ಬೆಂಗಳೂರು: ಸರ್ಜಾಪುರದಲ್ಲಿ ಸ್ಥಳಾಂತರಗೊಳಿಸಿದ್ದ ನಾಲ್ಕು ಮರಗಳಲ್ಲೂ ಮತ್ತೆ ಚಿಗುರು ಕಾಣಿಸಿಕೊಂಡಿದೆ. ಮರದ ಕೊಂಬೆಗಳಲ್ಲಿ ಚಿಗುರಿರುವ ಕೆಂಬಣ್ಣದ ಎಲೆಗಳು, ಈ ಮರಗಳನ್ನು ಉಳಿಸಲು ಶ್ರಮಿಸಿದ ಹಸಿರುಪ್ರೇಮಿಗಳಲ್ಲಿ ಸಾರ್ಥಕ ಭಾವ ಮೂಡಿಸಿವೆ.
ದೊಮ್ಮಸಂದ್ರ–ಅತ್ತಿಬೆಲೆ ರಸ್ತೆ ವಿಸ್ತರಣೆ ಕಾಮಗಾರಿಗಾಗಿ 200ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಇವುಗಳ ಪೈಕಿ ನಾಲ್ಕು ಮರವನ್ನಾದರೂ ಉಳಿಸಿ ತೋರಿಸಬೇಕು ಎಂದು ಸರ್ಜಾಪುರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬ್ಲ್ಯುಎ) ಪಣ ತೊಟ್ಟಿತ್ತು.
ಮರಗಳನ್ನು ಸ್ಥಳಾಂತರಿಸುವ ವಿಜಾರದಲ್ಲಿ ಅನುಭವ ಹೊಂದಿರುವ ಚೆನ್ನೈನ ಜೇಯಮ್ ಲ್ಯಾಂಡ್‌ಸ್ಕೇಪ್ ಆ್ಯಂಡ್ ಗಾರ್ಡನ್ ಕನ್ಸಲ್ಟಂಟ್ಸ್ ಸಂಸ್ಥೆಯ ಬಿ.ಇಳಂಗೊ ಸುಬ್ರಹ್ಮಣಿಯನ್ ಹಾಗೂ ಸಸ್ಯ ವೈದ್ಯ ವಿಜಯ್ ನಿಶಾಂತ್ ಮಾರ್ಗದರ್ಶನದಲ್ಲಿ ಮೂರು ಅರಳಿ ಮರಗಳು ಹಾಗೂ ಒಂದು ಬೇವಿನ ಮರವನ್ನು ಮೇ 13 ಹಾಗೂ 14ರಂದು ಸ್ಥಳಾಂತರ ಮಾಡಲಾಗಿತ್ತು.
ಒಂದು ಅರಳಿ ಮರವನ್ನು ಯಮರೆ ಕೆರೆಯ ದಂಡೆಯಲ್ಲಿ, ಎರಡು ಅರಳಿ ಮರಗಳು ಹಾಗೂ ಒಂದು ಬೇವಿನ ಮರವನ್ನು ಇನ್ವೆಂಚರ್ ಅಕಾಡೆಮಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಗಣದಲ್ಲಿ ಮರು ನಾಟಿ ಮಾಡಲಾಗಿತ್ತು.
ಮರಗಳನ್ನು ನಾಟಿ ಮಾಡುವ ಕಾರ್ಯಾಚರಣೆಗೆ ಮೂರು ದಿನಗಳು ತಗಲಿದ್ದವು. ನೆಟ್ಟ ಮರಗಳು ಮತ್ತೆ ಚಿಗುರೊಡೆಯುವುದನ್ನು ಸ್ಥಳೀಯರು ಕಾತರದಿಂದ ಎದುರು ನೋಡುತ್ತಿದ್ದರು.
ನಿರಂತರ ಆರೈಕೆ: ‘ಮರಗಳನ್ನು ಸ್ಥಳಾಂತರ ಮಾಡಿ ಮರುನಾಟಿ ಮಾಡಿದ ಬಳಿಕ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ಈ ಮರಗಳ ತೊಗಟೆಗೆ ಗಾಯವಾಗಿರುವ ಕಡೆ ಹಚ್ಚಲು ಇಳಂಗೊ ಅವರು ಔಷಧ ಕೊಟ್ಟಿದ್ದರು. ಅವುಗಳ ಬುಡಕ್ಕೆ ನೀರು ಹಾಕಿದರೆ ಸಾಲದು. ಮರು ನಾಟಿ ಮಾಡಿದ ಬಳಿಕ ಕಾಂಡದ ಮೇಲೂ ಔಷಧ ಬೆರೆಸಿದ ನೀರನ್ನು ನಿತ್ಯ ಸಿಂಪಡಿಸಿದ್ದೇವೆ’ ಎಂದು ಸರ್ಜಾಪುರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಗದೀಶ ಕೊಟ್ಟೂರು ಶೆಟ್ಟರ್ ಅವರು ವಿವರಿಸಿದರು.
ಮೇಣದ ಲೇಪನ– ಜೀವಾಮೃತ ಸಿಂಪಡಣೆ: ‘ಸಸ್ಯವೈದ್ಯ ವಿಜಯ್ ನಿಶಾಂತ್ ಅವರು ಸಿದ್ಧಪಡಿಸಿ ಕೊಟ್ಟಿದ್ದ ಜೀವಾಮೃತವನ್ನು ಮರು ನಾಟಿ ಮಾಡಿದ ಮರಗಳಿಗೆ 15 ದಿನಗಳಿಗೊಮ್ಮೆ ಉಣಿಸುತ್ತಿದ್ದೆವು. ಮರಕ್ಕೆ ಗಾಯವಾಗಿರುವ ಕಡೆ ಔಷಧಯುಕ್ತ ಮೇಣದ ಲೇಪನ ಮಾಡಿದ್ದೇವೆ’ ಎಂದು ತಿಳಿಸಿದರು.
‘ಮರಗಳ ಸ್ಥಳಾಂತರಕ್ಕೆ ಒಟ್ಟು ₹ 3 ಲಕ್ಷ ವೆಚ್ಚವಾಗಿದೆ. ಇದಕ್ಕೆ ಕ್ರೌಡ್ ಫಂಡಿಂಗ್‌ಗೆ ಮೂಲಕ ₹ 2.85 ಲಕ್ಷ ಸಂಗ್ರಹಿಸಿದ್ದೆವು. ಜನರಿಂದ ನೇರವಾಗಿ ದೇಣಿಗೆ ಪಡೆಯುವ ಮೂಲಕ ₹19,500 ಸಂಗ್ರಹವಾಗಿತ್ತು’ ಎಂದು ಅವರು ತಿಳಿಸಿದರು.
‘ಕೆಲವರು ಸ್ಥಳಾಂತರಿಸಿದ ಮರಗಳನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆ. ಕಡಿಯಲು ಮುಂದಾಗಿದ್ದ ಮರಗಳನ್ನು ಉಳಿಸಿದ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಾರೆ. ನಮ್ಮ ಈ ಪ್ರಯತ್ನ ಅನೇಕರಿಗೆ ಪ್ರೇರಣೆ ಆಗಿದೆ ಎಂಬುದು ನಮಗೆ ಸಮಾಧಾನ’ ಎನ್ನುತ್ತಾರೆ ಶೆಟ್ಟರ್.
‘ಬೇವಿನ ಮರವೂ ಚಿಗುರೊಡೆಯಿತು’
‘ಅರಳಿ ಮರಗಳು ಚಿಗುರೊಡೆಯುತ್ತವೆ ಎಂಬ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿತ್ತು. ಆದರೆ, ಬೇವಿನ ಮರ ಮತ್ತೆ ಜೀವ ಪಡೆಯುವ ಬಗ್ಗೆ ಸಂದೇಹವಿತ್ತು. ಇದನ್ನು ಸ್ಥಳಾಂತರಿಸುವಾಗ ಅನೇಕ ಸಮಸ್ಯೆಗಳು ಎದುರಾಗಿದ್ದವು. ಮೂರು ದಿನಗಳ ಹಿಂದೆ ಈ ಮರವೂ ಚಿಗುರೊಡೆದಿದೆ’ ಎಂದು ಜಗದೀಶ ತಿಳಿಸಿದರು.
‘ಸ್ಥಳಾಂತರಕ್ಕೆ ಮುನ್ನ ಅದರ ಬುಡದ ಮಣ್ಣನ್ನು ಉಳಿಸಿಕೊಂಡು ಅದಕ್ಕೆ ಚೀಲಗಳಿಂದ ಸುತ್ತಿಡುತ್ತೇವೆ. ಬೇವಿನ ಮರವನ್ನು ಸ್ಥಳಾಂತರಿರುವಾಗ ಈ ಕಟ್ಟು ಬಿಚ್ಚಿತ್ತು. ಕ್ರೇನ್‌ನಿಂದ ಮರವನ್ನು ಗುಂಡಿಗೆ ಇಳಿಸುವಾಗ ಏಕಾಏಕಿ ಬಿದ್ದ ಕಾರಣ ಮರದ ತಾಯಿಬೇರಿಗೂ ಏಟಾಗಿತ್ತು’ ಎಂದರು. ‘ಈ ಮರವನ್ನು ಸ್ಥಳಾಂತರಿಸುವುದಕ್ಕೆ ತಜ್ಞರು ಶಿಫಾರಸು ಮಾಡಿರಲಿಲ್ಲ. ಅರಳಿ ಮರ ಹಾಗೂ ಬೇವಿನ ಮರ ಶಿವ ಪಾರ್ವತಿ ಇದ್ದಂತೆ ಎಂಬುದು ಸ್ಥಳೀಯರ ನಂಬಿಕೆ. ಹಾಗಾಗಿ ಅವರ ಒತ್ತಾಯದ ಮೇರೆಗೆ ಅರಳಿ ಮರದ ಜೊತೆ ಬೇವಿನ ಮರವನ್ನು ಸ್ಥಳಾಂತರಿಸಿದ್ದೆವು. ಅದನ್ನು ಉಳಿಸಿಕೊಳ್ಳಲು ಹೆಚ್ಚಿನ ಉಪಚಾರ ಮಾಡಬೇಕಾಯಿತು’ ಎಂದು ಅವರು ಸ್ಮರಿಸಿದರು.
ಮರಗಳ ಸ್ಥಳಾಂತರಕ್ಕೆ ಸರ್ಕಾರ ಕೈಚೆಲ್ಲಿತ್ತು. ಕಡಿಯುವ ಬದಲು ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟ ತೃಪ್ತಿ ನಮಗಿದೆ.
–ಜಗದೀಶ ಕೊಟ್ಟೂರು ಶೆಟ್ಟರ್
ಸರ್ಜಾಪುರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.