ಯಕರ್ತರು ನಿರತರಾಗಿದ್ದರು. ಅಲ್ಲೇ ರಸ್ತೆ ಬದಿಯಲ್ಲಿ ನಿಂತವರೊಬ್ಬರು, ‘ಸರ್ ಎನಿಟೈಮ್, 24 ಅವರ್ಸ್ ಕರೆದ್ರೂ ಬರ್ತೀನಿ, ನನ್ನ ಸಪೋರ್ಟ್ ನಿಮಗೇ’ ಎಂದರು. ‘ಇನ್ನೂ ಇಲ್ಲೇ ಇದ್ದೀಯಾ, 24 ಗಂಟೆ ಅಂತಿದಿಯಲ್ಲ’ ಎಂದು ಶ್ರೀಪಾದ್ ನಗೆ ಚಟಾಕಿ ಹಾರಿಸುತ್ತಿದ್ದಂತೆ ತಲೆ ತಗ್ಗಿಸಿದ ಅವರು ‘ಬಂದೇ ಸಾರ್’ ಎನ್ನುತ್ತಾ ಗುಂಪಿನೊಂದಿಗೆ ಹೆಜ್ಜೆ ಹಾಕಿದರು.
ತಿರುವು ಮುರುವು, ಸಂದಿಗೊಂದಿಗಳಲ್ಲಿ ಇರುವ ಮನೆಗಳಿಗೂ ಸಾಗಿ ಮತ ಯಾಚಿಸಿದರು. ‘ನಮಸ್ಕಾರ, ಒಂದು ಚಾನ್ಸ್ ಕೊಡಿ’ ಎಂದು ಮತದಾರರಲ್ಲಿ ಕೇಳಿಕೊಂಡರು. ಕೆಲವು ಮನೆಗಳಲ್ಲಿ ಬಾಗಿಲು ತಟ್ಟಿದರೂ ಕದ ತೆಗೆಯಲಿಲ್ಲ. ಹಿಂದಿದ್ದ ಕಾರ್ಯಕರ್ತರೊಬ್ಬರು ‘ಸಿಕ್ಕಾಪಟ್ಟೆ ಸೆಕೆ ಇದೆ. ಬೇಗ ಹೊರಗೆ ಬನ್ನಿ. ಬಿಸಿಲಲ್ಲಿ ನಿಲ್ಲೋಕೆ ಆಗಲ್ಲ. ಪಾಪ ಎಷ್ಟು ಸುಸ್ತಾಗ್ತಿದೆಯೇನೊ’ ಎಂದು ಗೊಣಗುತ್ತಿದ್ದಂತೆ ಇನ್ನೊಬ್ಬರು, ‘ಹಾಗೆಲ್ಲಾ ಹೇಳಬೇಡ. ನಾವು ಬಂದಿರೋದು ಮತ ಕೇಳೋಕೆ. ಬಿಸಿಲಲ್ಲ, ಮಳೆಯಾದ್ರೂ ಸುಮ್ಮನಿರಬೇಕು’ ಎಂದು ಬುದ್ಧಿವಾದ ಹೇಳಿದರು.
ಮನೆಯೊಂದರಲ್ಲಿ ಎರಡು ನಿಮಿಷ ಕುಳಿತು ನೀರು ಕುಡಿದರು. ‘ಜೂಸ್ ಕುಡಿದೇ ಹೋಗಬೇಕು’ ಎಂದು ಒತ್ತಾಯಿಸಿದರೂ ಬೇಸಿಗೆಯಲ್ಲಿ ಬೇಕಿರುವುದು ನೀರು, ಇಷ್ಟು ಸಾಕು ಎಂದು ಹೊರಟರು.
ಕಾರ್ಯಕರ್ತರು, ಪದಾಧಿಕಾರಿಗಳು ಪ್ರತಿಯೊಬ್ಬರನ್ನೂ ನಿಲ್ಲಿಸಿ ಮತಯಾಚಿಸಿದರು. ಮನೆಯ ಮಾಳಿಗೆಯಲ್ಲಿ ನಿಂತವರು, ಬಾಗಿಲಿನಿಂದ ಇಣುಕಿ ನೋಡುತ್ತಿದ್ದವರು, ಕಂಡರೂ ಕಾಣದಂತೆ ತಿರುಗಿ ಹೊರಟವರೆಲ್ಲರನ್ನೂ ಮಾತನಾಡಿಸಿ ಮತ ಕೇಳುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು.
