ADVERTISEMENT

ಸಿಎಜಿ ವರದಿ ಶಾಸನಸಭೆಯ ಸ್ವತ್ತು: ಕೃಷ್ಣ ದೀಕ್ಷಿತ್‌

ಬಿ.ಎಸ್‌.ವೈ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2015, 19:27 IST
Last Updated 11 ಸೆಪ್ಟೆಂಬರ್ 2015, 19:27 IST

ಬೆಂಗಳೂರು: ‘ಮಹಾಲೇಖಪಾಲರ (ಸಿಎಜಿ) ವರದಿ ಒಮ್ಮೆ ಸಂಸತ್‌ ಅಥವಾ ವಿಧಾನಸಭೆಯಲ್ಲಿ ಚರ್ಚೆಗೆ ಸ್ವೀಕಾರ ಆದ ಕೂಡಲೇ ಅದು ಶಾಸನಸಭೆಯ ಸ್ವತ್ತು ಎನಿಸಿಕೊಳ್ಳುತ್ತದೆ.  ಶಾಸನಸಭೆಯಲ್ಲಿ ಅದರ  ಮೇಲಿನ ಚರ್ಚೆ ಮುಂದುವರಿದಿರುವ ಸಮಯದಲ್ಲೇ ಅದನ್ನು ಸಾರ್ವಜನಿಕ ಅವಗಾಹನೆಗೆ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸಹಾಯಕ ಸಾಲಿಸಿಟರ್‌ ಕೃಷ್ಣ ಎಸ್‌.ದೀಕ್ಷಿತ್‌ ಹೈಕೋರ್ಟ್‌ಗೆ ತಿಳಿಸಿದರು.

ಸಿಎಜಿ ವರದಿ ಅನುಸಾರ ಸಂಸದ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ಈ ವೇಳೆ ಯಡಿಯೂರಪ್ಪ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಸಿ.ವಿ.ನಾಗೇಶ್‌ ಮತ್ತು ಅಶೋಕ ಹಾರನಹಳ್ಳಿ ಅವರು, ‘ವಾಸ್ತವದಲ್ಲಿ ಸಿಎಜಿ ವರದಿ ಅನುಸಾರ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಿಎಜಿ ಪಾತ್ರ ಏನು ಎಂಬುದನ್ನು ಸಹಾಯಕ ಸಾಲಿಸಿಟರ್‌ ಜನರಲ್‌ ಅವರೇ ವಿವರಿಸುತ್ತಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ದೀಕ್ಷಿತ್‌ ಅವರು, ‘ಈ ಪ್ರಕರಣದಲ್ಲಿ ಕೇಂದ್ರವು ಯಾರ ಪರವೂ ಇಲ್ಲ. ಪ್ರತಿವಾದಿಯೂ ಅಲ್ಲ. ಆದಾಗ್ಯೂ ಇಲ್ಲಿ ಸಿಎಜಿ ಪಾತ್ರದ ಬಗ್ಗೆಯಷ್ಟೇ ನ್ಯಾಯಪೀಠಕ್ಕೆ ವಿವರಣೆ ನೀಡುತ್ತಿದ್ದೇನೆ’ ಎಂದು ಹೇಳಿದರು.

‘ಶಾಸನಬದ್ಧ ಸಂಸ್ಥೆಗಳಾದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ತಮ್ಮ ಆಸ್ತಿಯನ್ನು ಯಾವ ರೀತಿ ಬಳಕೆ ಮಾಡಿವೆ ಎಂಬ ಬಗ್ಗೆ 2014ರ ಮೇ ತಿಂಗಳ ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ. ಈಗಾಗಲೇ ಇದನ್ನು ಶಾಸನಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.

23 ಅಧ್ಯಾಯಗಳನ್ನು ಒಳಗೊಂಡ ಈ ವರದಿಯಲ್ಲಿ ಈಗಾಗಲೇ 5 ಅಧ್ಯಾಯಗಳ ಕುರಿತು ಚರ್ಚೆ ಮುಕ್ತಾಯವಾಗಿದೆ. ಇನ್ನೂ 18 ಅಧ್ಯಾಯಗಳ ಚರ್ಚೆ ನಡೆಯಬೇಕಿದೆ’ ಎಂದರು.

