ADVERTISEMENT

ಸೂರ್ಯನಾಥ್‌ ಕಾಮತ್‌ ನಿಧನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2015, 19:49 IST
Last Updated 21 ಅಕ್ಟೋಬರ್ 2015, 19:49 IST

ಬೆಂಗಳೂರು: ಇತಿಹಾಸ ತಜ್ಞ ಡಾ. ಯು. ಸೂರ್ಯನಾಥ್‌ ಕಾಮತ್‌ (77) ಅವರು ಬುಧವಾರ ಸಂಜೆ ಬನಶಂಕರಿ 3ನೇ ಹಂತದಲ್ಲಿರುವ ತಮ್ಮ ಮಗಳ ಮನೆಯಲ್ಲಿನಿಧನರಾದರು.

ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಸೂರ್ಯನಾಥ್‌ ಅವರು ಎರಡೂವರೆ ವರ್ಷಗಳಿಂದ ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದರು.

‘ಪ್ರಜಾವಾಣಿ’ಯಲ್ಲಿದ್ದ ಸೂರ್ಯನಾಥ್‌ ಕಾಮತ್
ಬೆಂಗಳೂರು: ಸೂರ್ಯನಾಥ್‌ ಕಾಮತ್‌ ಅವರು 1937ರ ಏಪ್ರಿಲ್‌ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದಿದ್ದರು. ‘ವಿಜಯನಗರ ಕಾಲದ ತುಳುನಾಡು’ ಎಂಬ ಪ್ರೌಢಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದರು.

ಕರ್ನಾಟಕ ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ ಮತ್ತು ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
‘ಕರ್ನಾಟಕ ಸಂಕ್ಷಿಪ್ತ ಇತಿಹಾಸ’ ಕೃತಿಗೆ 1973ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.

ಕರ್ನಾಟಕ ಇತಿಹಾಸ ಅಕಾಡೆಮಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಸೂರ್ಯನಾಥ್‌ ಅವರು ‘ಪ್ರಜಾವಾಣಿ’ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದರು.

ಸೂರ್ಯನಾಥ್ ಅವರ ಪುತ್ರಿ ಪ್ರವಾಸದಲ್ಲಿ ಇರುವುದರಿಂದ  ಅಂತ್ಯಕ್ರಿಯೆಯ ಸಮಯ ಮತ್ತು ದಿನಾಂಕ ನಿಗದಿ ಮಾಡಿಲ್ಲ ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT