ಬೆಂಗಳೂರು: ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸದ್ದಿಲ್ಲದೆ ಮಧುಮೇಹ (ಸಕ್ಕರೆ ಕಾಯಿಲೆ) ವ್ಯಾಪಕವಾಗಿ ಹಬ್ಬುತ್ತಿದೆ. ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದ್ದರೆ, ನವದೆಹಲಿ ಮೊದಲ ಸ್ಥಾನದಲ್ಲಿದೆ.
ಈ ಆತಂಕಕಾರಿ ಅಂಶವನ್ನು ಕೈಗಾರಿಕಾ ಮತ್ತು ವಾಣಿಜ್ಯ ವೇದಿಕೆಗಳ ಸಂಘದ (ಅಸೋಚಾಂ) ಸಮೀಕ್ಷಾ ವರದಿ ಬಹಿರಂಗಪಡಿಸಿದೆ.
ಬೆಂಗಳೂರಿನಲ್ಲಿ ಶೇ 26.5 ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.
ನ.14 ರ ‘ವಿಶ್ವ ಮಧುಮೇಹಿ ದಿನ’ದ ಅಂಗವಾಗಿ ‘ಅಸೋಚಾಂ’ ನವದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ, ಚೆನ್ನೈ, ಚಂಡೀಗಡ, ಅಹ್ಮದಾಬಾದ್, ಹೈದರಾಬಾದ್, ಪುಣೆ, ಡೆಹ್ರಾಡೂನ್ ನಗರಗಳಲ್ಲಿ ಈ ಸಮೀಕ್ಷೆ ನಡೆಸಿದೆ.
ದೇಶದಲ್ಲಿ 2035ರ ವೇಳೆಗೆ 12.5 ಕೋಟಿ ಮಂದಿ ಮಧುಮೇಹಿಗಳಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಈಗಲೇ ಜೀವನಶೈಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದನ್ನು ವರದಿ ಗುರುತಿಸಿದೆ. 2006ರಲ್ಲಿ 2.5 ಕೋಟಿಯಷ್ಟಿದ್ದ ಮಧುಮೇಹಿಗಳ ಸಂಖ್ಯೆ 2014ರಲ್ಲಿ 6.8 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.
ಆಹಾರದಲ್ಲಿ ಹೆಚ್ಚಾಗಿ ಬಳಸುತ್ತಿರುವ ಎಣ್ಣೆ, ಬೆಣ್ಣೆ ತುಪ್ಪದಿಂದ ಜನರಲ್ಲಿ ಬೊಜ್ಜು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿದೆ. ಇದರಿಂದ, ಪುರುಷರಲ್ಲಿ ಶೇ 25 ಹಾಗೂ ಮಹಿಳೆಯರಲ್ಲಿ ಶೇ 42 ರಷ್ಟು ಮಧುಮೇಹದ ಪ್ರಮಾಣ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
‘ಇನ್ಸುಲಿನ್ ಪ್ರಮಾಣ ಕಡಿಮೆ ಆಗುವ ಮಧುಮೇಹದಿಂದ ಶೇ 98 ರಷ್ಟು ಮಂದಿ ಬಳಲುತ್ತಿದ್ದಾರೆ. ಅವರಲ್ಲಿ 30 ರಿಂದ 40 ವರ್ಷದೊಳಗಿನವರು ಮಧುಮೇಹದ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅಲ್ಲದೇ, 20 ರಿಂದ 30 ವರ್ಷದೊಳಗಿನ ಶೇ 28 ರಷ್ಟು ಮಂದಿಗೆ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ’ ಎಂದು ವಿವರಿಸಲಾಗಿದೆ.
‘ಮಧುಮೇಹದಿಂದ ಹೃದಯರೋಗ, ಕಿಡ್ನಿ, ಕಣ್ಣು, ನರವ್ಯೂಹಗಳ ಮೇಲೆ ಪರಿಣಾಮ ಬೀರುವುದರಿಂದ, ಅದನ್ನು ತಡೆಗಟ್ಟುವ ಅಗತ್ಯವಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ’ ಎಂದು ವರದಿ ಒತ್ತಿ ಹೇಳಿದೆ.
ಮಧುಮೇಹ ವಿಶ್ವವ್ಯಾಪಿ ಹರಡುವ ಕಾಯಿಲೆಯಾಗಿದ್ದು, ವಿಶ್ವದಲ್ಲಿ 2025ರೊಳಗೆ ಈ ಕಾಯಿಲೆಯಿಂದ ಬಳಲುವವರ ಸಂಖ್ಯೆ 45 ಕೋಟಿಗೆ ತಲುಪಲಿದೆ ಎಂದು ವಿವರಿಸಲಾಗಿದೆ.
ಜೀವನಶೈಲಿ ಕಾರಣ: ಮಧುಮೇಹ ಸಮಸ್ಯೆ ಹೆಚ್ಚಾಗಿರುವ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಮಧುಮೇಹ ಸಂಸ್ಥೆಯ (ಕೆಐಡಿ) ನಿರ್ದೇಶಕ ಕೆ.ಆರ್.ನರಸಿಂಹಶೆಟ್ಟಿ, ‘ಆನುವಂಶಿಕ ಮಧುಮೇಹ ಪ್ರಮಾಣ ಹೆಚ್ಚಾಗಿಲ್ಲ. ಆದರೆ, ಜೀವನಶೈಲಿ ಬದಲಾವಣೆಯಿಂದಲೇ ಇತ್ತೀಚೆಗೆ ಮಧುಮೇಹ ಪ್ರಮಾಣ ಹೆಚ್ಚಾಗಿದೆ’ ಎಂದು ಹೇಳುತ್ತಾರೆ.
‘ಕೆಲಸದ ಒತ್ತಡ, ಬದಲಾದ ಆಹಾರದ ಪದ್ಧತಿ, ಬೊಜ್ಜು, ವ್ಯಾಯಾಮ ಮಾಡದೇ ಇರುವುದು ಈ ಎಲ್ಲ ಕಾರಣಗಳಿಂದ ಸಾಕಷ್ಟು ಯುವ ಜನರು ಮಧುಮೇಹ ಕಾಯಿಲೆಗೆ ಒಳಗಾಗುತ್ತಿದ್ದಾರೆ’ ಎನ್ನುತ್ತಾರೆ.
‘ಸತತವಾಗಿ ಕಂಡುಬರುವ ಸುಸ್ತು, ತೂಕ ಕಳೆದುಕೊಳ್ಳುವುದು, ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರ ವಿಸರ್ಜನೆಯಾಗುವುದು ಮಧುಮೇಹದ ಪ್ರಮುಖ ಲಕ್ಷಣಗಳು. ನಿಯಮಿತ ಆಹಾರ ಸೇವನೆ, ಆರೋಗ್ಯಯುತ ಜೀವನ ಶೈಲಿ ಹಾಗೂ ವೈದ್ಯಕೀಯ ತಪಾಸಣೆಯಿಂದ ಮಧುಮೇಹವನ್ನು ದೂರಗೊಳಿಸಬಹುದು’ ಎಂದು ಸಲಹೆ ನೀಡುತ್ತಾರೆ.
‘ವಂಶವಾಹಿ ಮತ್ತು ಬದಲಾದ ಜೀವನ ಶೈಲಿ ಸೇರಿದಂತೆ ಹಲವಾರು ಕಾರಣಗಳಿಂದ ಯುವ ಜನರಲ್ಲಿ ಮಧುಮೇಹ ಪ್ರಮಾಣ ಹೆಚ್ಚುತ್ತಿದೆ. ವಿಶೇಷವಾಗಿ ಈ ಕಾಯಿಲೆಯಿಂದ ಜನರಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದು ಮಾತ್ರವಲ್ಲದೇ, ಹೃದಯಾಘಾತ, ಕಾಲಿನ ಗಾಯ, ಮೂತ್ರನಾಳ ಸೋಂಕು, ಕಿಡ್ನಿ ವೈಫಲ್ಯ... ಹೀಗೆ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ’ ಎಂದು ಹೇಳುತ್ತಾರೆ.
‘ನ.21 ರಿಂದ ಮಧುಮೇಹ:
ಅಂತರರಾಷ್ಟ್ರೀಯ ವಿಚಾರ ಸಂಕಿರಣ’
ಮಧುಮೇಹದ ಕುರಿತು ಜಾಗೃತಿ ಮೂಡಿಸಲು ನ. 21 ರಿಂದ 23 ರವರೆಗೆ ನಗರದಲ್ಲಿ ಮಧುಮೇಹದ ಕುರಿತು ವಿಚಾರ ಸಂಕಿರಣವನ್ನು ಆಯೋಜನೆ ಮಾಡಲಾಗುವುದು. ಸುಮಾರು 6,000 ತಜ್ಞರು ಭಾಗವಹಿಸಲಿದ್ದಾರೆ.
– ಡಾ. ಕೆ.ಆರ್.ನರಸಿಂಹ ಶೆಟ್ಟಿ, ನಿರ್ದೇಶಕ, ಕರ್ನಾಟಕ ಮಧುಮೇಹ ಸಂಸ್ಥೆ.
ಹೃದಯಾಘಾತದ ಸಾಧ್ಯತೆ ಜಾಸ್ತಿ
ಮಧುಮೇಹ ಇರುವವರಿಗೆ ಹೃದಯಾಘಾತವಾಗುವ ಸಾಧ್ಯತೆ 5 ರಷ್ಟು ಜಾಸ್ತಿ ಇರುತ್ತದೆ. ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ. ಅಲ್ಲದೇ, ಮಧುಮೇಹಿಗಳಲ್ಲಿ ಪ್ಲೇಟ್‌ಲೆಟ್ ರಕ್ತಕಣಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಮಧುಮೇಹ ನೇರವಾಗಿ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಹೃದಯ ಮತ್ತು ಮಿದುಳಿನವರೆಗೂ ಹಾದುಹೋಗುವ ರಕ್ತನಾಳಗಳಿಗೆ ಧಕ್ಕೆ ತರುತ್ತದೆ. ಹೃದಯದ ಒಳಭಾಗದಲ್ಲಿ ರಕ್ತನಾಳವನ್ನು ಹಿಗ್ಗಿಸುವ ಕ್ರಮ ಕಡಿಮೆಯಾಗುತ್ತದೆ.
-– ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ.
ಬೇಕು ಉತ್ತಮ ಆಹಾರ ಕ್ರಮ
ಮಧುಮೇಹವನ್ನು ದೂರವಿಡಲು, ಸೂಕ್ತ ದೇಹ ತೂಕವನ್ನು ಕಾಪಾಡಿಕೊಳ್ಳಬೇಕು. ಜೀವನಶೈಲಿ ಮತ್ತು ಆಹಾರ ಕ್ರಮಗಳನ್ನು ಪಾಲಿಸಬೇಕು. ಕಿಡ್ನಿಗೆ ನೆರವು ನೀಡುವ ಔಷಧಗಳನ್ನು ವೈದ್ಯರ ಸಲಹೆಯ ಮೇರೆಗೆ ಸೇವಿಸಬೇಕು. ಈ ಎಲ್ಲ ಕ್ರಮ ಅನುಸರಿಸಿದರೆ ಮಧುಮೇಹದಿಂದ ಕಿಡ್ನಿಗೆ ತಗಲುವ ದುಷ್ಪರಿಣಾಮಗಳ ತೀವ್ರತೆ ಕಡಿಮೆಯಾಗಿ, ಕಿಡ್ನಿ ತನ್ನ ಕಾರ್ಯಕ್ಷಮತೆಯನ್ನು ತಕ್ಕ ಮಟ್ಟಿಗೆ ಕಾಪಾಡಿಕೊಳ್ಳಬಹುದು.
– ಡಾ.ಚಂದ್ರಶೇಖರ ರಟ್ಕಲ್, ವಿಕ್ಟೋರಿಯಾ ಆಸ್ಪತ್ರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.