‘ಸಂವಿಧಾನದ 151ನೇ ಅನುಚ್ಛೇದದ ಅನುಸಾರ ಸಿಎಜಿ ವರದಿಯನ್ನು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ನೀಡಲಾಗುತ್ತದೆ’ ಎಂದು ಹೇಳಿದರು.

‘ಈ ವರದಿಯನ್ನು ಸಂಸತ್‌ ಅಥವಾ ವಿಧಾಸಭೆಯಲ್ಲಿ ಮಂಡಿಸಲಾಗುತ್ತದೆ. ಒಮ್ಮೆ ಈ ಕುರಿತು ಶಾಸನಸಭೆಯಲ್ಲಿ ಚರ್ಚೆ ಆರಂಭವಾದ ಮೇಲೆ ಅದನ್ನು ಹೊರಗಿನ ಯಾರಿಗೇ ಆಗಲಿ ಕೊಡಲು ಬರುವುದಿಲ್ಲ.  ಈ ಸಂಬಂಧ ದೆಹಲಿ, ಸಿಕ್ಕಿಂ ಹಾಗೂ ಗುವಾಹಟಿ ಹೈಕೋರ್ಟ್‌ಗಳು ಸಿಎಜಿ ಸ್ವಾಯತ್ತತೆಯ ಬಗ್ಗೆ ಸ್ಪಷ್ಟವಾಗಿ ವಿವರಿಸಿವೆ’ ಎಂದರು. ಪ್ರಕರಣವನ್ನು ಇದೇ 15ಕ್ಕೆ ಮುಂದೂಡಲಾಗಿದೆ.

ಮತ್ತೊಂದು ಅರ್ಜಿ ಅ.1ಕ್ಕೆ ಮುಂದೂಡಿಕೆ
ಬೆಂಗಳೂರು:
ಭೂ ಹಗರಣಕ್ಕೆ ಸಂಬಂಧಿಸಿದಂತೆ  ಮಾಜಿ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ವಿಚಾರಣೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಂಸದ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿದ್ದ ಮತ್ತೊಂದು ಅರ್ಜಿಯ ವಿಚಾರಣೆಯನ್ನು ಅ.1ಕ್ಕೆ ಮುಂದೂಡಲಾಗಿದೆ.

ಈ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮುರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ವಿನೀತ್‌ ಸರಣ್‌ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿತು.

ವಕೀಲ ಸಿರಾಜಿನ್‌ ಬಾಷಾ ಮತ್ತು ಕೆ.ಎನ್‌.ಬಾಲಕೃಷ್ಣ ಅವರ ದೂರಿನ ಅನುಸಾರ ಯಡಿಯೂರಪ್ಪ ವಿರುದ್ಧ ಅಂದಿನ ರಾಜ್ಯಪಾಲರಾಗಿದ್ದ ಭಾರದ್ವಾಜ್‌ ಅವರು 2011ರ ಜನವರಿ 21ರಂದು ವಿಚಾರಣೆಗೆ ಅನುಮತಿ ನೀಡಿದ್ದರು.

***
ಶಾಸನಸಭೆಯಲ್ಲಿ ಚರ್ಚೆಗೆ ಒಳಗಾಗಿರುವ ಸಿಎಜಿ ವರದಿಯನ್ನು ನ್ಯಾಯಾಂಗ, ಲೋಕಾಯುಕ್ತ, ವಿಚಕ್ಷಣಾ ದಳ ಅಥವಾ  ಮತ್ಯಾವುದೇ ಸಂಸ್ಥೆ ಚರ್ಚಿಸುವುದು ಅಸಾಂವಿಧಾನಿಕ.
-ಕೃಷ್ಣ ಎಸ್‌.ದೀಕ್ಷಿತ್‌,

ಸಹಾಯಕ ಸಾಲಿಸಿಟರ್‌ ಜನರಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT