ADVERTISEMENT

‘ಸಾಹಿತ್ಯ ಅಧ್ಯಯನದಿಂದ ಸೂಕ್ಷ್ಮ ಸಂವೇದನೆ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2016, 20:03 IST
Last Updated 17 ಸೆಪ್ಟೆಂಬರ್ 2016, 20:03 IST
ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಶೂದ್ರ ಶ್ರೀನಿವಾಸ್ ಅವರು ‘ಸೇವಾ ಸೂರ್ಯ’ ಪ್ರಶಸ್ತಿ  ಪ್ರದಾನ ಮಾಡಿದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾಯಣ್ಣ, ವತ್ಸಲಾ ಮೋಹನ್‌, ಲೇಖಕ ಉದಯ ಧರ್ಮಸ್ಥಳ, ವಿಜಯಾ ಸುಬ್ಬರಾಜ್‌ ಚಿತ್ರದಲ್ಲಿದ್ದಾರೆ     –ಪ್ರಜಾವಾಣಿ ಚಿತ್ರ
ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಶೂದ್ರ ಶ್ರೀನಿವಾಸ್ ಅವರು ‘ಸೇವಾ ಸೂರ್ಯ’ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾಯಣ್ಣ, ವತ್ಸಲಾ ಮೋಹನ್‌, ಲೇಖಕ ಉದಯ ಧರ್ಮಸ್ಥಳ, ವಿಜಯಾ ಸುಬ್ಬರಾಜ್‌ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿದ್ಯಾರ್ಥಿಗಳು ಸಾಹಿತ್ಯದ ಮೂಲ ಸ್ವರೂಪ ಅರ್ಥೈಸಿಕೊಳ್ಳಬೇಕು. ಯಾವುದೇ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಸೂಕ್ಷ್ಮ ಸಂವೇದಿ ಮನಸ್ಸು ವಿಸ್ತಾರಗೊಳ್ಳುತ್ತದೆ’ ಎಂದು ಸಾಹಿತಿ ಶೂದ್ರ ಶ್ರೀನಿವಾಸ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಬಸವನಗುಡಿ ಕ್ಷೇತ್ರ ಘಟಕ ಮತ್ತು ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಬಸವನಗುಡಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಭಾದ್ರಪದ ಕವಿತೆಗಳ ವಾಚನ’ ಕಾರ್ಯಕ್ರಮದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ‘ಸೇವಾ ಸೂರ್ಯ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಹಿಂದಿನ ಕಾಲಘಟ್ಟದ ಕಥೆ, ಕವನ ಮತ್ತು ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಪ್ರಸ್ತುತ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಯಾರಿಗೆ ಕಾವ್ಯದ ಬಗ್ಗೆ ಪ್ರೀತಿ ಇರುವುದಿಲ್ಲವೋ ಅವರು ಉತ್ತಮ ಕವಿತೆಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ’ ಎಂದರು.

‘ಕಾವ್ಯ, ಕಥೆ, ಕಾದಂಬರಿ ರಚನೆಗೆ ಆಳವಾದ ಅಧ್ಯಯನ ಮತ್ತು ಚಿಂತನೆ ಅಗತ್ಯ. ಕನ್ನಡ ಭಾಷಾ ಸಾಹಿತ್ಯದಲ್ಲಿ ಹತ್ತು ಹಲವು ಹೊಸ ಕೃತಿಗಳು ಪ್ರಕಟವಾಗಿವೆ. ಇವುಗಳನ್ನು ಓದಬೇಕು. ಇದರಿಂದ ಹೊಸ ವಿಚಾರಗಳು ತಿಳಿಯುತ್ತವೆ. ರಾಮಾಯಣ, ಮಹಾಭಾರತವನ್ನು ಓದುವುದರಿಂದ ಹೊಸ ಕೃತಿ ರಚನೆಗೆ ಪ್ರೇರಣೆ ಸಿಗಲಿದೆ. ರಾಜಕಾರಣಿಗಳು, ನ್ಯಾಯಾಧೀಶರೂ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ‘ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮಾನತೆ ಹೋಗಲಾಡಿಸಲು ನಮ್ಮ ಕೈಲಾದ ಮಟ್ಟಿಗೆ ಶ್ರಮಿಸಬೇಕು. ಈ ಕೆಲಸಕ್ಕೆ ರಾಜಕಾರಣಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಇದ್ದಾರೆ ಎಂದು ಕೈ ಕಟ್ಟಿ ಕೂರುವುದಲ್ಲ. ಸಮಾಜಕ್ಕೆ ಮಾರಕವಾಗುವ ಯಾವುದೇ ವಿಷಯವಿರಲಿ, ಅದರ ವಿರುದ್ಧ ಹೋರಾಟ ನಡೆಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.