ಮಾದರಿ ಮತಯಂತ್ರ: ಅಭ್ಯರ್ಥಿ ಮತ ಯಾಚಿಸುತ್ತಾ ಮುಂದೆ ಸಾಗುತ್ತಿದ್ದರೆ ಕಾರ್ಯಕರ್ತರು ಮಾದರಿ ವಿದ್ಯುನ್ಮಾನ ಮತಯಂತ್ರ ತೋರಿಸಿ ಹೇಗೆ ಮತ ಚಲಾಯಿಸಬೇಕು ಎಂದು ಜನರಿಗೆ ತಿಳಿಹೇಳುತ್ತಿದ್ದರು. ಬೂತ್‌ಗೆ ಹತ್ತರಂತೆ 70 ಮಾದರಿ ಮತಯಂತ್ರವಿದ್ದು ಕಾರ್ಯಕರ್ತರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುತ್ತಾರೆ ಎಂದು ವಿವರಿಸಿದರು ಕಾರ್ಯಕರ್ತರೊಬ್ಬರು.
ಒಂದು ಕೆ.ಜಿ. ಸಿಹಿ
ಅಂಗಡಿಯ ಮುಂಭಾಗದಲ್ಲಿ ನಿಂತು ಮತಯಾಚಿಸುತ್ತಿದ್ದ ಶ್ರೀಪಾದ್ ಅವರನ್ನು ಕಂಡು ಅಲ್ಲೇ ಪಕ್ಕದಲ್ಲಿದ್ದ ಸೆಕ್ಯುರಿಟಿ, ‘ನೀವು ಗೆದ್ದು ಬಿಟ್ಟಿದ್ದೀರಿ ಬಿಡಿ ಸರ್. ಎಲ್ಲರಿಗೂ ನಿಮ್ಮ ಪರಿಚಯ ಇದೆ. ನೀವು ಗೆದ್ದೇ ಗೆಲ್ತೀರಿ’ ಎಂದು ಕೈ ಕುಲುಕಿದರು. ಕಿರುನಗೆಯಲ್ಲಿಯೇ ಧನ್ಯವಾದ ಸೂಚಿಸಿ ಅವರು ಮುನ್ನಡೆಯುತ್ತಿದ್ದಂತೆ ಕಾರ್ಯಕರ್ತರೊಬ್ಬರು ನಾಳೆ ನಿಮಗೆ ಒಂದು ಕೆ.ಜಿ. ಸ್ವೀಟ್... ಎಂದು ಘೋಷಿಸಿದರು. ಮೊಗದಲ್ಲಿ ದುಪ್ಪಟ್ಟು ನಗು ಚೆಲ್ಲಿ ‘ಸಿಹಿಯೇನು ಬೇಡ, ಜನರಿಗೆ ಒಳ್ಳೆಯದಾದರೆ ಸಾಕು’ ಎಂದು ಸೆಕ್ಯುರಿಟಿ ಉತ್ತರಿಸಿದರು.
ನಾನು ಸೀರಿಯಸ್ ಕ್ರೀಡಾಪಟು
‘ಮಜಾಕ್ಕಾಗಿ ಆಡುವವ ನಾನಲ್ಲ. ಕ್ರಿಕೆಟ್, ಗಾಲ್ಫ್ ನನಗಿಷ್ಟ. ನಿತ್ಯ ಬೆಳಿಗ್ಗೆ 5 ಗಂಟೆಗೆ ಎದ್ದುಬಿಡುತ್ತೇನೆ. ಬೆಳಿಗ್ಗೆ 6.30ರಿಂದ ನನ್ನ ಕೆಲಸಗಳು ಪ್ರಾರಂಭವಾಗುತ್ತವೆ. ಸುಮಾರು ಮಧ್ಯಾಹ್ನ 12 ಗಂಟೆಯವರೆಗೆ ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತೇನೆ. ಮಧ್ಯಾಹ್ನ ತುಸು ವಿಶ್ರಾಂತಿ ಪಡೆಯುತ್ತೇನೆ. ಮತ್ತೆ 4 ಗಂಟೆಗೆ ಪ್ರಚಾರ ಸಂಜೆ 7.30ರವರೆಗೆ ಅದೇ ಕೆಲಸ’ ಎಂದರು ಶ್ರೀಪಾದ್.
