ಬೆಂಗಳೂರು: ಇನ್ಫೊಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ದೇವದಾಸಿಯರ ಕುರಿತು ಬರೆದ ‘ತ್ರೀ ಥೌಸೆಂಡ್ ಸ್ಟಿಚಸ್’ ಪುಸ್ತಕವನ್ನು ಹಿರಿಯ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ಶುಕ್ರವಾರ ಬಿಡುಗಡೆ ಮಾಡಿದರು.
ಈ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನವು ಹೊರತಂದಿದೆ.
ಇದು ಸುಧಾಮೂರ್ತಿ ಅವರ 16ನೇ ಇಂಗ್ಲಿಷ್ ಪುಸ್ತಕ. ಇದರಲ್ಲಿ 11 ಕಥೆಗಳು ಇವೆ.
‘ದೇಶದಾದ್ಯಂತ ಅನೇಕ ಅನಿಷ್ಟ ಪದ್ಧತಿಗಳು ಅಸ್ತಿತ್ವದಲ್ಲಿವೆ. ಅಲ್ಲಿನ ಜನರನ್ನು ಸಂಘಟಿಸಿ, ಅರಿವು ಮೂಡಿಸಬೇಕು. ಅವರು ಅನುಸರಿಸುತ್ತಿರುವ ಪದ್ಧತಿ ಅಥವಾ ಸಂಪ್ರದಾಯ ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಸರ್ಕಾರ ಅವರಿಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸುಧಾಮೂರ್ತಿ ಹೇಳಿದರು.
‘ರಾಯಚೂರು ಜಿಲ್ಲೆಯಲ್ಲಿ 3,000 ಮಹಿಳೆಯರು ದೇವದಾಸಿ ಪದ್ಧತಿಯಿಂದ ಹೊರಬಂದು ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ.
ಅವರ ಮಕ್ಕಳು ವೈದ್ಯ, ಎಂಜಿನಿಯರ್, ಪೊಲೀಸ್ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ನಾನು ಬರೆದ ಪುಸ್ತಕದಿಂದ ಬಂದ ಹಣವನ್ನು ಬೇರೆಯವರ ನೆರವಿಗೆ ಬಳಸುತ್ತೇನೆ. ಕೆಲವರಿಗೆ ಎಷ್ಟೇ ಹಣ, ಸಂಪತ್ತಿರಲಿ ತೃಪ್ತಿಯಾಗುವುದಿಲ್ಲ. ಇನ್ನಷ್ಟು ಬೇಕು ಎಂಬ ಆಸೆ ಬೆಳೆಯುತ್ತಲೇ ಇರುತ್ತದೆ. ನಮ್ಮ ಸುಖಕ್ಕಿಂತ ಬೇರೆಯವರ ಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ಹೇಳಿದರು.
‘ಕನ್ನಡದಲ್ಲಿ ಬರೆದ ಪುಸ್ತಕಗಳನ್ನು ನಾನೇ ಭಾಷಾಂತರ ಮಾಡುತ್ತೇನೆ. ಕನ್ನಡದ ಬರವಣಿಗೆಯಲ್ಲಿ ಇರುವಷ್ಟೇ ಭಾವನೆಗಳ ಆಳ, ಅಗಲ ಇಂಗ್ಲಿಷ್ ಪುಸ್ತಕಗಳಲ್ಲೂ ಇರುತ್ತದೆ ಎಂದು ಭಾವಿಸಿದ್ದೇನೆ’ ಎಂದರು.
‘ನಾನು ಮದುವೆ, ಹುಟ್ಟುಹಬ್ಬದಂತಹ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಆ ಸಮಯವನ್ನು ಬರವಣಿಗೆಗೆ ಮೀಸಲಿಡುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.