ADVERTISEMENT

‘ಸರ್, ಮಹಿಳೆಯರ ಕೈಲಿ ಬಾಂಬ್‌ಗಳಿವೆ’

ಹುಸಿ ಕರೆಗೆ ಬೆಚ್ಚಿದ ಪೊಲೀಸರು l ಪತ್ನಿ ತೊರೆದ ಬಳಿಕ ಖಿನ್ನನಾಗಿದ್ದ ಸುನೀಲ್‌

​ಪ್ರಜಾವಾಣಿ ವಾರ್ತೆ
Published 4 ಮೇ 2019, 19:57 IST
Last Updated 4 ಮೇ 2019, 19:57 IST
ಸುನೀಲ್
ಸುನೀಲ್   

ಬೆಂಗಳೂರು: ಮೊದಲು ವಿದೇಶದಲ್ಲಿ ಕಾರು ಚಾಲಕನಾಗಿದ್ದ ಆತ, ಅತಿಯಾಗಿ ಪ್ರೀತಿಸುತ್ತಿದ್ದ ಪತ್ನಿ ತನ್ನನ್ನು ಬಿಟ್ಟು ಹೋದ ಬಳಿಕ ಖಿನ್ನತೆಗೆ ಒಳಗಾದ. ಆನಂತರ ಯಾವ ಮಹಿಳೆಯನ್ನು ಕಂಡರೂ ಸಿಟ್ಟಿನ ವರ್ತನೆ ತೋರುತ್ತಿದ್ದ. ಅಂತೆಯೇ ಗುರುವಾರ ಮಧ್ಯಾಹ್ನ ದೇವಸ್ಥಾನದ ಬಳಿ ಮಹಿಳೆಯರನ್ನು ಕಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಅವನು ಮಾಡಿದ ಒಂದೇ ಒಂದು ಕರೆ, ಇಡೀ ಪಶ್ಚಿಮ ವಿಭಾಗದ ಪೊಲೀಸರನ್ನೇ ಪೇಚಿಗೆ ಸಿಲುಕಿಸಿತು...!

‘ಸರ್, ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಮೂವರು ಮಹಿಳೆಯರು ನಿಂತಿದ್ದಾರೆ. ಅವರ ಬಳಿ ಮಾರಕಾಸ್ತ್ರಗಳು ಹಾಗೂ ಬಾಂಬ್‌ಗಳು ಇವೆ. ದರೋಡೆ ಮಾಡುವುದಕ್ಕೋ, ಆತ್ಮಾಹುತಿ ಬಾಂಬ್ ದಾಳಿ ಮೂಲಕ ಜನರನ್ನು ಕೊಲ್ಲುವುದಕ್ಕೋ ಸಂಚು ರೂಪಿಸುತ್ತಿರುವಂತಿದೆ. ಆದಷ್ಟು ಬೇಗ ಬಂದು ಅನಾಹುತ ತಪ್ಪಿಸಿ’ ಎಂದು ಹೇಳಿ ಆತ ಕರೆ ಸ್ಥಗಿತಗೊಳಿಸಿದ್ದ.

ಅನ್ನಪೂರ್ಣೇಶ್ವರಿನಗರ ಪೊಲೀಸರು ತಕ್ಷಣ ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನ ದಳಗಳೊಂದಿಗೆ ಸ್ಥಳಕ್ಕೆ ತೆರಳಿದ್ದರು. ಅಕ್ಕ–ಪಕ್ಕದ ಠಾಣೆಗಳ ಸಿಬ್ಬಂದಿಯೂ ಅಲ್ಲಿ ಸೇರಿದ್ದರು. ದೇವಸ್ಥಾನಕ್ಕೆ ಬಂದಿದ್ದ ಎಲ್ಲರನ್ನೂ ವಿಚಾರಣೆ ನಡೆಸಿ, ಸುಮಾರು ಒಂದೂವರೆ ತಾಸು ತಪಾಸಣೆ ನಡೆಸಿದರೂ ಯಾವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ. ಅಷ್ಟರೊಳಗೆ ಕರೆ ಮಾಡಿದ್ದವನ ಮೊಬೈಲ್ ಕೂಡ ಸ್ವಿಚ್ಡ್‌ ಆಫ್ ಆಗಿತ್ತು.

ADVERTISEMENT

ಶ್ರೀರಾಂಪುರದಲ್ಲಿ ಸಿಕ್ಕಿದ: ಯಾವ ಟವರ್‌ನ ವ್ಯಾಪ್ತಿಯಲ್ಲಿ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ ಎಂಬ ಸುಳಿವು ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅದೇ ದಿನ ಮಧ್ಯಾಹ್ನ 3.15ರ ಸುಮಾರಿಗೆ ಆತನನ್ನು ಶ್ರೀರಾಂಪುರದಲ್ಲಿ ಪತ್ತೆ ಹಚ್ಚಿದ್ದರು. ವಿಚಾರಣೆ ನಡೆಸಿದಾಗ, ‘ಆ ಮಹಿಳೆಯರು ನನಗೆ ಉಗ್ರರಂತೆ ಕಂಡು ಬಂದರು. ಅದಕ್ಕೆ 100ಗೆ ಕರೆ ಮಾಡಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ಕರೆ ಮಾಡುವಂತೆ ನೀವೇ ಹೇಳಿದ್ದೀರಲ್ಲಾ’ ಎಂದು ಪ್ರತಿಕ್ರಿಯಿಸಿದ್ದ.

ಸ್ವಲ್ಪ ಸಮಯದಲ್ಲೇ ಠಾಣೆಗೆ ತೆರಳಿದ ಆತನ ತಂದೆ, ‘ಪತ್ನಿ ಬಿಟ್ಟು ಹೋದ ನಂತರ ಮಗ ಖಿನ್ನತೆಗೆ ಒಳಗಾಗಿದ್ದಾನೆ. ಮಹಿಳೆಯರನ್ನು ಕಂಡರೆ ಅವನಿಗೆ ಆಗುವುದಿಲ್ಲ. ಅದೇ ಕಾರಣಕ್ಕೆ ಹಾಗೆ ಮಾಡಿರಬಹುದು’ ಎಂದಿದ್ದಾರೆ. ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ತೊಂದರೆ ಕೊಡಲು ಯತ್ನಿಸಿದ್ದ ಕಾರಣಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

‘ಬಂಧಿತನ ಹೆಸರು ವಿ.ಸುನೀಲ್ ಕುಮಾರ್ (32). ಪೋಷಕರ ಜತೆ ಪಟ್ಟೇಗಾರಪಾಳ್ಯದಲ್ಲಿ ನೆಲೆಸಿದ್ದ. ಪತ್ನಿ ತೊರೆದ ಬಳಿಕ ಆತ ಖಿನ್ನತೆಗೆ ಒಳಗಾಗಿರಬಹುದು. ಹಾಗಂತ, ಬೇರೆ ಮಹಿಳೆಯರ ವಿರುದ್ಧ ಪಿತೂರಿ ನಡೆಸುವುದು ಎಷ್ಟು ಸರಿ? ಹೀಗಾಗಿ, ಮಹಿಳೆಯರ ವಿರುದ್ಧ ಕೆಟ್ಟದಾಗಿ ಮಾತನಾಡಿದ (ಐಪಿಸಿ 505), ಬೆದರಿಕೆ ಕರೆ ಮಾಡಿ ಭಯ ಹುಟ್ಟಿಸಿದ (507), ಸಾರ್ವಜನಿಕ ಸ್ವಾಸ್ಥ್ಯ ಕದಡಿದ (268, 290) ಆರೋಪಗಳಡಿ ಎಫ್‌ಐಆರ್ ದಾಖಲಿಸಿ, ನ್ಯಾಯಾಧೀಶರ ಸೂಚನೆಯಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.