ADVERTISEMENT

ಸಂಸ್ಕೃತ, ಪ್ರಾಕೃತಗಳಿಂದ ಕನ್ನಡ ಸಾಹಿತ್ಯ ದಷ್ಟಪುಷ್ಟ

ದಾಸ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಹಂಪನಾ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 19:31 IST
Last Updated 12 ಏಪ್ರಿಲ್ 2014, 19:31 IST

ಬೆಂಗಳೂರು: ‘ಕನ್ನಡ ಸಾಹಿತ್ಯ ಇಬ್ಬರು ತಾಯಂದಿರ  ಎದೆಹಾಲು ಕುಡಿದು ದಷ್ಟಪುಷ್ಟ­ವಾಗಿ ಬೆಳೆದಿದೆ. ಒಬ್ಬ ತಾಯಿ ಸಂಸ್ಕೃತ­ವಾದರೆ ಮತ್ತೊಬ್ಬ ತಾಯಿ ಪ್ರಾಕೃತ’ ಎಂದು ಸಾಹಿತಿ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ಶೇಷಾದ್ರಿಪುರ ಕಾಲೇಜಿನ ಕನ್ನಡ ಸಂಘ ಮತ್ತು ದಾಸ ಸಾಹಿತ್ಯ ಪರಿಷತ್ತು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ದಾಸ ಸಾಹಿತ್ಯ– ಮೂರು ಆಯಾಮ’ ವಿಷಯ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.‘ಕನ್ನಡ ಸಾಹಿತ್ಯ ಕೇವಲ ಸಂಸ್ಕೃತ ಸಾಹಿತ್ಯದಿಂದ ಪ್ರಭಾವ ಪಡೆದಿದೆ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ, ಸಂಸ್ಕೃತದ ಜತೆಗೆ ಪ್ರಾಕೃತ ಸಾಹಿತ್ಯವೂ ಕನ್ನಡದ ಮೇಲೆ ಗಾಢ­ಪ್ರಭಾವ ಬೀರಿದೆ’ ಎಂದು ನುಡಿದರು.

‘ಭಕ್ತಿಯ ಅಂತರಗಂಗೆ ಹೆಚ್ಚಾಗಿ ಹರಿದಿದ್ದು ದಾಸ ಸಾಹಿತ್ಯದಲ್ಲಿ. ಅದಕ್ಕೂ ಮೊದಲು ಶರಣರ ಕಾಲದಲ್ಲಿ ಭಕ್ತಿ ಸಾಹಿತ್ಯ ಬೆಳೆದಿದ್ದರೂ ಹಾಡುವ ಮಟ್ಟಾಗಿ ಕೀರ್ತನದ ರೂಪ ಪಡೆದಿದ್ದು ವಿಜಯನಗರ ಅರಸರ ಕಾಲದಲ್ಲಿ. ದಾಸ ಸಾಹಿತ್ಯ ಕೇವಲ ದ್ವೈತ ಪಂಥಕ್ಕೆ ಮಾತ್ರ ಸೀಮಿತವಾದುದಲ್ಲ. ಅದರ ವ್ಯಾಪ್ತಿ ಅಸೀಮವಾದುದು’ ಎಂದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾ.ಗೀತಾಚಾರ್ಯ ಅವರು ಸಂಪಾದಿಸಿರುವ ‘ಇಪ್ಪತ್ತರ ಇಣುಕು ನೋಟ’ ಪುಸ್ತಕ ಬಿಡುಗಡೆ­ಗೊಳಿಸಿ ಮಾತನಾಡಿದ ದಾಸ ಸಾಹಿತ್ಯ ಪರಿ­ಷತ್ತಿನ ಅಧ್ಯಕ್ಷ ಪ್ರೊ.­ಜಿ.­ಅಶ್ವತ್ಥ­ನಾರಾ­ಯಣ, ‘ಜೈನ ಕವಿಗಳು ದಾಸ ಸಾಹಿತ್ಯ ರಚನೆಗೆ ಹೆಚ್ಚು ಗಮನ ನೀಡಲಿಲ್ಲ. ಆದರೆ ಮುಂದೆ ಕ್ರೈಸ್ತ ಧರ್ಮದ ಪ್ರಚಾರ­ಕ್ಕಾಗಿ ಕ್ರಿಸ್ತದಾಸರು ಕೀರ್ತನೆ­ಗ­ಳನ್ನು ರಚಿಸಿ ದರು. ಭಿನ್ನ ಪಂಥಗಳು ಹೇಗೆ ದಾಸ ಸಾಹಿತ್ಯವನ್ನು ಬೆಳೆಸಿದವು ಎಂಬುದು ಪುಸ್ತಕದಲ್ಲಿ ದಾಖಲಾಗಿದೆ’ ಎಂದು ಹೇಳಿದರು.

‘ ಶರಣರು ಹಾಕಿದ ಸ್ವರ ವಚನಗಳ ಅಡಿಪಾಯದ ಮೇಲೆ ದಾಸ ಸಾಹಿತ್ಯದ ಭವ್ಯ ಸೌಧ ಕಟ್ಟಿದವರು ಹರಿದಾಸರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸೇರಿ­ದಂತೆ ವಿವಿಧ ಪಂಥದವರು ಕೀರ್ತನೆ­ಗಳನ್ನು ರಚಿಸಿದ್ದಾರೆ’ ಎಂದರು.

ಡಾ.ನಾ.ಗೀತಾಚಾರ್ಯ, ‘ಸಮಾ­ಜ­ದ ಎಲ್ಲ ವರ್ಗದ ಜನರೂ ದಾಸ ಸಾಹಿತ್ಯ ರಚಿಸಿ­ದ್ದಾರೆ. ಶಿಶುನಾಳ ಷರೀಫ, ಬಡೇಸಾಬ್‌, ಗಾಣಿಗರಾದ ಮಳಿಗೆ ರಂಗ­ಸ್ವಾಮಿ­ದಾಸ ಸೇರಿದಂತೆ ಅನೇ­ಕರು ಕೀರ್ತನ ಸಾಹಿತ್ಯವನ್ನು ಶ್ರೀಮಂತ­ಗೊಳಿಸಿ­ದ್ದಾರೆ. ತುಳಸಿ­ರಾಮ­ದಾಸರ ಶಿಷ್ಯರಲ್ಲಿ ದೇವಾಂಗ, ಗೌಡ, ಉಪ್ಪಾರ, ದಲಿತರು ಸೇರಿ­ ವಿವಿಧ ವರ್ಗದವರಿದ್ದರು’ ಎಂದರು. ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವೂಡೆ ಪಿ. ಕೃಷ್ಣ ಮಾತನಾಡಿದರು.
ನಾರಾಯಣ ಶರ್ಮ ಸಂಸ್ಕೃತಿ ಕೇಂದ್ರ ಹೊರತಂದಿರುವ ‘ಇಪ್ಪ­ತ್ತರ ಇಣುಕು ನೋಟ’ ಪುಸ್ತಕದ ಬೆಲೆ ₨ 50.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.