ಗಾಲ್ಫ್, ಕ್ರಿಕೆಟ್ ಆಡುವವನಾದ್ದರಿಂದ ಈ ಓಡಾಟವೆಲ್ಲಾ ನನಗೆ ಹೊಸದಲ್ಲ. ಬಳ್ಳಾರಿವರೆಗೆ ಪಾದಯಾತ್ರೆ ಕೂಡ ಮಾಡಿದ್ದೇನಲ್ಲ. ಒಂದೇ ಒಂದು ಸಮಸ್ಯೆ ಎಂದರೆ, ಮಾತಾಡಿ ಮಾತಾಡಿ ಗಂಟಲು ಕೈಕೊಡುತ್ತದೆ. ಬಿಸಿಲು ಜಾಸ್ತಿ ಆದ್ದರಿಂದ ಜಾಸ್ತಿ ಊಟ ಮಾಡಲು ಸಾಧ್ಯವಿಲ್ಲ. ಸಿಕ್ಕಾಪಟ್ಟೆ ನೀರು ಕುಡಿಯುತ್ತೇನೆ. ಚುನಾವಣಾ ಪ್ರಚಾರಕ್ಕಿಳಿದರೆ ತನ್ನಿಂದ ತಾನೆ ತೂಕ ಇಳಿಯುತ್ತದೆ ಎನ್ನುವುದು ಪ್ಲಸ್‌ಪಾಯಿಂಟ್ ಎಂದು ವಿವರಿಸಿದರು.
‘ಕಾಡು ಹರಟೆ, ಸಮಯ ಹಾಳು ಮಾಡುವುದು ನನಗೆ ಇಷ್ಟವಾಗುವುದಿಲ್ಲ. ಸಮಯ ಸಿಕ್ಕಾಗಲೆಲ್ಲಾ ಆಟ ಆಡುವುದು ನನ್ನ ಹವ್ಯಾಸ. ನನಗೆ ಒತ್ತಡದಿಂದ ಹೊರ ಬರುವ ದಾರಿ ಆಟ’ ಎಂದು ಹೇಳಿದರು.
ಅಂತರ್ಜಾಲ ಮಾಹಿತಿ: ಸಂಜೆ ಸುಮಾರು ಒಂದುವರೆ ಗಂಟೆ ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸುತ್ತೇನೆ. ಅರ್ಥಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಓದುತ್ತೇನೆ. ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರುವುದರಿಂದ ಇದೊಂದು ಕೆಲಸಕ್ಕೆ ಪೆಟ್ಟು ಬಿದ್ದಿದೆ ಎಂದರು.
ಮಾದರಿ ಮತಯಂತ್ರ
ಅಭ್ಯರ್ಥಿ ಮತ ಯಾಚಿಸುತ್ತಾ ಮುಂದೆ ಸಾಗುತ್ತಿದ್ದರೆ ಕಾರ್ಯಕರ್ತರು ಮಾದರಿ ವಿದ್ಯುನ್ಮಾನ ಮತಯಂತ್ರ ತೋರಿಸಿ ಹೇಗೆ ಮತ ಚಲಾಯಿಸಬೇಕು ಎಂದು ಜನರಿಗೆ ತಿಳಿಹೇಳುತ್ತಿದ್ದರು. ಬೂತ್‌ಗೆ ಹತ್ತರಂತೆ 70 ಮಾದರಿ ಮತಯಂತ್ರವಿದ್ದು ಕಾರ್ಯಕರ್ತರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುತ್ತಾರೆ ಎಂದು ವಿವರಿಸಿದರು ಕಾರ್ಯಕರ್ತರೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.