ಬೆಂಗಳೂರು: ‘ಸಾಹಿತ್ಯವು ನನ್ನ ಕೈ ಹಿಡಿಯದೇ ಹೋಗಿದ್ದರೆ ನಾನು ಹುಚ್ಚನಾಗುತ್ತಿದ್ದೆ’ ಎಂದು ಸಾಹಿತಿ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಹೇಳಿದರು. ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ನಾನು ಕೋಪಿಷ್ಟನಾಗಿದ್ದರೂ ಜನರು ನನ್ನನ್ನು ಪ್ರೀತಿಸುತ್ತಾರೆ. ಅದಕ್ಕೆ ಕೃತಜ್ಞನಾಗಿದ್ದೇನೆ. ಸಾತ್ವಿಕ ಕೋಪ ಇಲ್ಲದಿದ್ದರೆ ವ್ಯಕ್ತಿತ್ವ ಪೂರ್ಣವಾಗದು. ಈ ಗುಣ ತಂದೆಯಿಂದ ಬಂದ ಬಳುವಳಿ’ ಎಂದರು.
‘ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರನ್ನಾಗಿ ನನ್ನನ್ನು ನೇಮಿಸಲು ಅಂದಿನ ಶಿಕ್ಷಣ ಇಲಾಖೆಯ ಸಚಿವರಿಗೆ ಇಷ್ಟ ಇರಲಿಲ್ಲ. ಐಎಎಸ್ ಅಧಿಕಾರಿಯನ್ನು ಆ ಸ್ಥಾನದಲ್ಲಿ ಕೂರಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ, ಇದಕ್ಕೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಶಿವಕುಮಾರ ಸ್ವಾಮೀಜಿ ಅವರು ಅಂದಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು’ ಎಂದು ಮೆಲುಕು ಹಾಕಿದರು.
‘ನಿಸ್ಸೀಮ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಸಾಹಿತಿ ಹಂ.ಪ. ನಾಗರಾಜಯ್ಯ, ‘ಸಿದ್ಧಲಿಂಗಯ್ಯ ಅವರ ಬದುಕಿನ ಆಯಾಮ, ಕೃತಿಗಳ ವೈಶಿಷ್ಟ್ಯ, ಕವಿತೆಗಳ ಒಳನೋಟಗಳ ಕುರಿತ ಲೇಖನಗಳನ್ನು ಈ ಗ್ರಂಥ ಒಳಗೊಂಡಿದೆ. ಅವರು ಪ್ರಥಮದರ್ಜೆಯ ಕವಿ ಹಾಗೂ ವಿಮರ್ಶಕ’ ಎಂದು ಶ್ಲಾಘಿಸಿದರು.
‘ಅಸಮಗ್ರ’ ಸಮಗ್ರ ಕಾವ್ಯ ಸಂಪುಟವನ್ನು ಬಿಡುಗಡೆಗೊಳಿಸಿದ ಕವಿ ಸುಮತೀಂದ್ರ ನಾಡಿಗ್ ಮಾತನಾಡಿ, ‘ಸಿದ್ಧಲಿಂಗಯ್ಯ ಅವರು ವೀರಶೈವ ಕಾವ್ಯ ಪರಂಪರೆಯನ್ನು ವಿಸ್ತರಿಸಿದ್ದಾರೆ. ಅಲ್ಲಮ, ಬಸವಣ್ಣ ಸೇರಿದಂತೆ ವಚನಕಾರರ ಬಗ್ಗೆ ಕಾವ್ಯ ರಚಿಸಿದ್ದಾರೆ. ಕನ್ನಡ ಕಾವ್ಯ ಲೋಕದಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ’ ಎಂದು ಬಣ್ಣಿಸಿದರು.
ಆತ್ಮಕಥೆ ‘ನೆನಪಿಗೊಗ್ಗರಣೆ’ ಕೃತಿ ಬಿಡುಗಡೆಗೊಳಿಸಿದ ಸಂಶೋಧಕ ಎಂ. ಚಿದಾನಂದಮೂರ್ತಿ, ‘ಆತ್ಮಕಥೆ ಎಂಬುದು ನಮ್ಮನ್ನು ನಾವೇ ಬೆತ್ತಲುಗೊಳಿಸಿಕೊಳ್ಳುವಂತಹದ್ದು. ಗೊಮ್ಮಟೇಶ್ವರ ಮೂರ್ತಿಯಂತೆ. ಸಿದ್ಧಲಿಂಗಯ್ಯ ಅವರೂ ಗೊಮ್ಮಟನಂತೆ ಎತ್ತರದವರು ಹಾಗೂ ಉನ್ನತಿ ಸಾಧಿಸಿದವರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.